ಬೆಳಗಾವಿ: ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಕೂಲಿ-ನಾಲಿ ಮಾಡಿಕೊಂಡೇ ಬದುಕಿನ ಬಂಡಿ ಸಾಗಿಸಬೇಕು. ಇಂಥ ಬಡವರನ್ನೇ ಗುರಿಯಾಗಿಸಿಕೊಂಡ ಮಧ್ಯವರ್ತಿಯೊಬ್ಬ ಸಬ್ಸಿಡಿ ಆಸೆ ತೋರಿಸಿ, ಸಾಲದ ಖೆಡ್ಡಾಕ್ಕೆ ಕೆಡವಿರುವ ಆರೋಪ ಬೈಲಹೊಂಗಲ ತಾಲ್ಲೂಕಿನ ಗಜಮಿನಾಳ ಗ್ರಾಮದಲ್ಲಿ ಕೇಳಿಬಂದಿದೆ. ಈ ಕುರಿತು ಈಟಿವಿ ಭಾರತದ ಪ್ರತ್ಯಕ್ಷ ವರದಿ ಇಲ್ಲಿದೆ.
ಸಾಲದ ಕೂಪಕ್ಕೆ ಸಿಲುಕಿದ ಬೈಲಹೊಂಗಲ ತಾಲ್ಲೂಕಿನ ಗಜಮಿನಾಳ ಗ್ರಾಮದ ಸಂತ್ರಸ್ತರ ಗೋಳು ಹೇಳತೀರದಾಗಿದೆ. ಸರ್ಕಾರ ದಯವಿಟ್ಟು ನಮ್ಮ ಸಹಾಯಕ್ಕೆ ಧಾವಿಸಬೇಕು. ಇಲ್ಲದಿದ್ದರೆ ನಾವು ಬದುಕುವುದೇ ದುಸ್ತರವಾಗುತ್ತದೆ ಎಂದು ಗಜಮಿನಾಳ ಸಂತ್ರಸ್ತರು ಅಲವತ್ತುಕೊಂಡಿದ್ದಾರೆ. ಆ ಮಧ್ಯವರ್ತಿ ವಿರುದ್ಧ ಬೆಳಗಾವಿಯ ಮಾಳಮಾರುತಿ ಠಾಣೆ ಸೇರಿ ಮತ್ತಿತರ ಠಾಣೆಗಳಲ್ಲಿ ದೂರು ದಾಖಲಾಗಿದ್ದು, ಸದ್ಯ ಆತ ಜೈಲು ಪಾಲಾಗಿದ್ದಾನೆ.
ಬೆಳಗಾವಿಯ ಯಮನಾಪುರ ನಿವಾಸಿ ಹೊಳೆಪ್ಪ ದಡ್ಡಿ ಎಂಬ ವ್ಯಕ್ತಿಯೇ ಜಿಲ್ಲೆಯಲ್ಲಿ ಸಾವಿರಾರು ಮಹಿಳೆಯರಿಗೆ ವಂಚಿಸಿದ್ದಾನೆಂದು ಆರೋಪಿಸಲಾಗಿದೆ. ಗಜಮಿನಾಳ ಗ್ರಾಮದಲ್ಲಿ 200ಕ್ಕೂ ಅಧಿಕ ಮಹಿಳೆಯರಿಗೆ ನೀವು ಯಾವುದೇ ರೀತಿ ಸಾಲ ಮರು ಪಾವತಿ ಮಾಡುವಂತಿಲ್ಲ. ನಾನೇ ತುಂಬುತ್ತೇನೆ. ನಿಮಗೆ ಸಬ್ಸಿಡಿ ಹಣ ಬರುತ್ತದೆ ಎಂದು ಹೇಳಿ, ಫೈನಾನ್ಸ್ಗಳಿಂದ ಸಾಲ ಪಡೆದು ಅದರಲ್ಲಿ ಒಂದಿಷ್ಟು ಹಣವನ್ನು ನಮಗೆ ಕೊಟ್ಟಿದ್ದಾನೆ. ಹೀಗೆ ನಾವೇನು ತುಂಬುವುದಿಲ್ಲ, ನಮಗೆ ಸಬ್ಸಿಡಿ ಹಣ ಸಿಗುತ್ತೆ ಎಂದು ಆಸೆಗೆ ಬಿದ್ದು ಒಂದಲ್ಲ, ಎರಡಲ್ಲ, ಐದಾರು ಸಂಘಗಳಲ್ಲಿ ಸಾಲ ಪಡೆದೆವು. ಈಗ ನೋಡಿದರೆ ನಮಗೆ ವಂಚಿಸಿದವ ಕೈ ಎತ್ತಿದ್ದಾನೆ. ಫೈನಾನ್ಸ್ನವರು ನಿಮ್ಮ ಹೆಸರಲ್ಲಿ ಸಾಲವಿದ್ದು, ಸಾಲದ ಕಂತು ತುಂಬುವಂತೆ ಮನೆಗೆ ದುಂಬಾಲು ಬಿದ್ದಿದ್ದಾರೆ. ಪ್ರತಿ ತಿಂಗಳು 30 ಸಾವಿರಕ್ಕೂ ಅಧಿಕ ಹಣ ತುಂಬಬೇಕು. ನಾವು ಎಲ್ಲಿಂದ ದುಡ್ಡು ತರೋದು ಎನ್ನುವುದು ಸಂತ್ರಸ್ತರ ಅಳಲಾಗಿದೆ.
