ಬೆಂಗಳೂರು: ರಾಜ್ಯದ ಬರಪೀಡಿತ ಪ್ರದೇಶದ ರೈತರಿಗೆ ನ್ಯಾಯಬದ್ಧವಾಗಿ ನೀಡಬೇಕಾಗಿರುವ ಪರಿಹಾರದ ಹಣ ನೀಡದೆ ಕಳೆದ ಐದು ತಿಂಗಳಿನಿಂದ ಗೋಳಾಡಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಲಾಗದ ರಾಜ್ಯದ ಪುಕ್ಕಲು ಬಿಜೆಪಿ ನಾಯಕರು ನಮ್ಮ ವಿರುದ್ಧ "ಪರಿಹಾರ ಕೊಡಿ ಕುರ್ಚಿ ಬಿಡಿ" ಎಂಬ ನಾಟಕ ಪ್ರದರ್ಶನಕ್ಕೆ ಹೊರಟಿರುವುದು ಹಾಸ್ಯಾಸ್ಪದ ಮಾತ್ರವಲ್ಲ, ನಾಡಿನ ರೈತರಿಗೆ ಬಗೆಯುತ್ತಿರುವ ದ್ರೋಹವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ರಾಜ್ಯದಲ್ಲಿ ಮೊದಲ ಬಾರಿ ಅಧಿಕಾರಕ್ಕೆ ಬಂದಿದ್ದಾಗ ಬೀಜ-ಗೊಬ್ಬರ ಕೇಳಿದ ರೈತರನ್ನು ಗುಂಡಿಟ್ಟು ಸಾಯಿಸಿದ ಪಕ್ಷ ಬಿಜೆಪಿ, ಪರಿಹಾರ ಕೊಡಿ ಎಂದು ಕೇಳಿದಾಗೆಲ್ಲ ನಾವೇನು ನೋಟ್ ಪ್ರಿಂಟಿಂಗ್ ಮಷಿನ್ ಇಟ್ಟುಕೊಂಡಿದ್ದೆವೆಯೇ ಎಂದು ಧಾಷ್ಟ್ಯದಿಂದ ಕೇಳಿದ್ದು ಇದೇ ಬಿಜೆಪಿ ಮುಖ್ಯಮಂತ್ರಿಗಳು. ದೆಹಲಿಯಲ್ಲಿ ಧರಣಿ ನಡೆಸುತ್ತಿದ್ದ ರೈತರ ಮೇಲೆ ದೌರ್ಜನ್ಯ ನಡೆಸಿದ್ದು ಕೂಡಾ ಇದೇ ಬಿಜೆಪಿ. ಇಂತಹ ಹುಟ್ಟು ರೈತ ವಿರೋಧಿ ಬಿಜೆಪಿ ನಾಯಕರು ಈಗ ವೇಷ ಬದಲಿಸಿ ಸುರಿಸುವ ಕಣ್ಣೀರು ಮೊಸಳೆಯದ್ದು ಎಂದು ಅರ್ಥಮಾಡಿಕೊಳ್ಳದಷ್ಟು ರೈತರು ದಡ್ಡರಲ್ಲ ಎಂದಿದ್ದಾರೆ.
ಬರಗಾಲದ ಸೂಚನೆ ಸಿಗುತ್ತಿದ್ದಂತೆಯೇ ನಮ್ಮ ಸರ್ಕಾರ ಯುದ್ಧೋಪಾದಿಯಲ್ಲಿ ಸಮೀಕ್ಷೆ ಮತ್ತು ಪರಿಹಾರ ಕಾರ್ಯದಲ್ಲಿ ನಿರತವಾಗಿದೆ. ಸಮೀಕ್ಷೆಯ ನಂತರ ಕಳೆದ ವರ್ಷ ಸೆಪ್ಟೆಂಬರ್ 13ರಂದು ರಾಜ್ಯದ 223 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿತ್ತು. ನಮ್ಮ ಅಧ್ಯಯನದ ಪ್ರಕಾರ ಬರಗಾಲದಿಂದಾಗಿ ರೂ.37 ಸಾವಿರ ಕೋಟಿಗಳಷ್ಟು ನಷ್ಟ ಉಂಟಾಗಿದೆ. ಇದರಲ್ಲಿ 18,177 ಕೋಟಿ ರೂಪಾಯಿ ಪರಿಹಾರವನ್ನು ನೀಡುವಂತೆ ಸೆ.23ಕ್ಕೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೆವು. ಅಕ್ಟೋಬರ್‌ನಲ್ಲಿ ಬರ ಅಧ್ಯಯನಕ್ಕಾಗಿ ಕೇಂದ್ರದಿಂದ ತಜ್ಞರ ತಂಡ ಆಗಮಿಸಿತ್ತು. ಇಲ್ಲಿಯವರಗೆ ಅದು ನೀಡಿರುವ ವರದಿಯ ಗತಿ ಏನಾಗಿದೆಯೋ ಗೊತ್ತಿಲ್ಲ ಎಂದಿದ್ದಾರೆ.
