ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮಾತನಾಡುತ್ತಿರುವುದು (ETV Bharat) ಬೆಳಗಾವಿ:ಧಾರವಾಡದ ಇಂದ್ರಮ್ಮ ಕೆರೆಯಲ್ಲಿ ಜಿಲ್ಲೆಯ ಜನರು ಜೀವ ಭಯದಲ್ಲಿ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಚಿಕ್ಕಚಿಕ್ಕ ಮಕ್ಕಳು ಕೆರೆಯಲ್ಲಿ ಸಂಚರಿಸುವ ದೃಶ್ಯ ಎಂಥವರನ್ನೂ ಬೆಚ್ಚಿ ಬೀಳಿಸುತ್ತಿದೆ. ಭಾರೀ ಮಳೆಯಿಂದ ಧಾರವಾಡ ಜಿಲ್ಲೆಯ ಅಳ್ನಾವರದ ಇಂದ್ರಮ್ಮನ ಕೆರೆ ತುಂಬಿದೆ. ಕಿತ್ತೂರು ತಾಲೂಕಿನ ನಿಂಗಾಪುರ ಗ್ರಾಮಕ್ಕೂ ಈ ಇಂದ್ರಮ್ಮನ ಕೆರೆ ವ್ಯಾಪಿಸಿದೆ. ಕೆರೆಯ ಒಂದು ಕಡೆ ಜನವಸತಿ ಪ್ರದೇಶವಿದ್ದರೆ, ಮತ್ತೊಂದೆಡೆ ಕೃಷಿ ಭೂಮಿಯನ್ನು ನಿಂಗಾಪುರ ಜನ ಹೊಂದಿದ್ದಾರೆ.
ಅಪಾಯಕಾರಿ ಕೆರೆಯಲ್ಲಿ ನಿತ್ಯ ಟ್ಯೂಬ್‌ನಿಂದ ನಿರ್ಮಿಸಿದ ಬೋಟ್‌ನಲ್ಲೇ ಜನರು ಕೆರೆ ದಾಟುವ ದುಸ್ಥಿತಿ ಇದೆ. ಎರಡೂ ಕಡೆ ಹಗ್ಗದ ಸಹಾಯದಿಂದ ಟ್ಯೂಬ್ ಎಳೆದು ಮಕ್ಕಳನ್ನು ಕರೆದುಕೊಳ್ಳುತ್ತಾರೆ. ತುಂಬಿದ ಕೆರೆಯಲ್ಲಿ ಮಕ್ಕಳು, ಮಹಿಳೆಯರ ಜೀವ ಕೈಯಲ್ಲಿಡಿದು ಸಂಚಾರ ಮಾಡುತ್ತಿದ್ದಾರೆ. ಎರಡೂವರೆ ದಶಕಗಳು ಕಳೆದರೂ ಸಮಸ್ಯೆ ಬಗೆಹರೆಯದ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಗ್ರಾಮಸ್ಥರು ಹಿಡಿಶಾಪ ಹಾಕುತ್ತಿದ್ದಾರೆ.
ಟಾಯರ್ ಟ್ಯೂಬ್ ಮೇಲೆ ಕೆರೆ ದಾಟುತ್ತಿರುವ ವೃದ್ಧ (ETV Bharat) ಟ್ಯೂಬ್‌ನ ಗಾಳಿ ಹೋದರೆ ಕೆರೆ ಮಧ್ಯದಲ್ಲೇ ನಿಲ್ಲಬೇಕು. ಕೆರೆ ಹರಿಯುವ ಪ್ರದೇಶದಲ್ಲೇ ನೆಟ್‌ವರ್ಕ್ ಕೂಡ ಸಿಗುವುದಿಲ್ಲ. ಒಂದು ವೇಳೆ ಬೋಟ್ ಕೈಕೊಟ್ಟರೆ ಮಕ್ಕಳು ಚೀರಾಡಿ, ಕೂಗಾಡಿ ಜನರನ್ನು ಸಹಾಯಕ್ಕೆ ಕರೆಯಬೇಕು. 25 ವರ್ಷಗಳಿಂದ ಕೆರೆಯಲ್ಲೇ ಪ್ರಾಣಭಯದಲ್ಲೇ ಪ್ರತಿದಿನ ಜನರು ಪ್ರಯಾಣಿಸುವ ಅನಿವಾರ್ಯತೆ ಇದೆ.
