ಚಿಕ್ಕೋಡಿ:
- ಪ್ರಿಯಾಂಕಾ ಜಾರಕಿಹೊಳಿ- ಗೆಲುವು
- ಅಣ್ಣಾಸಾಹೇಬ್ ಜೊಲ್ಲೆ- ಸೋಲು
ರಾಜ್ಯ ರಾಜಕಾರಣ ಬೇರೆ, ಆದರೆ ಬೆಳಗಾವಿ ರಾಜಕಾರಣ ಒಂದು ಪವರ್ ಸೆಂಟರ್ ಇದ್ದಂತೆ. ಬೆಳಗಾವಿಯಿಂದಲೇ ಸರ್ಕಾರ ಉರುಳಿಸುವುದು ಬೆಳಗಾವಿಯಿಂದಲೇ ಸರ್ಕಾರ ರಚಿಸುವುದರ ಮಟ್ಟಿಗೆ ಜಿಲ್ಲೆಯ ರಾಜಕಾರಣಿಗಳು ಮತ್ತು ಅವರ ರಾಜಕೀಯ ವರ್ಚಸ್ಸು ಆ ಮಟ್ಟಿಗಿದೆ. ಈ ಚುನಾವಣೆಯಲ್ಲಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಪ್ರತಿಷ್ಠಿತ ಎರಡು ಮನೆತನಗಳ ನಡುವೆ ರಾಜಕೀಯ ಜಿದ್ದಾಜಿದ್ದಿ ಪ್ರಾರಂಭವಾಗಿತ್ತು. ಅಂತಿಮವಾಗಿ ಕಾಂಗ್ರೆಸ್ನ ಪ್ರಿಯಾಂಕಾ ಜಾರಕಿಹೊಳಿ ಗೆಲುವು ಸಾಧಿಸಿದ್ದಾರೆ. ಜಯ ಗಳಿಸುವ ಉತ್ಸಾಹದಲ್ಲಿದ್ದ ಬಿಜೆಪಿ ಭಾರೀ ಸೋಲು ಅನುಭವಿಸಿದೆ.
ಎರಡು ಮನೆತನಗಳ ನಡುವೆ ಬಿಗ್ ಫೈಟ್:ಹಾಲಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಎರಡನೇ ಬಾರಿಗೆ ಅದೃಷ್ಟ ಪರೀಕ್ಷೆಗಿಳಿದಿದ್ದರು. ಆದ್ರೆ ಅದೃಷ್ಟ ದೇವತೆ ಅಣ್ಣಾಸಾಹೇಬ್ ಜೊಲ್ಲೆ ಕೈ ಹಿಡಿಯಲಿಲ್ಲ. ಅವರ ವಿರುದ್ಧ ಕಾಂಗ್ರೆಸ್ನಿಂದ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಇದೇ ಮೊದಲ ಬಾರಿಗೆ ಕಣಕ್ಕಿಳಿದು ಪ್ರಥಮ ಪ್ರಯತ್ನದಲ್ಲೇ ಗೆಲುವಿನ ನಗೆ ಬೀರಿದ್ದಾರೆ.