ಬೆಂಗಳೂರು/ದೆಹಲಿ: ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ದೆಹಲಿಯಲ್ಲಿ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿದರು.
ಈ ವೇಳೆ ಕರ್ನಾಟಕ ಸರ್ಕಾರವನ್ನು ಹಗರಣದ ಆರೋಪಗಳ ಮೂಲಕ ಅಸ್ಥಿರಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಹೈಕಮಾಂಡ್ಗೆ ವಿವರಿಸಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ ಹಾಗೂ ಮೂಡಾ ವಿಚಾರವಾಗಿ ರಾಜ್ಯ ಸರ್ಕಾರವನ್ನು ಗುರಿಯಾಗಿಸಿ ಸುಳ್ಳು ಆರೋಪ ಮಾಡಲಾಗುತ್ತಿದೆ. ಇದರಲ್ಲಿ ಸರ್ಕಾರದ ಪಾತ್ರ ಇಲ್ಲ. ಇದು ಬಿಜೆಪಿಯ ಸೇಡಿನ ರಾಜಕಾರಣ ಎಂದು ಉಭಯ ನಾಯಕರು ಹೈಕಮಾಂಡ್ಗೆ ತಿಳಿಸಿದ್ದಾರೆ.
ಮುಡಾ ನಿವೇಶನ ಕಾನೂನುಬದ್ಧ: ಮುಡಾ ನಿವೇಶನ ಹಂಚಿಕೆಯಲ್ಲಿ ಯಾವುದೇ ಅಕ್ರಮವಾಗಿಲ್ಲ. ಎಲ್ಲವೂ ಕಾನೂನುಬದ್ಧವಾಗಿ ನಡೆದಿದೆ. 50:50 ಅನುಪಾತದ ಹಂಚಿಕೆ ನನ್ನ ಕುಟುಂಬಕ್ಕೆ ವಿಶೇಷವಾಗಿ ಮಾಡಿಲ್ಲ. ಮುಡಾ ನಿಯಮದಂತೆ ಮಾಡಲಾಗಿದೆ. ನಾನು ಅಧಿಕಾರದಲ್ಲಿದ್ದಾಗ ಈ ಬದಲಿ ಸೈಟುಗಳು ಹಂಚಿಕೆ ಆಗಿಲ್ಲ. ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಸೈಟ್ ಕೊಟ್ಟಿದ್ದಾರೆ ಎಂದು ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ.
ವಾಲ್ಮೀಕಿ ಅಭಿವೃದ್ಧಿ ನಿಗಮ ಅಕ್ರಮದ ಬಗ್ಗೆ ಮಾಹಿತಿ: ಇದೇ ಸಂದರ್ಭದಲ್ಲಿಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್, ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದ ಬಗ್ಗೆ ರಾಷ್ಟ್ರೀಯ ನಾಯಕರಿಗೆ ವರದಿ ನೀಡಿದರು. ಅಕ್ರಮ ಅಧಿಕಾರಿಗಳಿಂದ ಆಗಿದೆ. ಈಗಾಗಲೇ ಎಸ್ಐಟಿ ತನಿಖೆ ನಡೆಯುತ್ತಿದೆ. ಹಲವರನ್ನು ಬಂಧಿಸಲಾಗಿದೆ. ವರ್ಗಾವಣೆಯಾಗಿದ್ದ ಹಣ ವಶಪಡಿಸಿಕೊಳ್ಳುತ್ತಿದ್ದೇವೆ. ಕೇಂದ್ರ ಸರ್ಕಾರ ಜಾರಿ ನಿರ್ದೇಶನಾಲಯ (ಇ.ಡಿ.) ಬಳಸಿ ಸರ್ಕಾರವನ್ನು ಅಸ್ಥಿರಗೊಳಿಸಲು ಮುಂದಾಗಿದೆ ಎಂದು ವರಿಷ್ಠರಿಗೆ ಮಾಹಿತಿ ನೀಡಿದ್ದಾರೆ.
ಸಿಎಂ ಹೆಸರು ಹೇಳುವಂತೆ ಅಧಿಕಾರಿಗಳಿಗೆ ಇ.ಡಿ. ಒತ್ತಡ ಹೇರುತ್ತಿದೆ. ಇ.ಡಿ. ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಬೆದರಿಕೆ ಹಾಕಲಾಗುತ್ತಿದೆ. ಇದರಲ್ಲಿ ನನ್ನ ಪಾತ್ರವಿಲ್ಲ. ಆರೋಪಿತ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಇ.ಡಿ.ಯನ್ನು ಕೇಂದ್ರ ಸರ್ಕಾರ ದುರ್ಬಳಕೆ ಮಾಡುತ್ತಿದೆ ಎಂದು ಹೇಳಿದ್ದಾರೆ.
ಈ ಸಭೆ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, "ಕರ್ನಾಟಕದ ರಾಜಕೀಯ ಬೆಳವಣಿಗೆ ಬಗ್ಗೆ ಚರ್ಚೆ ಮಾಡಿದೆವು. ಬಿಜೆಪಿ ಸೇಡಿನ ಹಾಗು ಅಸೂಯೆಯ ರಾಜಕಾರಣ ಮಾಡುತ್ತಿರುವ ಬಗ್ಗೆ ಚರ್ಚಿಸಿದ್ದೇವೆ. ಬಿಜೆಪಿ ವಾಲ್ಮೀಕಿ ಅಭಿವೃದ್ಧಿ ನಿಗಮ ಅಕ್ರಮದಲ್ಲಿ ನನ್ನನ್ನು ಟಾರ್ಗೆಟ್ ಮಾಡುವುದಕ್ಕೆ ಮುಂದಾಗಿದ್ದಾರೆ ಎಂಬುದನ್ನು ಹೈಕಮಾಂಡ್ ನಾಯಕರಿಗೆ ತಿಳಿಸಿದ್ದೇವೆ" ಎಂದರು.