ಬೆಂಗಳೂರು: ಅನಧಿಕೃತ ಕಟ್ಟಡ ನಿರ್ಮಾಣ ನಿಲ್ಲಿಸುವಂತೆ ನೋಟಿಸ್ ನೀಡಿದ್ದರೂ ನಿರ್ಮಾಣ ಮುಂದುವರೆಸಿದ ಮಾಲೀಕರು, ಗುತ್ತಿಗೆದಾರ, ಎಂಜಿನಿಯರ್ ಎಲ್ಲರ ವಿರುದ್ಧವೂ ಕಠಿಣ ಕಾನೂನು ಕ್ರಮ ಆಗಬೇಕು ಎಂದು ಬಿಬಿಎಂಪಿ ಆಯುಕ್ತ ತುಷಾರ ಗಿರಿನಾಥ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಬಾಬುಸಾಪಾಳ್ಯದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತ ಸ್ಥಳಕ್ಕೆ ಭೇಟಿ ನೀಡಿದ ಅವರು ಪರಿಶೀಲನೆ ನಡೆಸಿದರು.
ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಸೂಚನೆ:ದುರಂತದಲ್ಲಿ ಎಂಟು ಮಂದಿ ಮೃತಪಟ್ಟಿದ್ದಾರೆ. ಆರು ಮಂದಿ ಪೈಕಿ ಮೂವರಿಗೆ ಗಂಭೀರ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇವರೆಲ್ಲರ ಆಸ್ಪತ್ರೆ ಖರ್ಚು - ವೆಚ್ಚವನ್ನ ಸರ್ಕಾರವೇ ಭರಿಸಲಿದೆ. ನಿಯಮಬಾಹಿರವಾಗಿ, ಸೂಕ್ತ ಅನುಮತಿ ಪರವಾನಗಿ ಪಡೆಯದೇ ಕಟ್ಟಡ ನಿರ್ಮಾಣಕ್ಕೆ ಮುಂದಾಗುವವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಅಲ್ಲದೇ ವಿಭಾಗೀಯ ಅಧಿಕಾರಿಗೂ ನೋಟಿಸ್ ನೀಡಿ ಕ್ರಮ ಕೈಗೊಳ್ಳಬೇಕು. ಪರಿಹಾರ ರೂಪದಲ್ಲಿ ಎಂಟು ಮಂದಿ ಮೃತರ ಕುಟುಂಬಸ್ಥರಿಗೆ ತಲಾ 5 ಲಕ್ಷ ನೀಡಲಾಗುವುದು ಎಂದು ಘೋಷಿಸಿದರು.
ಪರವಾನಗಿ ಪಡೆಯದೆ ಅನಧಿಕೃತವಾಗಿ ಕಟ್ಟಡ ನಿರ್ಮಾಣ ಮಾಡಲಾಗಿದ್ದು ನೊಟೀಸ್ ನೀಡಿದ್ದರೂ ಮಾಲೀಕರು ಕಟ್ಟಡ ನಿರ್ಮಿಸಿದ್ದಾರೆ. ಈ ಸಂಬಂಧ ಎಇಇ ಅವರನ್ನ ಅಮಾನತು ಮಾಡಲಾಗಿದೆ. ಅಲ್ಲದೆ, ಸಂಬಂಧಿಸಿದ ಅಧಿಕಾರಿಗಳಿಗೂ ನೊಟೀಸ್ ನೀಡುವಂತೆ ತಿಳಿಸಲಾಗಿದೆ ಎಂದರು.
ಸಾರ್ವಜನಿಕರು ಅಕ್ರಮವಾಗಿ ಕಟ್ಟಡ ನಿರ್ಮಿಸಬಾರದು. ಸೂಕ್ತ ಅನುಮತಿ ಪಡೆದು ಗುಣಮಟ್ಟದಿಂದ ಕಟ್ಟಡ ಕಟ್ಟಬೇಕು. ಕಳಪೆ ಕಾಮಗಾರಿಯಿಂದ ಕಟ್ಟಡ ಬಿದ್ದಿದೆ ಹೊರತು ಮಳೆಯಿಂದಲ್ಲ. ಅನಧಿಕೃತ ನಿರ್ಮಾಣ ನಿಲ್ಲಿಸುವಂತೆ ನೋಟಿಸ್ ನೀಡಿದ್ದರೂ ನಿರ್ಮಾಣ ಮುಂದುವರೆಸಿದ ಮಾಲೀಕರು, ಗುತ್ತಿಗೆದಾರ, ಎಂಜಿನಿಯರ್ ಎಲ್ಲರ ವಿರುದ್ಧವೂ ಕಠಿಣ ಕಾನೂನು ಕ್ರಮ ಆಗಬೇಕು. ಈ ಬಗ್ಗೆ ಬಿಬಿಎಂಪಿ ಆಯುಕ್ತರಿಗೆ ನಿರ್ದೇಶಿಸಿದ್ದೇನೆ ಎಂದರು.