ಹುಬ್ಬಳ್ಳಿ: ಎಲ್ಲ ಆಸ್ಪತ್ರೆಗಳಿಗಿಂತ ಹುಬ್ಬಳ್ಳಿಯ ಚಿಟಗುಪ್ಪಿ ಆಸ್ಪತ್ರೆ ವಿಭಿನ್ನ. ಕಾರಣ ಅಲ್ಲಿನ ರೋಗಿಗಳ ಆರೈಕೆಯ ವಿಧಾನ. ಭಯದಿಂದಲೇ ಆಸ್ಪತ್ರೆಗೆ ಬರುವ ರೋಗಿಗಳು ಹಾಗೂ ಮಕ್ಕಳು ನಗುನಗುತ್ತಾ ಆಸ್ಪತ್ರೆಯಲ್ಲಿ ಕಾಲ ಕಳೆದು ಬಹುಬೇಗನೇ ಗುಣಮುಖರಾಗುವ ವಾತಾವರಣ ಇದ್ದುದರಿಂದ ಇದು ಎಲ್ಲ ಆಸ್ಪತ್ರೆಗಳಿಗಿಂತ ವಿಭಿನ್ನ ಎಂದು ಹೇಳಬಹುದು. ಸಾರ್ವಜನಿಕರಿಗೆ ಗುಣಮಟ್ಟದ ಚಿಕಿತ್ಸೆ ನೀಡುವುದರ ಜೊತೆಗೆ ಇದೀಗ ಚಿಕ್ಕ ಮಕ್ಕಳಿಗಾಗಿ ಶೈಕ್ಷಣಿಕವಾಗಿ ಜಾಗೃತಿ ಮೂಡಿಸುವಲ್ಲಿ ಗಮನ ಹರಿಸಿದೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸುಪರ್ದಿಯಲ್ಲಿರುವ ಚಿಟಗುಪ್ಪಿ ಆಸ್ಪತ್ರೆಯು ಮಕ್ಕಳಿಗೆ, ಮಹಿಳೆಯರ ಚಿಕಿತ್ಸೆಗೆ ಪ್ರಸಿದ್ಧಿ ಪಡೆದಿದೆ. ಚಿಕಿತ್ಸೆಗೆಂದು ಬಂದ ಮಕ್ಕಳು ಸುಮ್ಮನೆ ಕೂರುವುದನ್ನು ನೋಡಿದ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಶ್ರೀಧರ ದಂಡೆಪ್ಪನವರ್, ಮಕ್ಕಳ ಮುಖದಲ್ಲಿ ಮಂದಹಾಸ ಮೂಡಿಸುವ ಸಲುವಾಗಿ ಆಸ್ಪತ್ರೆಯ ಗೋಡೆಗಳ ಮೇಲೆ ಕಾರ್ಟೂನ್ಸ್, ವರ್ಣಮಾಲೆ ಅಕ್ಷರಗಳು, ವಿವಿಧ ಪ್ರಾಣಿ ಚಿತ್ರಗಳು, ಪರಿಸರ, ಹೀಗೆ.. ಹಲವು ಬಗೆಯ ಚಿತ್ರಗಳನ್ನು ರಚಿಸಿ ಕಂಗೊಳಿಸುವಂತೆ ಮಾಡಿದ್ದಾರೆ.
ಅದಲ್ಲದೇ ಮಕ್ಕಳಿಗೆ ಆಟ ಆಡಲು ಆಟಿಕೆ ವಸ್ತುಗಳನ್ನು ಕೂಡ ದಾನಿಗಳಿಂದ ತರಿಸಿಕೊಂಡು ಆಸ್ಪತ್ರೆಗೆ ಒಂದು ಮೆರಗು ತಂದಿದ್ದಾರೆ. ಆಸ್ಪತ್ರೆಗೆ ಬಂದ ಮಕ್ಕಳು ಅಕ್ಷರಗಳನ್ನು ಓದುತ್ತಾ, ಚಿಕ್ಕಪುಟ್ಟ ವಾಹನಗಳಲ್ಲಿ ಆಟ ಆಡುತ್ತಾ ಬೇಗ ಗುಣಮುಖವಾಗುವ ವಾತಾವರಣ ನಿರ್ಮಾಣ ಮಾಡಿದ್ದು ಅವರ ಸೇವಾ ವೃತ್ತಿಗೆ ಹಿಡಿದ ಕೈಗನ್ನಡಿ.
