ಬೆಂಗಳೂರು:ಮುಖ್ಯಮಂತ್ರಿಗಳು ಎಲ್ಲ ಡಿಸಿಗಳಿಗೂ ಯಾವುದೇ ನೋಟಿಸ್ ಕೊಡಬೇಡಿ ಅಂದಿದ್ದಾರೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಸದಾಶಿವನಗರದಲ್ಲಿ ಮಾತನಾಡಿದ ಅವರು, ವಕ್ಫ್ ವಿವಾದ ವಿಚಾರವಾಗಿ ಪ್ರತಿಕ್ರಿಯಿಸಿದರು, ನೋಟಿಸ್ ಅಥವಾ ಪತ್ರಗಳನ್ನು ಕೊಟ್ಟಿದ್ರೆ ವಾಪಸ್ ಪಡೆಯಲು ಸೂಚಿಸಿದ್ದಾರೆ. ಅಲ್ಲಿಗೆ ಅದು ಮುಗಿದಿದೆ. ಮುಂದೆ ಯಾವ ರೀತಿ ಬೆಳವಣಿಗೆ ಆಗುತ್ತೋ ಗೊತ್ತಿಲ್ಲ. ಕಂದಾಯ ದಾಖಲಾತಿ ಹಾಗೂ ವಕ್ಫ್ ದಾಖಲಾತಿಯಲ್ಲಿ ಒಂದೇ ಇದ್ರೆ ಮಾತ್ರ ಸಾಧ್ಯ. ಅದರಲ್ಲೊಂದು ಇದರಲ್ಲೊಂದು ಇದ್ದರೆ ಗೊಂದಲ. ಅಂತಿಮವಾಗಿ ಕಂದಾಯ ದಾಖಲಾತಿ ಮುಖ್ಯ. ಇದರಲ್ಲಿ ಏನಿದೆಯೋ ಅದರಂತೆ ದಾಖಲಾಗಲಿದೆ. ಸಿಎಂ ಸದ್ಯದಲ್ಲಿ ಯಾವ ನೋಟಿಸ್ ಕೊಡಬೇಡಿ, ನಂತರ ಪರಿಶೀಲಿಸೋಣ ಅಂದಿದ್ದಾರೆ. ಸರ್ಕಾರ ಯಾವುದೇ ಕ್ರಮ ಕೈಗೊಳ್ಳುವ ಕೆಲಸ ಮಾಡಲ್ಲ ಎಂದರು.
ಮೋದಿ ಏನೆಲ್ಲ ಭರವಸೆ ಕೊಟ್ಟಿದ್ದಾರೆ, ಅದೆಲ್ಲ ಈಡೇರಿದೆಯಾ?:ಗ್ಯಾರಂಟಿಗಳ ಕುರಿತು ಮೋದಿಯವರ ಟ್ವೀಟ್ ಬಗ್ಗೆ ಪರಮೇಶ್ವರ್ ಪ್ರತಿಕ್ರಿಯಿಸಿ, ಚುನಾವಣೆ ವೇಳೆ ಮೋದಿಯವರು ಏನೆಲ್ಲ ಭರವಸೆ ಕೊಟ್ಟಿದ್ದಾರೆ, ಅದೆಲ್ಲ ಅನುಷ್ಠಾನ ಮಾಡಿದ್ದಾರಾ?. ಮೋದಿಯವರು ಈ ದೇಶದ ಪ್ರಧಾನಿ. ಅವರು ಆಡುವ ಮಾತು ಅತ್ಯಂತ ಜವಾಬ್ದಾರಿಯಿಂದ ಇರಬೇಕು. ಜನ ಪ್ರಧಾನಿಯವರ ಮಾತು ಗಮನಿಸ್ತಿರ್ತಾರೆ. ಟೀಕೆ, ಅಭಿಪ್ರಾಯ ತಿಳಿಸೋದು ಅವರ ಹಕ್ಕು, ನಾವು ಪ್ರಶ್ನೆ ಮಾಡಲ್ಲ. ಆದರೆ, ನಾವು ಚುನಾವಣೆ ವೇಳೆ ಗ್ಯಾರಂಟಿಗಳ ಬಗ್ಗೆ ಮಾತು ಕೊಟ್ಟಿದ್ವಿ, ಪ್ರಣಾಳಿಕೆಯಲ್ಲೂ ತಿಳಿಸಿದ್ವಿ. ಭರವಸೆ ಈಡೇರಿಸಿರೋದು ನಮ್ಮ ಬದ್ಧತೆ ತೋರಿಸುತ್ತದೆ. ನಮ್ಮ ಪ್ರಣಾಳಿಕೆ ತಯಾರು ಮಾಡುವ ಜವಾಬ್ದಾರಿ ನನಗೇ ಕೊಟ್ಟಿದ್ರು. ನಾನು, ಪ್ರೊ.ರಾಧಾಕೃಷ್ಟ, ಮಧು ಬಂಗಾರಪ್ಪ ಸೇರಿ ನಾವು ಮೂರು ಜನ ಪ್ರಣಾಳಿಕೆ ತಯಾರು ಮಾಡಿದ್ವಿ ಎಂದರು.
