ಕರ್ನಾಟಕ

karnataka

ETV Bharat / state

ರಾಷ್ಟ್ರಪತಿಯನ್ನು ಏಕವಚನದಲ್ಲಿ ಸಂಬೋಧಿಸಿದ್ದಕ್ಕೆ ಸಿಎಂ ಸಿದ್ದರಾಮಯ್ಯ ವಿಷಾದ

ಚಿತ್ರದುರ್ಗದಲ್ಲಿ ಭಾನುವಾರ ನಡೆದ ಶೋಷಿತ ವರ್ಗಗಳ ಸಮಾವೇಶದಲ್ಲಿ ಪಾಲ್ಗೊಂಡು ಭಾಷಣ ಮಾಡುತ್ತಿದ್ದಾಗ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಏಕವಚನದಲ್ಲಿ ಸಂಬೋಧಿಸಿದ್ದಕ್ಕೆ ಸಿಎಂ ಸಿದ್ದರಾಮಯ್ಯ ವಿಷಾದ ವ್ಯಕ್ತಪಡಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ

By ETV Bharat Karnataka Team

Published : Jan 29, 2024, 6:44 AM IST

ಬೆಂಗಳೂರು:ನಾನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಏಕವಚನದಲ್ಲಿ‌ ಸಂಬೋಧಿಸಬಾರದಿತ್ತು. ಅಚಾತುರ್ಯದಿಂದ ಆಗಿರುವ ಪ್ರಮಾದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಸಾಮಾಜಿಕ ಜಾಲತಾಣ 'ಎಕ್ಸ್' ಪೋಸ್ಟ್ ಮೂಲಕ ಸಿಎಂ ಸಿದ್ದರಾಮಯ್ಯ ವಿಷಾದಿಸಿದ್ದಾರೆ.

ಚಿತ್ರದುರ್ಗದಲ್ಲಿ ನಡೆದ ಶೋಷಿತ ವರ್ಗಗಳ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಉಲ್ಲೇಖಿಸಿ ಏಕವಚನ ಬಳಸಿದ್ದರು. ಇದನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್​.ಡಿ.ಕುಮಾರಸ್ವಾಮಿ ಟೀಕಿಸಿ ವಾಗ್ದಾಳಿ ನಡೆಸಿದ್ದರು.

ದಲಿತ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸಂಸತ್ ಭವನ ಉದ್ಘಾಟನೆಗೆ ಆಹ್ವಾನ ನೀಡದೆ ಬಿಜೆಪಿ ನಾಯಕರು ಅವಮಾನಿಸಿರುವುದು ನನಗೆ ತೀವ್ರ ನೋವು ಉಂಟುಮಾಡಿತ್ತು. ಅಷ್ಟೇ ಅಲ್ಲ, ನನ್ನಲ್ಲಿ ಆಕ್ರೋಶ ಹುಟ್ಟಿಸಿತ್ತು ಎಂದು ತಿಳಿಸಿದ್ದಾರೆ.

ಶೋಷಿತರ ಜಾಗೃತಿ ಸಮಾವೇಶದಲ್ಲಿ ಸ್ವಲ್ಪ ಭಾವುಕನಾಗಿ ಈ ಆಕ್ರೋಶ ಹೊರಹಾಕುವ ಭರದಲ್ಲಿ ಬಾಯ್ತಪ್ಪಿನಿಂದ ರಾಷ್ಟ್ರಪತಿಗಳನ್ನು ಏಕವಚನದಲ್ಲಿ‌ ಸಂಭೋದಿಸಿದೆ. ಗ್ರಾಮೀಣ ಪ್ರದೇಶದಿಂದ ಬಂದ ನನ್ನಂತಹವರು ಅಪ್ಪ-ಅಮ್ಮ ಸೇರಿದಂತೆ ಹಿರಿಯರನ್ನು ಕೂಡಾ ಏಕವಚನದಲ್ಲಿ ಸಂಭೋದಿಸುವುದು ರೂಢಿ. ಗೌರವಾನ್ವಿತ ರಾಷ್ಟ್ರಪತಿಗಳು ನನ್ನಂತೆಯೇ ಶೋಷಿತ ಸಮಾಜದಿಂದ ಬಂದವರು, ಅವರ ಬಗ್ಗೆ ಅಪಾರ ಗೌರವವಿದೆ ಎಂದಿದ್ದಾರೆ.

ಹೆಚ್​ಡಿಕೆ ಆಕ್ರೋಶ:ಇದಕ್ಕೂ ಮುನ್ನ ಹೆಚ್​.ಡಿ.ಕುಮಾರಸ್ವಾಮಿ ಅವರು ಸಿಎಂ ಮಾತನಾಡಿದ ವಿಡಿಯೋ ಅನ್ನು 'ಎಕ್ಸ್'​​ ಪೋಸ್ಟ್​ ಮಾಡುವ ಮೂಲಕ ಕಿಡಿಕಾರಿದ್ದರು. ಗೌರವಾನ್ವಿತ ರಾಷ್ಟ್ರಪತಿಗಳು, ದೇಶದ ಪ್ರಥಮ ಪ್ರಜೆಯಾಗಿರುವ ಶ್ರೀಮತಿ ದ್ರೌಪದಿ ಮುರ್ಮು ಅವರನ್ನು ಏಕವಚನದಲ್ಲಿ ತುಚ್ಛವಾಗಿ ಸಂಬೋಧಿಸಿದ ಕೀಳು, ವಿಕೃತ, ಹೀನ ನಾಲಗೆಯ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೂಡಲೇ ವಜಾ ಮಾಡಬೇಕು ಎಂದು ಒತ್ತಾಯಿಸಿದ್ದರು.

ಇದನ್ನೂ ಓದಿ:ನಿರ್ದಿಷ್ಟ ಧರ್ಮ, ಸಮುದಾಯದ ವಿರುದ್ಧವಿಲ್ಲ, ನಮ್ಮದು ಸಂವಿಧಾನ ಪರವಾದ ನಿಲುವು: ಮಂಡ್ಯ ಘಟನೆ ಬಗ್ಗೆ ಸಿಎಂ ಪೋಸ್ಟ್

ABOUT THE AUTHOR

...view details