ಕರ್ನಾಟಕ

karnataka

ನೇಹಾ ಹಿರೇಮಠ ಹತ್ಯೆಗೆ ಲವ್ ಜಿಹಾದ್ ಕಾರಣವಲ್ಲ: ಚಾರ್ಜ್​ಶೀಟ್​ನಲ್ಲಿ ಉಲ್ಲೇಖ - Neha Hiremath Murder Case

By ETV Bharat Karnataka Team

Published : Jul 10, 2024, 1:19 PM IST

ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹಿರೇಮಠ ಎಂಬ ಕಾಲೇಜು ಯುವತಿಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಕೋರ್ಟ್​ಗೆ ಚಾರ್ಜ್​ಶೀಟ್ ಸಲ್ಲಿಸಿದ್ದಾರೆ. ಇದರಲ್ಲಿರುವ ಪ್ರಮುಖ ಅಂಶಗಳು ಇಲ್ಲಿವೆ.

ನೇಹಾ ಹಿರೇಮಠ ಹತ್ಯೆ ಪ್ರಕರಣದ ಚಾರ್ಜ್​ಶೀಟ್
ಹತ್ಯೆಯಾದ ನೇಹಾ ಹಿರೇಮಠ, ಕೊಲೆ ಆರೋಪಿ ಫಯಾಜ್ (ETV Bharat)

ಹುಬ್ಬಳ್ಳಿ: ನೇಹಾ ಹಿರೇಮಠ ಹತ್ಯೆಗೆ ಆರೋಪಿಯ ಹತಾಶೆಯೇ ಕಾರಣ ಎಂದು ಸಿಐಡಿ ಪೊಲೀಸರು ಕೋರ್ಟ್​ಗೆ ಸಲ್ಲಿಸಿರುವ ಚಾರ್ಜ್​ಶೀಟ್​ನಲ್ಲಿ ಉಲ್ಲೇಖಿಸಿದ್ದಾರೆ. ಇದೇ ವೇಳೆ, ಲವ್ ಜಿಹಾದ್​ ಕುರಿತ ಯಾವುದೇ ವಿಚಾರಗಳನ್ನು ನಮೂದಿಸಿಲ್ಲ. ಒಟ್ಟು 483 ಪುಟಗಳ ಚಾರ್ಜ್​ಶೀಟ್ ಸಲ್ಲಿಸಲಾಗಿದೆ.

ನೇಹಾಳ ತಂದೆ, ತಾಯಿ, ಸಹೋದರ, ಸಹಪಾಠಿಗಳು, ಗೆಳತಿಯರು, ಬಿವಿಬಿ ಕಾಲೇಜಿನ ಉಪನ್ಯಾಸಕರು ಸೇರಿದಂತೆ ಒಟ್ಟು 99 ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ. ಪ್ರತ್ಯಕ್ಷ ಸಾಕ್ಷಿಗಳು, ಸಿಸಿಟಿವಿ ದೃಶ್ಯಾವಳಿಗಳು, ದಾಖಲೆಗಳು, ಮರಣೋತ್ತರ ಶವ ಪರೀಕ್ಷೆ ಕೈಗೊಂಡ ವೈದ್ಯರು ಹಾಗೂ ತಜ್ಞರ (ಫೊರೆನ್ಸಿಕ್) ವರದಿಗಳೂ ಅಡಕವಾಗಿವೆ.

ಆರೋಪಿ ಫಯಾಜ್ ವಿರುದ್ಧ ಐಪಿಸಿ ಕಲಂ 302 (ಮರಣದಂಡನೆ ಇಲ್ಲವೇ ಜೀವಾವಧಿ ಶಿಕ್ಷೆ), 341(ಒಂದು ತಿಂಗಳ ಜೈಲು ಶಿಕ್ಷೆ) ಹಾಗೂ 506 (ಜೀವ ಬೆದರಿಕೆಗಾಗಿ 7 ವರ್ಷಗಳ ಜೈಲು ಶಿಕ್ಷೆ) ಅಡಿಯಲ್ಲಿ ದೋಷಾರೋಪ ಹೊರಿಸಲಾಗಿದೆ.

