ಕರ್ನಾಟಕ

karnataka

ETV Bharat / state

ಮುಡಾ ಅರ್ಜಿ ವಿಚಾರಣೆ ಒತ್ತಡದ ನಡುವೆಯೂ ಸಿಎಂ ಸಿದ್ದರಾಮಯ್ಯ ಬೆಂಗಳೂರು ನಗರ ಪ್ರದಕ್ಷಿಣೆ - Bengaluru Road Pothole - BENGALURU ROAD POTHOLE

ಸಿಎಂ ವಿರುದ್ಧ ಕೇಳಿ ಬಂದಿರುವ ಮುಡಾ ಹಗರಣದ ಅರ್ಜಿಯ ವಿಚಾರಣೆ ಇಂದು ಹೈಕೋರ್ಟ್​ನಲ್ಲಿ ನಡೆಯಿತು. ಇದರ ನಡುವೆಯೂ ಸಿದ್ದರಾಮಯ್ಯ ಅವರು ನಗರದಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ವೀಕ್ಷಿಸಿದರು.

ಸಿಎಂ ಸಿದ್ದರಾಮಯ್ಯ ಬೆಂಗಳೂರು ನಗರ ಪ್ರದಕ್ಷಿಣೆ
ಸಿಎಂ ಸಿದ್ದರಾಮಯ್ಯ ಬೆಂಗಳೂರು ನಗರ ಪ್ರದಕ್ಷಿಣೆ (ETV Bharat)

By ETV Bharat Karnataka Team

Published : Sep 12, 2024, 9:15 PM IST

ಬೆಂಗಳೂರು:ಮುಡಾ ಹಗರಣ ಆರೋಪದ ಅರ್ಜಿ ವಿಚಾರಣೆಯ ನಡುವೆಯೂ ಸಿಎಂ ಸಿದ್ಧರಾಮಯ್ಯ ಅವರು ಬೆಂಗಳೂರು ನಗರದ ರಸ್ತೆ ಗುಂಡಿಗಳ ನಿರ್ಮೂಲನೆ, ರಸ್ತೆ ಅಭಿವೃದ್ಧಿ ಮತ್ತು ಇಲಾಖೆಗಳಿಂದ ಕೈಗೊಳ್ಳಲಾಗಿರುವ ಮೂಲಭೂತ ಸೌಕರ್ಯ ಕಾಮಗಾರಿಗಳನ್ನು ಗುರುವಾರ ವೀಕ್ಷಿಸಿದರು.

ಹೆಬ್ಬಾಳದ ಬಳಿ ಬಿಡಿಎ ಮೇಲ್ಸೇತುವೆ ಕಾಮಗಾರಿ, ಹೊರವರ್ತುಲ ರಸ್ತೆಯ ಕರಿಯಣ್ಣನ ಪಾಳ್ಯದ ಬಳಿ ಸರ್ವೀಸ್ ರಸ್ತೆಯಲ್ಲಿ ಮತ್ತು ಹೆಣ್ಣೂರು ಜಂಕ್ಷನ್ ಬಳಿ‌ ಡಾಂಬರೀಕರಣ ಪರಿಶೀಲನೆ ನಡೆಸಿದರು. ನಂತರ ಕೆ.ಆರ್.ಪುರ ರೈಲ್ವೆ ನಿಲ್ದಾಣದ ಬಳಿ ಮೆಟ್ರೋ ಕಾಮಗಾರಿ ನಕ್ಷೆಗಳ ವೀಕ್ಷಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿದರು. ನಂತರ ಮೆಟ್ರೋ ಮುಖಾಂತರ ವಿಧಾನಸೌಧಕ್ಕೆ ಪಯಣಿಸಿದರು. ಸಿಟಿ ರೌಂಡ್ಸ್ ವೇಳೆ ಸಚಿವ ರಾಮಲಿಂಗಾರೆಡ್ಡಿ, ಕೆ.ಜೆ.ಜಾರ್ಜ್, ಭೈರತಿ ಸುರೇಶ್, ಶಾಸಕರಾದ ರಿಜ್ವಾನ್ ಅರ್ಷದ್, ಕೃಷ್ಣಪ್ಪ, ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಸೇರಿದಂತೆ ಹಲವರು ಇದ್ದರು.