ಕಂದಾಯ ಸಚಿವ ಕೃಷ್ಣಭೈರೇಗೌಡರ ಜೊತೆ ನಾನು ಪ್ರಧಾನಮಂತ್ರಿ ಮೋದಿ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದೇನೆ. ಕೃಷಿ ಸಚಿವರು ಕೇಂದ್ರ ಕೃಷಿ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ. ಇಲ್ಲಿಯವರೆಗೆ ಬರ ಪರಿಹಾರ ಕೋರಿ 17 ಪತ್ರಗಳನ್ನು ಬರೆದಿದ್ದೇವೆ. ಯಾವುದಕ್ಕೂ ಉತ್ತರವೂ ಇಲ್ಲ, ಪೈಸೆ ಪರಿಹಾರವನ್ನೂ ಕೊಟ್ಟಿಲ್ಲ. ಪರಿಸ್ಥಿತಿ ಹೀಗಿರುವಾಗ ಬಿಜೆಪಿ ನಾಯಕರು ಯಾವ ಮುಖ ಹೊತ್ತು ಬರಪೀಡಿತ ರೈತರ ಬಳಿ ನಮ್ಮ ವಿರುದ್ಧ ದೂರು ತೆಗೆದುಕೊಂಡು ಹೋಗುತ್ತಾರೆ. ಕೇಂದ್ರ ಸರ್ಕಾರ ಮಾಡುತ್ತಿರುವ ಅನ್ಯಾಯದಿಂದ ಈಗಾಗಲೇ ರಾಜ್ಯದ ರೈತರು ರೊಚ್ಚಿಗೆದ್ದಿದ್ದಾರೆ. ಆದ್ದರಿಂದ ಅವರ ಬಳಿ ಹೋಗುವಾಗ ಜಾಗ್ರತೆಯಿಂದ ಇರಿ ಎಂದಷ್ಟೇ ಹೇಳಬಯಸುತ್ತೇನೆ ಎಂದು ಕಿಡಿಕಾರಿದ್ದಾರೆ.
ಕೇಂದ್ರ ಸರ್ಕಾರ ಪರಿಹಾರ ನೀಡದೆ ಇದ್ದರೂ ರಾಜ್ಯ ಸರ್ಕಾರ ಕೈಕಟ್ಟಿ ಕೂತಿಲ್ಲ. ಬರಪರಿಹಾರಕ್ಕಾಗಿ ಜಿಲ್ಲಾಧಿಕಾರಿಗಳ ಖಾತೆಯಲ್ಲಿ 870 ಕೋಟಿ ರೂಪಾಯಿ ಇದೆ. ಬರಪೀಡಿತ 36 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸುತಿದ್ದೇವೆ. 21 ಜಿಲ್ಲೆಗಳಲ್ಲಿ ಟ್ಯಾಂಕರ್ನಲ್ಲಿ ನೀರು ಪೂರೈಸಲು ಟೆಂಡರ್ ಕರೆದಿದ್ದೇವೆ. 158 ಕಡೆಗಳಲ್ಲಿ ಹೊಸದಾಗಿ ಕೊಳವೆ ಬಾವಿಗಳನ್ನು ತೋಡಲಾಗಿದೆ. ಖಾಸಗಿ ಜಮೀನು ಇರುವ 3,000 ಕಡೆಗಳಲ್ಲಿ ಕೊಳವೆ ಬಾವಿಗಳನ್ನು ಕೊರೆಸಲು ಸ್ಥಳಗಳನ್ನು ಗುರುತಿಸಲಾಗಿದೆ. ಸದ್ಯ ಎಲ್ಲಿಯೂ ಕುಡಿಯುವ ನೀರಿನ ಕೊರತೆ ಇಲ್ಲ ಎಂದು ಸಿಎಂ ವಿವರಿಸಿದ್ದಾರೆ.