ಬೆಂಗಳೂರು:ಮೋಡ ಬಿತ್ತನೆ ಕುರಿತಂತೆ ಮಂಡನೆಯಾಗಿರುವ ಖಾಸಗಿ ವಿಧೇಯಕವನ್ನು ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಲು ವಿಧಾನಸಭೆಯಲ್ಲಿ ಅನುಮೋದಿಸಲಾಗಿದೆ. ಕಾಂಗ್ರೆಸ್ ಶಾಸಕ ಪ್ರಕಾಶ್ ಕೋಳಿವಾಡ ಅವರು ಕರ್ನಾಟಕ ಮೋಡ ಬಿತ್ತನೆ ವಿಧೇಯಕ-2024 ಖಾಸಗಿ ವಿಧೇಯಕವನ್ನು ಮಂಡಿಸಿದರು.
ಬೆಳೆಹಾನಿ ಪ್ರಮಾಣ ತಗ್ಗಿಸಲು ಮೋಡಬಿತ್ತನೆ ಅಗತ್ಯ:ಬರಪರಿಸ್ಥಿತಿಯನ್ನು ತಗ್ಗಿಸುವುದು, ಅಂತರ್ಜಲ ಮಟ್ಟ ಹೆಚ್ಚಿಸುವುದು, ಜಲಾಶಯದಲ್ಲಿನ ನೀರಿನ ಒಳಹರಿವು ವೃದ್ಧಿ, ನೀರಾವರಿ ಭೂಮಿಯ ವಿಸ್ತರಣೆ, ವಿದ್ಯುತ್ ಉತ್ಪಾದನೆಗೆ ವ್ಯಾಪಕ ಅವಕಾಶ ಮುಂತಾದ ಕಾರಣಗಳಿಗೆ ಮೋಡಬಿತ್ತನೆ ಅಗತ್ಯವಿದೆ. ಬರಗಾಲದಿಂದಾಗಿ ರಾಜ್ಯದಲ್ಲಿ 35 ಸಾವಿರ ಕೋಟಿ ರೂ ನಷ್ಟವಾಗಿದೆ. ಮೋಡಬಿತ್ತನೆ ಮಾಡಿದರೆ ಶೇ.21 ರಿಂದ 46 ರಷ್ಟು ಮಳೆಯಾಗುವ ಸಾಧ್ಯತೆಯಿದೆ. ಬೆಳೆಹಾನಿಯ ಪ್ರಮಾಣವನ್ನು 7 ಸಾವಿರ ಕೋಟಿ ರೂ.ಗಳಿಗೆ ತಗ್ಗಿಸಬಹುದು ಎಂದು ಹೇಳಿದರು.
ರಾಜ್ಯದಲ್ಲಿ ವರ್ಷಕ್ಕೆ 6 ರಿಂದ 7 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. 27 ವರ್ಷದಲ್ಲಿ 16 ವರ್ಷ ಬರ ಪರಿಸ್ಥಿತಿ ಕಂಡಿದ್ದೇವೆ. 1.10 ಕೋಟಿ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿಯಾಗಿದೆ. ಮೋಡಬಿತ್ತನೆಯಿಂದಾಗಿ ಈ ಪರಿಸ್ಥಿತಿಯನ್ನು ತಪ್ಪಿಸಬಹುದಾಗಿದೆ ಎಂದು ಹೇಳಿದರು.
ಹಿರಿಯ ಶಾಸಕ ಟಿ.ಬಿ.ಜಯಚಂದ್ರ ಮಾತನಾಡಿ, ಮೋಡಬಿತ್ತನೆಯನ್ನು ಸಮಗ್ರವಾಗಿ ನಿರ್ವಹಣೆ ಮಾಡಬೇಕು. ಕೇಂದ್ರ ಸರ್ಕಾರ ಮತ್ತು ಅಕ್ಕಪಕ್ಕದ ನಾಲ್ಕೈದು ರಾಜ್ಯಗಳು ಒಳಗೊಂಡು ಚರ್ಚೆ ಮಾಡಿ ಬಲವಾದ ಮೋಡಗಳಿರುವ ಸಂದರ್ಭದಲ್ಲಿ ಬಿತ್ತನೆ ಮಾಡಿದರೆ ಅದು ಯಶಸ್ವಿಯಾಗುತ್ತದೆ. ವಿಜ್ಞಾನವು ಕೂಡ ಇದನ್ನು ಒಪ್ಪಿಕೊಂಡಿದೆ ಎಂದರು.