ಗುಂಡಿ ಮುಚ್ಚಲು ಬ್ಯಾಚ್ ಮಿಕ್ಸ್ ಘಟಕ:ಪರಿವೀಕ್ಷಣೆಯ ಬಳಿಕ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಿಎಂ, ನಗರದ ರಸ್ತೆಗಳ ತಳಭಾಗದಲ್ಲಿ ಸಾಂಪ್ರದಾಯಿಕವಾಗಿ ಬೆಸ್ಕಾಂ ಕೇಬಲ್, ನೀರು ಸರಬರಾಜು ಮತ್ತು ಒಳಚರಂಡಿ ಕೊಳವೆಗಳು, ಗೇಲ್‌ಗ್ಯಾಸ್‌ನ ಕೊಳವೆಗಳು, ಕೆಪಿಟಿಸಿಎಲ್ ಸಂಸ್ಥೆಯ ಬೃಹತ್ ಮತ್ತು ಹೆಚ್ಚಿನ ಸಾಮರ್ಥ್ಯದ ಕೇಬಲ್‌ಗಳ ಅಳವಡಿಕೆ ಮತ್ತು ಒಎಫ್‌ಸಿ ಕೇಬಲ್‌ಗಳ ಅಳವಡಿಕೆಯಿಂದ ರಸ್ತೆಯ ಮೇಲ್ಮೈ ಶಿಥಿಲಗೊಂಡು ರಸ್ತೆಗಳ ಮೇಲೆ ಗುಂಡಿಗಳು ಬೀಳುತ್ತಿವೆ. ಇವುಗಳ ದುರಸ್ತಿಗಾಗಿ ಪಾಲಿಕೆಯಿಂದ ಬಿಬಿಎಂಪಿ ಬ್ಯಾಚ್ ಮಿಕ್ಸ್ ಘಟಕವನ್ನು ಸ್ಥಾಪಿಸಲಾಗಿದ್ದು, ಗುಂಡಿಗಳನ್ನು ಮುಚ್ಚಲಾಗುತ್ತಿದೆ ಎಂದಿದ್ದಾರೆ.

ಪ್ರತಿ ವಾರ್ಡ್​ಗೆ 15 ಲಕ್ಷ ರೂಪಾಯಿ ರಸ್ತೆ ಗುಂಡಿ ಮುಚ್ಚಲು ಅನುದಾನ ಬಿಡುಗಡೆ ಮಾಡಲಾಗಿದೆ. ಮುಖ್ಯವಾಗಿ ಮಳೆಗಾಲದಲ್ಲಿ ಹೆಚ್ಚಾಗಿ ರಸ್ತೆ ಗುಂಡಿಗಳು ಬೀಳುತ್ತವೆ. ಈ ವೇಳೆ ರಸ್ತೆ ಗುಂಡಿ ತಗ್ಗಿಸಲು ತಂಪಾದ ಡಾಂಬರ್​​ ಮಿಶ್ರಣ ಪದ್ಧತಿಯನ್ನು ತಯಾರಿಸುವ ಘಟಕವನ್ನು ಬಿಬಿಎಂಪಿ ವತಿಯಿಂದಲೇ ಸ್ಥಾಪಿಸಲಾಗಿದೆ. ಇನ್ನು ರಸ್ತೆ ಅಗೆತದಿಂದ ಆಗುವ ರಸ್ತೆ ಗುಂಡಿಗಳನ್ನು ಆಯಾ ಸಂಸ್ಥೆಗಳೇ ಮುಚ್ಚುವಂತೆ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.

