ಚಿಕ್ಕಮಗಳೂರು:ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ 'ಗೋ ಬ್ಯಾಕ್' ಚಳವಳಿ ತೀವ್ರಗೊಂಡಿದೆ. ಈ ಬಾರಿ ಯಾವುದೇ ಕಾರಣಕ್ಕೂ ಶೋಭಾ ಕರಂದ್ಲಾಜೆಗೆ ಟಿಕೆಟ್ ಕೊಡಬಾರದು ಎಂದು ಕಾರ್ಯಕರ್ತರು ಒತ್ತಾಯಿಸಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಈವರೆಗೆ ನಡೆಯುತ್ತಿದ್ದ ಪತ್ರ ಚಳವಳಿ, ಸಾಮಾಜಿಕ ಜಾಲತಾಣಗಳ 'ಗೋ ಬ್ಯಾಕ್' ಚಳವಳಿ ಬೀದಿಗೆ ಬಂದಿದೆ.
ಶಾಸಕ ಆರಗ ಜ್ಞಾನೇಂದ್ರ, ಮುಖಂಡ ಭಾನು ಪ್ರಕಾಶ್ ಸೇರಿ ಹಲವು ಮುಖಂಡರ ನೇತೃತ್ವದಲ್ಲಿ ಚುನಾವಣಾ ನಿರ್ವಹಣಾ ಸಮಿತಿ ಸಭೆ ಭಾನುವಾರ ನಡೆಯುತ್ತಿತ್ತು. ಈ ವೇಳೆ ವೇದಿಕೆ ಬಳಿಗೆ ಬಂದ ಕಾರ್ಯಕರ್ತರು, ಈ ಬಾರಿ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್ ಕೊಡಬಾರದು. ಚಿಕ್ಕಮಗಳೂರು ಜಿಲ್ಲೆಯವರಿಗೇ ಟಿಕೆಟ್ ನೀಡಬೇಕು. ಸಂಸದೆ ಕಾರ್ಯಕರ್ತರ ಕೈಗೆ ಸಿಗುವುದಿಲ್ಲ, ಕಾರ್ಯಕರ್ತರ ಜೊತೆ ನಿಲ್ಲುವುದಿಲ್ಲ. ಚುನಾವಣೆಯ ಸಂದರ್ಭದಲ್ಲಿ ಮಾತ್ರ ಬರುತ್ತಾರೆ. ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಸೋಲಲು ಕರಂದ್ಲಾಜೆ ಅವರೇ ನೇರ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಭ್ಯರ್ಥಿ ಯಾರು ಎಂಬುದು ಇನ್ನೂ ಇತ್ಯರ್ಥ ಆಗಿಲ್ಲ. ಶೋಭಾ ಅವರು 3 ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯರಾದ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಅವರು ಯಾರನ್ನು ಕೇಳಿ ಈ ರೀತಿಯ ಹೇಳಿಕೆ ನೀಡಿದ್ದಾರೆ ಎಂದು ಕಾರ್ಯಕರ್ತರು ಕಿಡಿಕಾರಿದರು. ಇನ್ನು ಕಾರ್ಯಕರ್ತರನ್ನು ಸಮಾಧಾನಪಡಿಸಲು ಪಕ್ಷದ ಮುಖಂಡರು ಪ್ರಯತ್ನಿಸಿದರು. ಆದರೆ, ಸುಮ್ಮನಾಗದ ಕಾರ್ಯಕರ್ತರು, ಕಚೇರಿಯಿಂದ ಹೊರಬಂದು ಗೋ ಬ್ಯಾಕ್ ಶೋಭಾ ಎಂದು ಘೋಷಣೆ ಕೂಗಿದರು.