ಬೆಂಗಳೂರು/ನವದೆಹಲಿ: ನಾನು ಹಾವೇರಿ ಲೋಕಸಭಾ ಟಿಕೆಟ್ ಆಕಾಂಕ್ಷಿಯಲ್ಲ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಎರಡು ದಿನಗಳ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಪಾಲ್ಗೊಳ್ಳಲು ದೆಹಲಿಗೆ ತೆರಳಿರುವ ಅವರು, ಮಾಧ್ಯಮಗಳೊಂದಿಗೆ ಮಾತನಾಡಿದರು.
ನಂತರ ಲೋಕಸಭಾ ಟಿಕೆಟ್ ಆಕಾಂಕ್ಷಿ ಬಗ್ಗೆ ಪ್ರತಿಕ್ರಿಯಿಸಿ, ಹಾವೇರಿ ಲೋಕಸಭಾ ಟಿಕೆಟ್ಗೆ ನಾನು ಯಾವುದೇ ಆಕಾಂಕ್ಷೆಯನ್ನು ಇಟ್ಟುಕೊಂಡಿಲ್ಲ. ಹಿಂದೆಯೂ ನಾನು ಹಲವು ಬಾರಿ ಸ್ಪಷ್ಟಪಡಿಸಿದ್ದೇನೆ ಎಂದು ಹೇಳಿದರು. ಹೈಕಮಾಂಡ್ ನಾಯಕರು ಯಾರಿಗೆ ಟಿಕೆಟ್ ನೀಡುತ್ತಾರೋ ಅವರ ಪರವಾಗಿ ನಾವು ಕೆಲಸವನ್ನು ಮಾಡುತ್ತೇವೆ. ಈಗಾಗಲೇ ಹಾವೇರಿ ಮತ್ತು ಗದಗನ ಬಿಜೆಪಿಯ ನಾಯಕರ ಜೊತೆಗೆ ಸಭೆ ಮಾಡಲಾಗಿದೆ ಎಂದರು. ಶಿವಕುಮಾರ್ ಉದಾಸಿಯನ್ನು ಮತ್ತೊಮ್ಮೆ ಮನವೊಲಿಸುವ ಕೆಲಸ ಮಾಡಲಾಗುತ್ತದೆ. ಆದರೆ, ಅವರು ಈ ಬಾರಿ ಸ್ಪರ್ಧಿಸಲ್ಲವೆಂದು ಗಟ್ಟಿ ನಿರ್ಧಾರ ಮಾಡಿದ್ದಾರೆ ಎಂದು ಹೇಳಿದರು.
ನಂತರ ಕಾರ್ಯಕಾರಿಣಿ ಸಭೆ ಬಗ್ಗೆ ಮಾತನಾಡಿ, ಈ ಸಭೆಯಲ್ಲೇ ಸುಮಾರು 10,000ಕ್ಕೂ ಹೆಚ್ಚಿನ ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ. ಇದು ಪಕ್ಷದ ಬೆಳವಣಿಗೆಯನ್ನು ಎತ್ತಿ ತೋರಿಸುತ್ತದೆ. ಈ ಸಭೆಯಲ್ಲಿ ಮುಂಬರುವ ಲೋಕಸಭಾ ಚುನಾವಣೆ ಕಾರ್ಯತಂತ್ರದ ಬಗ್ಗೆಯೂ ಚರ್ಚಿಸಲಾಗುತ್ತದೆ ಎಂದರು.