ಬೆಂಗಳೂರು ಜಲಮಂಡಳಿ ಸೇರಿದಂತೆ ಇತರೆ ಇಲಾಖೆಗಳೊಂದಿಗೆ ಸಮನ್ವಯತೆಯನ್ನು ಸಾಧಿಸಲಾಗಿದ್ದು, ರಸ್ತೆ ಅಗೆಯುವ/ರಸ್ತೆ ದುರಸ್ಥಿಗೊಳಿಸುವ ಪ್ರಕ್ರಿಯೆಯನ್ನು ಕ್ರಮಬದ್ಧಗೊಳಿಸಲಾಗುತ್ತಿದೆ. ರಸ್ತೆ ಅಗೆತವನ್ನು ತಡೆಗಟ್ಟಲು ಪ್ರಮುಖ ರಸ್ತೆಗಳಲ್ಲಿ ರಸ್ತೆ ಅಭಿವೃದ್ಧಿಯ ಜೊತೆಗೆ ಡಕ್ಟ್​​ಗಳ ನಿರ್ಮಾಣವನ್ನು ಕೈಗೊಂಡಿರುವ ಹಿನ್ನೆಲೆಯಲ್ಲಿ ರಸ್ತೆ ಗುಂಡಿಗಳ ಉದ್ಭವಿಕೆಗೆ ಕಡಿವಾಣ ಹಾಕಲಾಗುತ್ತಿದೆ. ಗುಂಡಿಗಳ ದುರಸ್ತಿಯ ಮೇಲೆ ನಿಗಾ ಇಡಲು 'ರಸ್ತೆ ಗುಂಡಿ ಗಮನ' ಎಂಬ ಮೊಬೈಲ್ ಆಪ್‌ ಅನ್ನು ರಚಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಕೈಗೊಂಡಿರುವ ಪರಿಹಾರ ಕ್ರಮಗಳ ಮಾಹಿತಿ:ನಗರದಲ್ಲಿ ಒಟ್ಟು 1611 ಕಿ.ಮೀ ಆರ್ಟಿರಿಯಲ್ ಮತ್ತು ಸಬ್ ಆರ್ಟಿರಿಯಲ್ ರಸ್ತೆಗಳಿದ್ದು, 459 ಕಿ.ಮೀ. ಉದ್ದದ ರಸ್ತೆ ಹಾಳಾಗಿರುವುದು ಗಮನಕ್ಕೆ ಬಂದಿದೆ. 659.71 ಕೋಟಿಗಳ ಅನುದಾನದಲ್ಲಿ ಡಾಂಬರಿಕರಣವನ್ನು ನವಂಬರ್​ನಿಂದ ಕೈಗೆತ್ತಿಗೊಳ್ಳಲಾಗುತ್ತಿದ್ದು, ಮಾರ್ಚ್ ಅಂತ್ಯಕ್ಕೆ ಪೂರ್ಣಗೊಳಿಸಲಾಗುವುದು. ರಸ್ತೆ ಗುಂಡಿ ಗಮನ ಆ್ಯಪ್‌ನಲ್ಲಿ ಇಲ್ಲಿಯವರೆಗೂ 1376 ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ. 2684 ರಸ್ತೆ ಗುಂಡಿಗಳನ್ನು ತ್ವರಿತವಾಗಿ ದುರಸ್ತಿಗೊಳಿಸಲು ಕ್ರಮವಹಿಸಲಾಗಿದೆ. ವಾರ್ಡ್ ಮಟ್ಟದ ರಸ್ತೆಗಳಲ್ಲಿನ ಗುಂಡಿಗಳನ್ನು ದುರಸ್ತಿಗೊಳಿಸಲು ಪ್ರತಿ ವಾರ್ಡ್ 15 ಲಕ್ಷ ರೂಪಾಯಿ ನೀಡಲಾಗಿದೆ. ಆರ್ಟಿರಿಯಲ್ ಮತ್ತು ಸಬ್ ಆರ್ಟಿರಿಯಲ್ ರಸ್ತೆಗಳನ್ನು ರಸ್ತೆ ಗುಂಡಿ ಮುಚ್ಚಲು ಬಿಬಿಎಂಪಿ ಸ್ವಂತ ಬ್ಯಾಚ್ ಮಿಕ್ಸ್​ ಘಟಕದಿಂದ ಡಾಂಬರು ಪೂರೈಸಲಾಗುತ್ತಿದ್ದು ಈ ತಿಂಗಳ 20 ನೇ ತಾರೀಕಿನ ಒಳಗೆ ಎಲ್ಲಾ ರಸ್ತೆ ಗುಂಡಿಗಳನ್ನು ಮುಚ್ಚಲು ಕ್ರಮಕೈಗೊಳ್ಳಲಾಗಿದೆ ಎಂದು ಸಿಎಂ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ:ಬಿಬಿಎಂಪಿ ಪೂರ್ವ ವಲಯದಲ್ಲಿ ರಸ್ತೆ ಗುಂಡಿ ಮುಚ್ಚುವ ಕಾರ್ಯ ಚುರುಕು - Bengaluru Road Pothole

ABOUT THE AUTHOR

...view details