ಗಜಮಿನಾಳದಲ್ಲಿ ಸಾಲಕ್ಕೆ ಹೆದರಿ 50ಕ್ಕೂ ಅಧಿಕ ಕುಟುಂಬಗಳು ಮನೆಗೆ ಕೀಲಿ ಜಡಿದು ಊರು ಬಿಟ್ಟಿದ್ದು, ಇನ್ನುಳಿದವರು ಸಾಲದ ಚಿಂತೆಯಲ್ಲೇ ದಿನ ದೂಡುವಂತಾಗಿದೆ ಎಂದು ಮಹಿಳೆಯೊಬ್ಬರು ಅಳಲು ತೋಡಿಕೊಂಡಿದ್ದಾರೆ.
ಈಟಿವಿ ಭಾರತ ಜೊತೆಗೆ ಮಾತನಾಡಿದ ಸಂತ್ರಸ್ತೆ ಕಸ್ತೂರಿ ಅಡಿವೆಪ್ಪ ದಂಡಾಪುರ, "ಸಬ್ಸಿಡಿ ಸಿಗುತ್ತೆ ಎಂದು ಯಮನಾಪುರದ ಹೊಳೆಪ್ಪ ದಡ್ಡಿ ನಮಗೆ ಆಸೆ ತೋರಿಸಿದ. ಇದರಿಂದ ನನ್ನ ಹೆಸರಿನಲ್ಲಿ 7 ಮತ್ತು ನಮ್ಮ ಅತ್ತೆ ಹೆಸರಿನಲ್ಲಿ 4 ಸಂಘಗಳಲ್ಲಿ ಸಾಲ ತೆಗೆದುಕೊಂಡಿದ್ದೇನೆ. ಇದರಲ್ಲಿ ಒಂದೊಂದು ಸಂಘದಲ್ಲಿ 60 ಸಾವಿರ ರೂ. ಸಾಲದ ಪೈಕಿ ನಮಗೆ 15, 12 ಸಾವಿರ ರೂ. ಮಾತ್ರ ಕೊಟ್ಟಿದ್ದು, ಇನ್ನುಳಿದ ಹಣವನ್ನು ಆ ಹೊಳೆಪ್ಪನೇ ತೆಗೆದುಕೊಂಡಿದ್ದಾನೆ. 24 ಕಂತು ನಾನೇ ತುಂಬುತ್ತೇನೆ ಎಂದು ಹೇಳಿ ಈಗ ನಮಗೆ ಮೋಸ ಮಾಡಿದ್ದಾನೆ. ಅದರಲ್ಲಿ ಫಸ್ಟ್ ಪಾರ್ಟಿ ನಮ್ಮನ್ನು ಮಾಡಿ, ತಾನು ಸೆಕೆಂಡ್ ಪಾರ್ಟಿ ಎಂದು ಮಾಡಿಸಿ ಐದನೂರು ರೂ. ಬಾಂಡ್ ಕೊಟ್ಟಿದ್ದ. ಫೈನಾನ್ಸ್ನವರು ರಾತ್ರಿ-ಹಗಲು ಎನ್ನದೇ ಮನೆಗೆ ಬರುತ್ತಿದ್ದಾರೆ. ಪ್ರತಿ ತಿಂಗಳು 30 ಸಾವಿರ ರೂ. ತುಂಬಬೇಕು. ಕೂಲಿ ಮಾಡಿ ಅಷ್ಟು ಹಣವನ್ನು ಹೇಗೆ ತುಂಬುವುದು? ಇದನ್ನೇ ತಲೆಗೆ ಹಚ್ಚಿಕೊಂಡು ನಮ್ಮ ಮಾವ ಬಿಪಿ, ಶುಗರ್ ಹೆಚ್ಚಾಗಿ ಈಗ 15 ದಿನಗಳ ಹಿಂದೆ ತೀರಿಕೊಂಡರು" ಎಂದು ತಮ್ಮ ಸಂಕಷ್ಟ ತೋಡಿಕೊಂಡರು.