ಯಶಸ್ವಿಯಾಗಿ ಗ್ಯಾರಂಟಿಗಳ ಜಾರಿ: ಐದು ಗ್ಯಾರಂಟಿಗಳನ್ನು ಕೂಡಾ ನಾವು ನಮ್ಮ ಹಿರಿಯ ನಾಯಕರ ಜತೆ ಚರ್ಚೆ ಮಾಡಿ ಇದರ ಸಾಧಕ ಬಾಧಕಗಳನ್ನು, ಆರ್ಥಿಕ ಹೊರೆಯನ್ನು ಚರ್ಚೆ ಮಾಡಿ ನಾವು ಗ್ಯಾರಂಟಿಗಳನ್ನು ಪ್ರಣಾಳಿಕೆಯಲ್ಲಿ ಸೇರಿಸಿದ್ವಿ. ಮೊದಲ ಸಂಪುಟದಲ್ಲೇ ತೀರ್ಮಾನ ಮಾಡೋದಾಗಿ ಕಮಿಟ್ ಆಗಿದ್ವಿ. ಅದೇ ಪ್ರಕಾರ ಮೊದಲ ಸಂಪುಟದಲ್ಲೇ ತೀರ್ಮಾನ ಮಾಡಿ ಸಂಬಂಧಪಟ್ಟ ಇಲಾಖೆಗಳಿಗೆ ಸೂಚನೆ ಕೊಡಲಾಯ್ತು. ಒಂದೆರಡು ತಿಂಗಳ ನಂತರ ಗ್ಯಾರಂಟಿಗಳನ್ನು ಅನುಷ್ಠಾನ ಮಾಡಿದೆವು. ಇವತ್ತು ಹಣ ಖರ್ಚಾಗ್ತಿದೆ, ಆರ್ಥಿಕ ಹೊರೆ ಆಗ್ತಿದೆ, ಕರ್ನಾಟಕ ಆರ್ಥಿಕ ದಿವಾಳಿ ಆಗಿದೆ ಅಂತ ಟೀಕೆ ಟಿಪ್ಪಣಿ ಬಂದಿರೋದು ನಿಜ. ಈ ಟೀಕೆ ಟಿಪ್ಪಣಿ ಮಧ್ಯೆ ನಾವು ಯಶಸ್ವಿಯಾಗಿ ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇವೆ. ಇದರಿಂದ 3.17 ಲಕ್ಷ ಕೋಟಿಯ ಬಜೆಟ್, 3.5 ಲಕ್ಷ ಕೋಟಿಗೆ ಹೋಗಿದೆ. ಹೆಚ್ಚುವರಿ ಹೊರೆ ಆಗೋದು ಗೊತ್ತಿದ್ದೇ ಬಜೆಟ್ ಕೊಟ್ಟಿದ್ದೇವೆ ಎಂದರು.