ಕರ್ನಾಟಕ

karnataka

ETV Bharat / state

ಎರಡು ಪ್ರಭಾವಿ ರಾಜಕೀಯ ಮನೆತನಗಳ ಪ್ರತಿಷ್ಠಿತ ಫೈಟ್​ಗೆ ಚಿಕ್ಕೋಡಿ ಲೋಕಸಭಾ ಅಖಾಡ ಸಜ್ಜು - Lok Sabha election - LOK SABHA ELECTION

ಚಿಕ್ಕೋಡಿ ಲೋಕಸಭೆಯಿಂದ ಹಾಲಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಎರಡನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದು ಅವರ ವಿರುದ್ಧ ಕಾಂಗ್ರೆಸ್​​ನಿಂದ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಇದೇ ಮೊದಲ ಬಾರಿಗೆ ಕಣಕ್ಕಿಳಿದಿದ್ದಾರೆ.

Etv Bharat
ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ್ ಜೊಲ್ಲೆ, ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ

By ETV Bharat Karnataka Team

Published : Mar 22, 2024, 4:38 PM IST

Updated : Mar 27, 2024, 1:24 PM IST

ಚಿಕ್ಕೋಡಿ:ರಾಜ್ಯ ರಾಜಕಾರಣ ಬೇರೆ, ಆದರೆ ಬೆಳಗಾವಿ ರಾಜಕಾರಣ ಒಂದು ಪವರ್ ಸೆಂಟರ್, ಬೆಳಗಾವಿಯಿಂದಲೇ ಸರ್ಕಾರ ಉರುಳಿಸುವುದು ಬೆಳಗಾವಿಯಿಂದಲೇ ಸರ್ಕಾರ ರಚಿಸುವುದರ ಮಟ್ಟಿಗೆ ಬೆಳಗಾವಿ ರಾಜಕಾರಣ ವರ್ಚಸ್ಸು ಪಡೆದುಕೊಂಡಿದೆ. ಸದ್ಯಕ್ಕೆ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಪ್ರತಿಷ್ಠಿತ ಎರಡು ಮನೆತನಗಳ ನಡುವೆ ರಾಜಕೀಯ ಯುದ್ಧ ಪ್ರಾರಂಭವಾಗಿದ್ದು, ಮತದಾರರಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ಚಿಕ್ಕೋಡಿ ಲೋಕಸಭಾ ಕ್ಷೇತ್ರ

ಹಾಲಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಎರಡನೇ ಬಾರಿಗೆ ಅದೃಷ್ಟ ಪರೀಕ್ಷೆಗಿಳಿದಿದ್ದು, ಅವರ ವಿರುದ್ಧ ಕಾಂಗ್ರೆಸ್​​ನಿಂದ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಇದೇ ಮೊದಲ ಬಾರಿಗೆ ಕಣಕ್ಕಿಳಿದಿದ್ದಾರೆ. ಹೀಗಾಗಿ ಜೊಲ್ಲೆ ಜಾರಕಿಹೊಳಿ ಮಧ್ಯೆ ಜಬರದಸ್ತ್​ ಫೈಟ್​ಗೆ ಚಿಕ್ಕೋಡಿ ಲೋಕಸಭಾ ಚುನಾವಣೆ ಕಣವಾಗಿ ಸಾಕ್ಷಿಯಾಗಲಿದೆ.

ಚಿಕ್ಕೋಡಿ ಲೋಕಸಭಾ ಕ್ಷೇತ್ರ

ಚಿಕ್ಕೋಡಿ ಲೋಕಸಭೆ ವ್ಯಾಪ್ತಿ ಒಟ್ಟು 17,41,758 ಮತದಾರರಿದ್ದು, ಅದರಲ್ಲಿ ಪುರುಷರು 8,75,953 ಮತದಾರರು ಇದ್ದರೆ 8,65,731 ಮಹಿಳಾ ಮತದಾರರು ಹೊಂದಿದ್ದಾರೆ ಜೊತೆಗೆ 74 ಇತರ ಮತದಾರರು ಇದ್ದಾರೆ.

ಜಾತಿವಾರು ಲೆಕ್ಕಾಚಾರದ ವಿವರ:

ಲಿಂಗಾಯತ: 4,10,000
ಕುರುಬ: 1,70,000
ಎಸ್ ಸಿ: 1,65,000
ಎಸ್ ಟಿ : 90,000
ಮುಸ್ಲಿಂ: 1,80,000
ಜೈನ್: 1,30,000
ಮರಾಠ: 1,70,000
ಇತರ ಮತದಾರರು: 2,55,000 ಜನರಿದ್ದಾರೆ.

ಲಿಂಗಾಯಿತ ಮತದಾರರರೇ ನಿರ್ಣಾಯಕರು.


