ಮಂಡ್ಯ:ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಗುರುವಾರ ರಾತ್ರಿ ವಿಶ್ವವಿಖ್ಯಾತ ಮೇಲುಕೋಟೆಯ ವೈರಮುಡಿ ಬ್ರಹ್ಮೋತ್ಸವ ವಿಜೃಂಭಣೆಯಿಂದ ನಡೆಯಿತು. ರಾತ್ರಿ 8:30 ಗಂಟೆಗೆ ಬ್ರಹ್ಮೋತ್ಸವ ಆರಂಭವಾಗಿತ್ತು. ಪೂರ್ವ, ಫಲ್ಗುಣಿ ನಕ್ಷತ್ರದಲ್ಲಿ ರಥೋತ್ಸವಕ್ಕೆ ಚಾಲನೆ ನೀಡುತ್ತಿದ್ದಂತೆ ಕಾತರದ ಕಂಗಳಿಂದ ಕಾಯುತ್ತಿದ್ದ ಅಪಾರ ಭಕ್ತರು ಜಯಘೋಷಗಳೊಂದಿಗೆ ರಥ ಎಳೆದು ಭಕ್ತಿಭಾವ ಮೆರೆದರು.
ವಿವಿಧ ಬಗೆಯ ಹೂಗಳಿಂದ ಸಿಂಗಾರಗೊಂಡಿದ್ದ ಚೆಲುವನಾರಾಯಣಸ್ವಾಮಿ ರಥ ಪ್ರಮುಖ ಆಕರ್ಷಣೆಯಾಗಿತ್ತು. ರಥಬೀದಿಯಲ್ಲಿ ಸಾಗುವ ವೇಳೆ ನೂಕು ನುಗ್ಗಲು ಉಂಟಾಯಿತು. ಭಕ್ತರು ಭಕ್ತಿಗೀತೆಗಳನ್ನು ಪಠಿಸುತ್ತಾ ಹೆಜ್ಜೆ ಹಾಕುತ್ತಿದ್ದರು. ದೇವಾಲಯದ ರಾಜಬೀದಿಯ ಇಕ್ಕೆಲಗಳಲ್ಲಿ ಹಾಗು ಕಟ್ಟಡಗಳ ಮೇಲೆ ನಿಂತು ಸ್ವಾಮಿಯ ಉತ್ಸವಮೂರ್ತಿ ಹಾಗೂ ಶ್ರೀದೇವಿ-ಭೂದೇವಿ ಅಮ್ಮನವರನ್ನು ಜನರು ಕಣ್ತುಂಬಿಕೊಂಡರು.
ರಥೋತ್ಸವಕ್ಕೆ ಮುನ್ನ ಅಮ್ಮನವರ ಸನ್ನಿಧಿಯ ಬಳಿ ಯಾತ್ರಾದಾನ ಕಾರ್ಯಕ್ರಮ ನಡೆಯಿತು. ಇದಾದ ನಂತರ ಚೆಲುವನಾರಾಯಣ ಸ್ವಾಮಿ ದೇವಾಲಯದಲ್ಲಿ ಉತ್ಸವ ಮೂರ್ತಿಗೆ ರಾಜಮುಡಿ ಧಾರಣೆ ಹಾಗೂ ಶ್ರೀದೇವಿ, ಭೂದೇವಿ ಅಮ್ಮ ಮತ್ತು ರಾಮಾನುಜಾಚಾರ್ಯ ವಿಗ್ರಹಗಳನ್ನು ವಿಶೇಷ ಪುಷ್ಪಗಳಿಂದ ಅಲಂಕರಿಸಲಾಯಿತು.
ಚಿನ್ನಲೇಪಿತ ಛತ್ರಿ ದಾನ:ಮೇಲುಕೋಟೆಗೆ ಸಚಿವ ಚಲುವರಾಯಸ್ವಾಮಿ ದಂಪತಿ ಭೇಟಿ ನೀಡಿ ಮನೆ ದೇವರ ದರ್ಶನ ಪಡೆದು, 5.45 ಕೆ.ಜಿ ಬೆಳ್ಳಿಯಿಂದ ತಯಾರಿಸಿದ ಚಿನ್ನಲೇಪಿತ ಛತ್ರಿಯನ್ನು ದಾನ ಮಾಡಿದರು.