ವಿದ್ಯಾರ್ಥಿ ಶಿವಯ್ಯ ಈರಯ್ಯ ನಿಂಗಾಪುರಮಠ ಮಾತನಾಡಿ, "ಪ್ರತಿದಿನ ಶಾಲೆಗೆ ಹೋಗಿ ಬರಲು ಈ ಕೆರೆ ದಾಟಬೇಕು. ಆ ವೇಳೆ ನಮಗೆ ಬಹಳಷ್ಟು ಭಯವಾಗುತ್ತದೆ. ಅಲ್ಲದೇ ಪ್ರತಿ ದಿನ ಎರಡೂ ಬಾರಿ ನಮ್ಮ ಪೋಷಕರು ಕೆರೆ ದಾಟಿಸಲು ಬರುತ್ತಾರೆ. ಚುನಾವಣೆ ವೇಳೆ ಏನೇನೋ ಭರವಸೆ ನೀಡಿ ಜನಪ್ರತಿನಿಧಿಗಳು ಬಂದು ವೋಟ್ ಹಾಕಿ ಎನ್ನುತ್ತಾರೆ. ಆದರೆ, ಇದುವರೆಗೂ ನಮ್ಮ ಬೇಡಿಕೆ ಈಡೇರಿಸಿಲ್ಲ. ಈಗಾಗಲೇ ಕೆಲವು ಹುಡುಗರು ಇಲ್ಲಿ ಬಿದ್ದು, ಹೇಗೋ ಈಜಿ ಬದುಕಿದ್ದಾರೆ. ಹಾಗಾಗಿ, ದಯವಿಟ್ಟು ನಮಗೆ ಒಂದು ಸೇತುವೆ ಕಟ್ಟಿಸಿ ಕೊಡಿ" ಎಂದು ಮನವಿ ಮಾಡಿದರು.
ಟಾಯರ್ ಟ್ಯೂಬ್ ಮೇಲೆ ಕೆರೆ ದಾಟುತ್ತಿರುವ ಮಕ್ಕಳು (ETV Bharat) ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಪ್ರತಿಕ್ರಿಯಿಸಿ, "ನಿಂಗಾಪುರ ಕೆರೆಯಲ್ಲಿ ಜನರ ಓಡಾಟ ನನ್ನ ಗಮನಕ್ಕೆ ಬಂದಿದೆ. ಈಗಾಗಲೇ ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ ಅವರ ಜೊತೆಗೂ ನಾನು ಮಾತನಾಡಿದ್ದೇನೆ. ಜನರ ಓಡಾಟಕ್ಕೆ ತಕ್ಷಣವೇ ಒಂದು ಬೋಟ್ ವ್ಯವಸ್ಥೆ ಮಾಡಲಾಗುವುದು. ಮಕ್ಕಳು ಮತ್ತು ಜನರಿಗೆ ಯಾವುದೇ ತೊಂದರೆ ಆಗದಂತೆ ಕ್ರಮ ವಹಿಸುತ್ತೇವೆ. ಕಿರು ಸೇತುವೆ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವಣೆ ಸಲ್ಲಿಸಲಾಗುವುದು. ಜಿಲ್ಲೆಯ ಎಲ್ಲಾ ಕೆರೆ ಮತ್ತು ನದಿಗಳಲ್ಲಿ ಈಜುವುದು, ಮೀನು ಹಿಡಿಯುವುದಕ್ಕೆ ನಿರ್ಬಂಧ ವಿಧಿಸಿದ್ದೇವೆ. ಸದ್ಯ ನಮ್ಮ ಬಳಿ 36 ಬೋಟ್ ಗಳಿದ್ದು, ಎಲ್ಲೆಲ್ಲಿ ಅವಶ್ಯಕತೆ ಇದೆ, ಅಲ್ಲೆಲ್ಲಾ ಅವುಗಳನ್ನು ಬಳಸಿಕೊಳ್ಳುತ್ತೇವೆ" ಎಂದು ತಿಳಿಸಿದರು.
ಇದನ್ನೂ ಓದಿ:ರಾಜ್ಯದ ಬಹುತೇಕ ಕಡೆ ಇನ್ನೂ ಏಳು ದಿನ ಭಾರಿ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ - Seven more days heavy rain