ಈ ಕುರಿತಂತೆಈಟಿವಿ ಭಾರತದ ಜೊತೆ ಮಾತನಾಡಿದ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಶ್ರೀಧರ ದಂಡೆಪ್ಪನವರ್, ''ಇಲ್ಲಿ ಬಡವರು ಅತೀ ಹೆಚ್ಚು ಬರುತ್ತಾರೆ. ಅವರನ್ನು ಗಮನದಲ್ಲಿಟ್ಟುಕೊಂಡು ಈ ಪರಿಕಲ್ಪನೆ ತರಲಾಗಿದೆ. ನಮ್ಮಲ್ಲಿ ಬರುವ ಬಡ ಕಾರ್ಮಿಕರ, ದಿನಗೂಲಿ ಕೆಲಸ ಮಾಡುವವರ ಮಕ್ಕಳೇ ಅಧಿಕ. ಹೀಗೆ ಬರುವ ಮಕ್ಕಳಲ್ಲಿ ಆಸ್ಪತ್ರೆ ಅಂದ್ರೆ ಭಯ ಇರುತ್ತೆ. ಹೀಗಾಗಿ ಚಿಕಿತ್ಸೆಗೆ ಸ್ಪಂದಿಸುವುದು ವಿರಳ. ಮಕ್ಕಳ ಗಮನ ಸೆಳೆಯಲೆಂದೇ ಮಕ್ಕಳ ಸ್ನೇಹಿ ವಾರ್ಡ್ ಮಾಡಲಾಗಿದೆ. ಭಯ ನಿವಾರಣೆಯಾಗಿ ಮಕ್ಕಳು ಬೇಗ ಗುಣಮುಖರಾಗುವ ಸಾಧ್ಯತೆ ಹೆಚ್ಚು. ಸರ್ಕಾರಿ ಆಸ್ಪತ್ರೆ ಕೂಡ ಖಾಸಗಿ ಆಸ್ಪತ್ರೆಗಿಂತ ಯಾವುದರಲ್ಲೂ ಕಡಿಮೆ ಇಲ್ಲ ಎಂಬ ಉದ್ದೇಶದಿಂದ ಮಾಡಲಾಗಿದೆ'' ಎಂದು ವಿವರಿಸಿದರು.
ಚಿಲ್ಡ್ರನ್ಸ್ ವಾರ್ಡ್ನಲ್ಲಿ ಏನೇನಿದೆ: ಮಕ್ಕಳಿಗೆ ಆಟದ ಜೊತೆ ಪಾಠ ಎನ್ನುವ ಪರಿಕಲ್ಪನೆ ಇಟ್ಟುಕೊಂಡು ವಾರ್ಡ್ಗಳನ್ನು ಬಣ್ಣ ಬಣ್ಣದ ಚಿತ್ತಾರದಿಂದ ಬಿಡಿಸಲಾಗಿದೆ. ಇದರಲ್ಲಿ ಪ್ರಮುಖವಾಗಿ ಕನ್ನಡ ವರ್ಣಮಾಲೆಗಳು, ಪಕ್ಷಿ, ಪ್ರಾಣಿಗಳು, ಸಸ್ಯ ಸಂಕುಲದ ಜೊತೆಗೆ ಮಕ್ಕಳಿಗಾಗಿ ಆಟದ ವಸ್ತುಗಳನ್ನು ಸಹ ಇಡಲಾಗಿದೆ. ಮಕ್ಕಳು ಚಿಕಿತ್ಸೆಯ ಮಧ್ಯದಲ್ಲಿ ಭಯ ನಿವಾರಣೆ ಮಾಡುವದರ ಜೊತೆಗೆ ಮಕ್ಕಳ ಮನಸ್ಸನ್ನು ಆಹ್ಲಾದಕರವಾಗಿ ಇಡಲು ಇದು ಸಹಕಾರಿಯಾಗಿದೆ ಎನ್ನುತ್ತಾರೆ ಇಲ್ಲಿನ ವೈದ್ಯರು.