ಚಿಕ್ಕೋಡಿ ಲೋಕಸಭಾ ಕ್ಷೇತ್ರ ಪರಿಚಯ :1971 ರಲ್ಲಿ ಪ್ರಥಮ ಬಾರಿಗೆ ಮೀಸಲು ಕ್ಷೇತ್ರವಾಗಿ ರಚಿತವಾದ ಚಿಕ್ಕೋಡಿ ಲೋಕಸಭೆ ಸತತ 6 ಅವಧಿ ವರೆಗೆ ಸಹ ಕಾಂಗ್ರೆಸ್​ ತೆಕ್ಕೆಯಲ್ಲಿತ್ತು. ಅದಾದ ಬಳಿಕ ಈಗಿನ ವಿಜಯಪುರ ಹಾಲಿ ಸಂಸದ ರಮೇಶ ಜಿಗಜಿಣಗಿ ಸಹ ಒಂದು ಬಾರಿ ಜೆಡಿಯು ನಿಂದ ಮತ್ತೆರಡು ಬಾರಿ ಬಿಜೆಪಿಯಿಂದ ಸ್ಪರ್ಧೆ ಮಾಡಿ ಗೆದ್ದಿದ್ದರು.

ಚಿಕ್ಕೋಡಿ ಲೋಕಸಭಾ ಕ್ಷೇತ್ರ
ಚಿಕ್ಕೋಡಿ ಲೋಕಸಭಾ ಕ್ಷೇತ್ರ

2009ರಲ್ಲಿ ಮೀಸಲು ತೆರವಾದ ಮೇಲೆ ರಮೇಶ ಕತ್ತಿ ಒಂದು ಬಾರಿ ಹಾಗೂ ಕಾಂಗ್ರೆಸ್​​​ನ ಪ್ರಕಾಶ ಹುಕ್ಕೇರಿ ಒಂದು ಬಾರಿ ಗೆಲವು ಸಾಧಿಸಿದ್ದಾರೆ. ಸದ್ಯ ಅಣ್ಣಾಸಾಹೇಬ್ ಜೊಲ್ಲೆ ಮತ್ತು ಪ್ರಿಯಾಂಕಾ ಜಾರಕಿಹೊಳಿ ಕಣದಲ್ಲಿ ಇದ್ದಾರೆ. ಈಗಾಗಲೇ ಒಂದು ಬಾರಿ ಲೋಕಸಭಾ ಚುನಾವಣೆಯಲ್ಲಿ ಚಿಕ್ಕೋಡಿಯಿಂದ ಗೆದ್ದಿರುವ ಅಣ್ಣಾಸಾಹೇಬ್ ಜೊಲ್ಲೆ ಎರಡನೇ ಬಾರಿಗೆ ಮತ್ತೆ ಕಣದಲ್ಲಿದ್ದಾರೆ.

ಅಣ್ಣಾಸಾಹೇಬ್ ಜೊಲ್ಲೆಗೆ ಕೈ ಹಿಡಿಯಲಿದೆಯಾ ಮೋದಿ ಅಲೆ ?:ಅಣ್ಣಾಸಾಹೇಬ್ ಜೊಲ್ಲೆಗೆ ಕ್ಷೇತ್ರದಲ್ಲಿ ಮೋದಿ ಅಲೆ ಗೆಲುವಿಗೆ ಸಹಕಾರ ಆಗಲಿದೆ ಎನ್ನುವ ಮಾತುಗಳು ಕೇಳಿ ಬರ್ತಿವೆ. ಅಲ್ಲದೇ ರಾಮಮಂದಿರ, ಲಿಂಗಾಯತ ಮತಗಳು ಹಾಗೂ ಸಹ ಅಣ್ಣಾಸಾಹೇಬ್ ಜೊಲ್ಲೆ ಗೆಲುವಿಗೆ ಕಾರಣ ಆಗಬಹುದು ಎನ್ನುವುದರ ಮೇಲೆ ಲೆಕ್ಕಾಚಾರ ಹಾಕಲಾಗಿದೆ. ಇನ್ನು ಇಲ್ಲಿ ಹೇಳಿಕೊಳ್ಳುವಂಥ ದೊಡ್ಡ ಯೋಜನೆ, ಉದ್ಯೋಗ ಸೃಷ್ಟಿ ಆಗಿಲ್ಲ. ಚಿಕ್ಕೋಡಿ ಲೋಕಸಭೆ ವ್ಯಾಪ್ತಿಯ 8 ಕ್ಷೇತ್ರಗಳ ಪೈಕಿ 5 ರಲ್ಲಿ ಕಾಂಗ್ರೆಸ್ ಶಾಸಕರು ಇರೋದ್ರಿಂದ ಅಣ್ಣಾಸಾಹೇಬ್ ಜೊಲ್ಲೆಯವರಿಗೆ ಈ ಬಾರಿ ಗೆಲುವು ಕಬ್ಬಿಣದ ಕಡಲೆ ಆಗಲಿದೆ ಎನ್ನುವ ಲೆಕ್ಕಾಚಾರಗಳು ಕ್ಷೇತ್ರದಲ್ಲಿ ಚರ್ಚೆಯಲ್ಲಿವೆ.

