ಮೈಸೂರು: ಚಾಮುಂಡೇಶ್ವರಿ ತಾಯಿಗೆ ಸಿಎಂ ಸಿದ್ದರಾಮಯ್ಯ ಪುಷ್ಪಾರ್ಚನೆ ಮಾಡುವ ಮೂಲಕ ವಿಶ್ವ ವಿಖ್ಯಾತ ಮೈಸೂರು ದಸರಾದ ಜಂಬೂ ಸವಾರಿಗೆ ಚಾಲನೆ ನೀಡಿದ್ದಾರೆ. ಈ ವೇಳೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ. ಮಹದೇವಪ್ಪ, ಸಚಿವ ಶಿವರಾಜ್ ತಂಗಡಗಿ, ಮೈಸೂರು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಪಸ್ಥಿತರಿದ್ದರು.
750 ಕೆ.ಜಿ.ತೂಕದ ಅಂಬಾರಿ ಒಳಗೆ ಪ್ರತಿಷ್ಠಾಪಿಸಲಾಗಿರುವ ಚಾಮುಂಡೇಶ್ವರಿ ತಾಯಿಯನ್ನು ಹೊತ್ತ ಕ್ಯಾಪ್ಟನ್ ಅಭಿಮನ್ಯುಗೆ ಕುಮ್ಕಿ ಆನೆಗಳಾದ ಲಕ್ಷ್ಮೀ ಮತ್ತು ಹಿರಣ್ಯ ಸಾಥ್ ನೀಡಿದ್ದು, ನಿಶಾನೆ ಆನೆಯಾಗಿ ಧನಂಜಯ ಹಾಗೂ ನೌಪಥ್ ಆನೆಯಾಗಿ ಗೋಪಿ, ಸಾಲಾನೆಯಾಗಿ ಏಕಲವ್ಯ , ಪ್ರಶಾಂತ್ , ಮಹೇಂದ್ರ , ಸುಗೀವಾ, ಕಂಜನ್, ಭೀಮಾ ಬನ್ನಿಮಂಟಪದವರೆಗೆ ಸುಮಾರು 5 ಕಿ.ಮೀಗೂ ಹೆಚ್ಚು ದೂರ ಹೆಜ್ಜೆ ಹಾಕುತ್ತಿವೆ. ಜಂಬೂ ಸವಾರಿಯ ಮುಂದೆ ಅಶ್ವದಳ , ಪೊಲೀಸ್ ವಾದ್ಯ ವೃಂದ ಮುಂದೆ ಸಾಗುತ್ತಿವೆ.
ತಡವಾಗಿ ನೆರವೇರಿದ ಪುಷ್ಪಾರ್ಚನೆ:ಸಂಜೆ 4 ರಿಂದ 4.30 ರ ಶುಭ ಕುಂಭ ಲಗ್ನದಲ್ಲಿ ಜಂಬೂಸವಾರಿಗೆ ಪುಷ್ಪಾರ್ಚನೆ ಮಾಡಬೇಕಿತ್ತು. ಆದರೆ 5 ಗಂಟೆ 2 ನಿಮಿಷಕ್ಕೆ ತಡವಾಗಿ ಪುಷ್ಪಾರ್ಚನೆ ಮಾಡಲಾಯಿತು.