ಯಲಹಂಕ (ಬೆಂಗಳೂರು): ಲೋಕಸಭಾ ಚುನಾವಣೆ ಹಿನ್ನೆಲೆ ಪಕ್ಷದೊಳಗಿನ ಭಿನ್ನಮತ ಶಮನ ಮಾಡಲು ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್ ಅವರನ್ನು ಭೇಟಿ ಮಾಡಲು ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಡಾ. ಕೆ.ಸುಧಾಕರ್ ಆಗಮಿಸಿದ್ದರು. ಆದರೆ ಶಾಸಕ ಎಸ್ ಆರ್ ವಿಶ್ವನಾಥ್ ಅವರು ಮನೆಯಿಂದ ಹೊರಗಡೆ ಹೋಗಿದ್ದಾರೆ ಎಂದು ಹೇಳಿ ಸಿಬ್ಬಂದಿ ಮನೆ ಗೇಟ್ ಬಳಿಯಿಂದಲೇ ಸುಧಾಕರ್ ಅವರನ್ನು ವಾಪಸ್ ಕಳುಹಿಸಿದ್ದಾರೆ. ಮಗನಿಗೆ ಟಿಕೆಟ್ ಕೈ ತಪ್ಪಿದ್ದಕ್ಕೆ ಶಾಸಕ ವಿಶ್ವನಾಥ್ ಅಸಮಾಧಾನಗೊಂಡಿದ್ದಾರೆ. ಇದೀಗ ತಮ್ಮ ಭೇಟಿಗೆ ಸುಧಾಕರ್ ಅವರಿಗೆ ಅವಕಾಶ ನೀಡದೆ ನಿರಾಸೆಯುಂಟು ಮಾಡಿದ್ದಾರೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಸುಧಾಕರ್ ಮಾತನಾಡಿ, ಕ್ಷೇತ್ರದ 7 ಕಡೆ ಪ್ರಚಾರ ಆರಂಭವಾಗಿದೆ. ಆದರೆ ಯಲಹಂಕದಲ್ಲಿ ಇನ್ನೂ ಪ್ರಚಾರ ಆರಂಭ ಮಾಡಲು ಆಗಿಲ್ಲ. ಎಲ್ಲರಿಗೂ ಗೊತ್ತಿರುವಂತೆ ಶಾಸಕ ಎಸ್ ಆರ್ ವಿಶ್ವನಾಥ್ ಅವರಿಗೆ ಮೊದಲಿನಿಂದಲು ಬೇಸರವಿದೆ. ಹಲವು ಬಾರಿ ವಿಶ್ವನಾಥ್ ಅವರಿಗೆ ಕರೆ ಮಾಡಿ ಮೆಸೇಜ್ ಸಹ ಮಾಡಿದ್ದೆ. ಆದರೆ ಅವರು ಯಾವುದಕ್ಕೂ ಉತ್ತರ ಕೊಡಲಿಲ್ಲ. ಹೀಗಾಗಿ ನಾನೇ ಖುದ್ದು ಇಂದು ಅವರ ಮನೆಗೆ ಭೇಟಿ ಮಾಡಲು ಬಂದಿದ್ದೇನೆ. ಆದರೆ ಅವರು ಮನೆಯಲಿಲ್ಲ ಅಂತ ವಾಚ್ ಮ್ಯಾನ್ ಹೇಳುತ್ತಿದ್ದಾರೆ. ಇನ್ನೂ ಎರಡು ಮೂರು ಬಾರಿ ವಿಶ್ವನಾಥ್ ಅವರನ್ನು ಕನ್ವಿನ್ಸ್ ಮಾಡುವ ಪ್ರಯತ್ನ ಮಾಡುತ್ತೀನಿ. ಇದೊಂದೇ ಚುನಾವಣೆ ಕೊನೆಯಲ್ಲ, ಮುಂದೆಯೂ ನಾವು ಜೊತೆಯಾಗಿ ಸಾಗಬೇಕಾಗುತ್ತೆ ಎಂದರು.