ಚಿಕ್ಕೋಡಿ ಲೋಕಸಭಾ ಕ್ಷೇತ್ರ

ತಂದೆ ಸತೀಶ್​ ರಾಜಕೀಯ ವರ್ಚಸ್ಸು ನೆಚ್ಚಿರುವ ಪ್ರಿಯಾಂಕಾ ಜಾರಕಿಹೊಳಿ:ಇನ್ನು ತಂದೆ ವರ್ಚಸ್ಸಿನ ಮೇಲೆ ಟಿಕೆಟ್ ಗಿಟ್ಟಿಸಿಕೊಂಡು ಸ್ಪರ್ಧೆಗೆ ಇಳಿದಿರೋ ಪ್ರಿಯಾಂಕಾ ಜಾರಕಿಹೊಳಿ ಎಂಬಿಎ ಪದವೀಧರೆ. ಅಲ್ಲದೇ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಹಾಗೂ ಜಿಲ್ಲಾದ್ಯಂತ ತಂದೆ ಸತೀಶ್​ ಅವರ ವರ್ಚಸ್ಸು ಈ ಬಾರಿ ಪ್ರಿಯಾಂಕಾ ಗೆಲುವಿಗೆ ಕಾರಣ ಆಗಬಹುದು ಎನ್ನಲಾಗುತ್ತಿದೆ. ಇನ್ನು ರಾಜಕೀಯಕ್ಕೆ ಹೊಸಬರಾಗಿರುವ ಪ್ರಿಯಾಂಕಾಗೆ ರಾಜಕೀಯ ಅನುಭವದ ಕೊರತೆ ಇದೆ. ಕ್ಷೇತ್ರದ ಕಾಂಗ್ರೆಸ್ ಹಿರಿಯ ಶಾಸಕರು ಪ್ರಿಯಾಂಕಾ ಜಾರಕಿಹೊಳಿ ಗೆಲ್ಲಿಸೋಕೆ ಮನಸ್ಸು ಮಾಡ್ತಾರಾ ಎನ್ನುವ ಪ್ರಶ್ನೆಗಳು ಸಹ ಕ್ಷೇತ್ರದಾದ್ಯಂತ ಚರ್ಚೆ ಆಗ್ತಿವೆ.

ಚಿಕ್ಕೋಡಿ ಲೋಕಸಭಾ ಕ್ಷೇತ್ರ

ಕೃಷಿಗೆ ನೀರಾವರಿ ಒದಗಿಸುವಲ್ಲಿ ವಿಫಲ:ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯ ಒಂದು ಭಾಗದಲ್ಲಿ ಅತಿ ವೃಷ್ಟಿಯಿಂದ ಜನ ಬಸವಳಿದು ಹೋಗ್ತಿದ್ರೆ ಇನ್ನೊಂದು ಭಾಗದಲ್ಲಿ ಜನ ಅನಾವೃಷ್ಠಿಯಿಂದ ಹೊರಬರಲಾರದೇ ಒದ್ದಾಡುತ್ತಿದ್ದಾರೆ. ಕ್ಷೇತ್ರದಲ್ಲಿ ದೂಧಗಂಗಾ ವೇದಗಂಗಾ ಕೃಷ್ಣಾದಂತ ದೊಡ್ಡ ನದಿಗಳು ಹದಿದಿದ್ದರೂ ಸಮರ್ಪಕ ನೀರಾವರಿ ವ್ಯವಸ್ಥೆ ಕಲ್ಪಿಸುವಲ್ಲಿ ರಾಜಕಾರಣಿಗಳು ವಿಫಲರಾಗಿರುವುದು ಸುಳ್ಳಲ್ಲ. ಸದ್ಯ ಎರಡು ಮನೆತನಗಳ ಮಧ್ಯೆ ನಡೆದ ರಾಜಕೀಯದ ಜಂಗಿ ಕುಸ್ತಿಯಲ್ಲಿ ಯಾರು ವಿಜಯ ಪತಾಕೆ ಹಾರಿಸುವರು ಎನ್ನುವುದು ಮಾತ್ರ ನಿಗೂಢವಾಗಿದೆ.

ಇದನ್ನೂ ಓದಿ:ಲೋಕಸಭೆ ಚುನಾವಣೆಯಲ್ಲಿ ಎಲ್ಲರೂ ನಮಗೆ ಬೆಂಬಲ ನೀಡ್ತಾರೆ: ಜಿ.ಎಂ.ಸಿದ್ದೇಶ್ವರ್ ದಂಪತಿ - LOK SABHA ELECTIONS

Last Updated : Mar 27, 2024, 1:24 PM IST

ABOUT THE AUTHOR

...view details