ಮೋಡಬಿತ್ತನೆ ತಂತ್ರಜ್ಞಾನ:ಚರ್ಚೆಯ ನಡುವೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್ ಕೆ ಪಾಟೀಲ್ ಮಾತನಾಡಿ, ಗಂಭೀರ ಬರ ಪರಿಸ್ಥಿತಿಯಲ್ಲೂ ಮೋಡಬಿತ್ತನೆಯಂತಹ ತಂತ್ರಜ್ಞಾನ ಬಳಕೆ ಮಾಡಿಕೊಳ್ಳದೇ ಇರುವುದು ಅಜ್ಞಾನವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಹಿಂದೆ ತಾವು ಎಸ್.ಎಂ.ಕೃಷ್ಣ ಅವರ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದಾಗ ಮೋಡಬಿತ್ತನೆ ಮಾಡಿದ್ದ ನೆನಪುಗಳನ್ನು ಸ್ಮರಿಸಿಕೊಂಡರು.
ಆ ವೇಳೆ ಮೋಡಬಿತ್ತನೆ ಬಗ್ಗೆ ಮಾಹಿತಿ ಇರಲಿಲ್ಲ. ಅದು ಯಶಸ್ವಿಯಾಗುವುದಿಲ್ಲ. ಹಣ ವ್ಯರ್ಥ ಎಂಬ ಅಪವಾದಗಳಿದ್ದವು. ರಾಜಕಾರಣಿಗಳು ಅನುಮಾನ ವ್ಯಕ್ತಪಡಿಸಿದರು. ಮುಖ್ಯಮಂತ್ರಿಯವರು ಮೋಡಬಿತ್ತನೆ ಉದ್ಘಾಟನೆಗೆ ಬಂದಿರಲಿಲ್ಲ. ಅದೂ ಚರ್ಚೆಗೆ ಗ್ರಾಸವಾಗಿತ್ತು. ಗೃಹಸಚಿವರಾಗಿದ್ದ ಧರ್ಮಸಿಂಗ್ ತಮ್ಮೊಂದಿಗೆ ಬಂದು ವಿಮಾನದಲ್ಲಿ ಕುಳಿತು ಮೋಡಬಿತ್ತನೆ ಮಾಡುವುದನ್ನು ವೀಕ್ಷಿಸಿದ್ದರು.
ನಾವು ಕೆಳಗೆ ಬಂದಾಗ ಅದರ ಉಸ್ತುವಾರಿ ಹೊಂದಿದ್ದ ಅಧಿಕಾರಿ ನಕ್ಷೆಯನ್ನು ಮುಂದಿಟ್ಟುಕೊಂಡು ನಾವು ಎಲ್ಲಿ ಮೋಡಬಿತ್ತನೆ ಮಾಡಿದ್ದೇವೆ. ಅದರ ಪರಿಣಾಮ ಯಾವ ಪ್ರದೇಶದಲ್ಲಿ ಮಳೆಯಾಗುತ್ತದೆ ಎಂಬುದನ್ನು ಕರಾರುವಾಕ್ಕಾಗಿ ಹೇಳಿದ್ದರು. ಕುತೂಹಲದಿಂದ ಪರೀಕ್ಷಿಸಲು ಪತ್ರಕರ್ತರು ಸದರಿ ಗ್ರಾಮಗಳಿಗೆ ತೆರಳಿದರು. ಕೆಲವೇ ನಿಮಿಷಗಳಲ್ಲಿ ನನಗೆ ಸುಮಾರು 12 ಕ್ಕೂ ಹೆಚ್ಚು ಪತ್ರಕರ್ತರು ಕರೆ ಮಾಡಿ ನಾವು ನೆನದು ಹೋಗಿದ್ದೇವೆ. ಮೋಡಬಿತ್ತನೆ ಯಶಸ್ವಿಯಾಗಿದೆ ಎಂದು ಅಭಿನಂದಿಸಿದ್ದರು.