ಬೆಂಗಳೂರು:''ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ದಾಖಲೆಯ 15ನೇ ಬಜೆಟ್ ಅವೈಜ್ಞಾನಿಕವಾಗಿದೆ. ರಾಜ್ಯದಲ್ಲಿ ಮೂಲಭೂತ ಸೌಲಭ್ಯಕ್ಕೆ, ಕೈಗಾರಿಕೆಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಲಾಗಿಲ್ಲ. ಇದರ ಪರಿಣಾಮ ಅಭಿವೃದ್ಧಿ ಕುಂಠಿತವಾಗುತ್ತದೆ. ಬಂಡವಾಳ ಆಕರ್ಷಿಸುವುದು ಕಷ್ಟವಾಗುತ್ತದೆ. ಉದ್ಯೋಗ ಸೃಷ್ಟಿ ಸಾಧ್ಯವಾಗುವುದಿಲ್ಲ'' ಎಂದು ಎಫ್ಕೆಸಿಸಿಐನ ಮಾಜಿ ಅಧ್ಯಕ್ಷ, ಉದ್ಯಮಿ ಆರ್. ಶಿವಕುಮಾರ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
''ಗ್ಯಾರಂಟಿ ಯೋಜನೆಗಳಿಗೆ ಹೆಚ್ಚಿನ ಅನುದಾನ ಹಂಚಿಕೆ ಮಾಡುವ ಮತ್ತು ಜನಪರ ಯೋಜನೆಗಳಿಗೆ ಹಣ ಮೀಸಲಿಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತಮ ಬಜೆಟ್ ಮಂಡಿಸುವ ಪ್ರಯತ್ನ ಮಾಡಿದ್ದಾರೆ. ಆದರೆ, ಮುಂಗಡಪತ್ರವು ಒಟ್ಟಾರೆಯಾಗಿ ಅವೈಜ್ಞಾನಿಕವಾಗಿದೆ'' ಎಂದು ಅವರು ಈ ಟಿವಿ ಭಾರತಕ್ಕೆ ನೀಡಿದ ಸಂದರ್ಶನದಲ್ಲಿ ಶಿವಕುಮಾರ್ ತಮ್ಮದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮೂಲ ಸೌಲಭ್ಯಗಳಿಲ್ಲದೇ ಹೂಡಿಕೆದಾರರು ಬರುವುದಿಲ್ಲ:''ಬಜೆಟ್ನಲ್ಲಿ ಕೈಗಾರಿಕೆ ವಸಾಹತು ಸ್ಥಾಪನೆಗೆ ಬೇಡಿಕೆ ಸಲ್ಲಿಸಲಾಗಿತ್ತು. 18 ಕೈಗಾರಿಕೆ ಎಸ್ಟೇಟ್ ನಿರ್ಮಾಣದ ಘೋಷಣೆ ನಿರೀಕ್ಷಿಸಲಾಗಿತ್ತು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೈಗಾರಿಕೆ ವಸಾಹತು ಪ್ರಾರಂಭಕ್ಕೆ ಯಾವುದೇ ಯೋಜನೆ ನೀಡಿಲ್ಲ. ಇದರಿಂದ ಕೈಗಾರಿಕೆಗಳಿಗೆ ಬಂಡವಾಳ ಆಕರ್ಷಣೆ ಹೇಗೆ ಸಾದ್ಯವಾಗುತ್ತದೆ ಎಂದು ಅವರು ಪ್ರಶ್ನಿಸಿದ್ದಾರೆ. ಅಲ್ಲದೇ ಮೂಲಭೂತ ಸೌಲಭ್ಯಗಳಿಲ್ಲದೇ ಬಂಡವಾಳ ಹೂಡಿಕೆದಾರರು ಬರುವುದಿಲ್ಲ'' ಎಂದು ಆತಂಕ ಕೂಡಾ ವ್ಯಕ್ತಪಡಿಸಿದ್ದಾರೆ.