ಮೈಸೂರು: ಇತಿಹಾಸ ಪ್ರಸಿದ್ಧ ಕ್ಷೇತ್ರ ಕಾರ್ಯ ಶ್ರೀ ಸಿದ್ದೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವದಲ್ಲಿ ರಥೋತ್ಸವ ವಿಜೃಂಭಣೆಯಿಂದ ಭಾನುವಾರ ಜರುಗಿತು. ವಸ್ತ್ರಾಲಂಕಾರ, ಹೂವಿನ ಅಲಂಕಾರಗಳಿಂದ ಶೃಂಗರಿಸಲಾಗಿದ್ದ ಐತಿಹಾಸಿಕ ರಥೋತ್ಸವವನ್ನು ಊರಿನ ಹೊರವಲಯದ ತನಕ ಎಳೆದ ಗ್ರಾಮಸ್ಥರು, ನಂತರ ಖುರ್ಜು ರಥೋತ್ಸವವನ್ನು ತಮ್ಮ ಹೆಗಲ ಮೇಲೆ ಹೊತ್ತು ಶ್ರೀ ಸಿದ್ದೇಶ್ವರ ಸ್ವಾಮಿಯ ಬೆಟ್ಟಕ್ಕೆ ಕೊಂಡೊಯ್ದರು.
ನಂಜನಗೂಡು ತಾಲೂಕಿನ ದೊಡ್ಡಕವಲಂದೆ ಹೋಬಳಿ ವ್ಯಾಪ್ತಿಯ ಕಾರ್ಯ ಗ್ರಾಮದಲ್ಲಿ ಶ್ರೀ ಸಿದ್ದೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ಮೂರು ದಿನಗಳ ಕಾಲ ನಡೆಯುತ್ತದೆ. ಮುಂಜಾನೆ ಅರ್ಚಕರು ಕಾಲ್ನಡಿಗೆಯಲ್ಲಿ ನಡೆದುಕೊಂಡು ಹೋಗಿ ಸುತ್ತೂರಿನ ಕಪಿಲಾ ನದಿಯಿಂದ ನೀರನ್ನು ತಂದು ಶ್ರೀ ಸಿದ್ದೇಶ್ವರ ಸ್ವಾಮಿಯ ವಿಗ್ರಹಕ್ಕೆ ಅಭಿಷೇಕ ಮಾಡಿದರು. ನಂತರ ವಿವಿಧ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಲಾಯಿತು.
ವಿಜೃಂಭಣೆಯಿಂದ ನಡೆದ ಕಾರ್ಯ ಸಿದ್ದೇಶ್ವರ ಸ್ವಾಮಿ ರಥೋತ್ಸವ (ETV Bharat) ಗ್ರಾಮದಲ್ಲಿ ಶ್ರೀ ಸಿದ್ದೇಶ್ವರ ಸ್ವಾಮಿಯವರ ಪಲ್ಲಕ್ಕಿ ಉತ್ಸವಕ್ಕೆ ಜನರು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ವಾಟಾಳು ಮಠದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ವಿದ್ಯುಕ್ತವಾಗಿ ಚಾಲನೆ ನೀಡಿದರು.
ಪ್ರಮುಖ ಆಕರ್ಷಣೆಯಾಗಿರುವ ರಥೋತ್ಸವಕ್ಕೆ ಭಕ್ತರು ಹಣ್ಣು ಜವನ ಎಸೆದು ಪುನೀತರಾದರು. ಹೆಗಲ ಮೇಲೆ ಹೊತ್ತುಕೊಂಡು ಬೆಟ್ಟದ ಮೇಲೆ ಬರುತ್ತಿದ್ದ ದೃಶ್ಯ ಮೈ ರೋಮಾಂಚನಗೊಳಿಸುವಂತಿತ್ತು. ಉಘೇ ಉಘೇ ಸಿದ್ದೇಶ್ವರ ಎಂದು ಭಕ್ತರು ಘೋಷಣೆ ಕೂಗಿದರು. ಹರಕೆ ಹೊತ್ತ ಭಕ್ತರು ಮಜ್ಜಿಗೆ ಪಾನಕ ಸೇರಿದಂತೆ ತಂಪು ಪಾನೀಯವನ್ನು ವಿತರಿಸಿದರು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಡಿವೈಎಸ್ಪಿ ರಘು ಮತ್ತು ಪಿಎಸ್ಐ ಕೃಷ್ಣಕಾಂತ ಕೋಳಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಜಿಲ್ಲೆಯ ಹಲವು ಗ್ರಾಮಗಳಿಂದ ಭಕ್ತರು ಆಗಮಿಸಿದ್ದರು.
ಇದನ್ನೂ ಓದಿ:ಚಾಮುಂಡಿಬೆಟ್ಟದ ದೇವಿಕೆರೆಯಲ್ಲಿ ವಿಜೃಂಭಣೆಯಿಂದ ನೆರವೇರಿದ ತೆಪ್ಪೋತ್ಸವ: ವಿಡಿಯೋ