ಮದುವೆ ನಿರಾಕರಣೆ ಕೊಲೆಗೆ ಕಾರಣ: ಫಯಾಜ್​ ಮತ್ತು ನೇಹಾ 2020-21ರಲ್ಲಿ ಹುಬ್ಬಳ್ಳಿಯ ಪಿ.ಸಿ.ಜಾಬಿನ್ ಕಾಲೇಜಿನಲ್ಲಿ ಬಿಸಿಎ ಅಧ್ಯಯನ ಮಾಡುತ್ತಿದ್ದಾಗ ಸಹಪಾಠಿಗಳಾಗಿದ್ದರು. ಇಬ್ಬರೂ ಆರಂಭದಲ್ಲಿ ಸ್ನೇಹಿತರಾಗಿದ್ದರು. 2022ರಲ್ಲಿ ಕ್ರಮೇಣ ಪರಸ್ಪರ ಪ್ರೀತಿಸಲು ಆರಂಭಿಸಿದ್ದರು. 2024ರ ಮಾರ್ಚ್ ತಿಂಗಳಿನಲ್ಲಿ ಇಬ್ಬರಿಗೂ ಮನಸ್ತಾಪ ಉಂಟಾಗಿತ್ತು. ಇದರಿಂದ ಬೇಸತ್ತ ನೇಹಾ, ಫಯಾಜ್ ಜೊತೆ ಮಾತನಾಡುವುದನ್ನು ನಿಲ್ಲಿಸಿದ್ದಳು.

ಫಯಾಜ್‌ನನ್ನು ನೇಹಾ ನಿರ್ಲಕ್ಷ್ಯ ಮಾಡಲು ಆರಂಭಿಸಿದ್ದರಿಂದ ಆತ ಹತಾಶೆಗೊಂಡು ಕೊಲೆ ಮಾಡಲು ನಿರ್ಧರಿಸಿದ್ದಾನೆ. 2024ರ ಏಪ್ರಿಲ್ 18ರಂದು ಸಂಜೆ 4.40ರ ವೇಳೆಗೆ ಚಾಕುವಿನಿಂದ ಮನಬಂದಂತೆ ಚುಚ್ಚಿ ಕೊಲೆ ಮಾಡಿದ್ದಾನೆ. ಕೊಲೆಗೂ ಮುನ್ನ ನೇಹಾಳ ಎದುರು ಫಯಾಜ್, "ಇಷ್ಟು ದಿನ ಪ್ರೀತಿಸಿ ಈಗ ಮೋಸ ಮಾಡುತ್ತಿದ್ದೀಯಾ? ನನ್ನನ್ನು ಮದುವೆ ಆಗುವುದಿಲ್ಲವೇ? ಈಗ ನಿನ್ನನ್ನು ಬಿಡುವುದಿಲ್ಲ" ಎಂದು ಕೂಗುತ್ತಾ ಆಕೆಗೆ ಚಾಕುವಿನಿಂದ ಚುಚ್ಚಿ, ಚಾಕು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದಾನೆ ಎಂದು ಸಿಐಡಿ ಚಾರ್ಜ್‌ಶೀಟ್‌ನಲ್ಲಿ ವಿವರಿಸಲಾಗಿದೆ.

ಹತ್ಯೆಗೆ ಪೂರ್ವ ಸಂಚು: ನೇಹಾ ಕೊಲೆಗೆ ಧಾರವಾಡದಲ್ಲಿ ಫಯಾಜ್​ ಸಂಚು ರೂಪಿಸಿದ್ದ. ಧಾರವಾಡದಲ್ಲಿ ಟೋಪಿ, ಚಾಕು ಖರೀದಿಸಿದ್ದ. ಏಪ್ರಿಲ್ 18ರಂದು ಕೊಲೆ ಮಾಡುವ 3 ದಿನಗಳ ಮೊದಲೇ ಎ.15ರಂದು ಧಾರವಾಡದ ಆರ್ಯ ಸೂಪರ್ ಬಜಾರ್‌ನಲ್ಲಿ ಚಾಕು ಖರೀದಿಸಿದ್ದಾನೆ. ಚಾಕು ಖರೀದಿಸಿದ ಸಿಸಿಟಿವಿ ದೃಶ್ಯ ಸಿಐಡಿಗೆ ಲಭ್ಯವಾಗಿದೆ. ಅದೇ ದಿನ ಧಾರವಾಡದ ನ್ಯೂ ಸಾಯಿ ಗಾರ್ಮೆಂಟ್‌ನಲ್ಲಿ 130 ರೂ. ಕೊಟ್ಟು ಕೆಂಪು ಟೋಪಿ ಖರೀದಿಸಿದ್ದಾನೆ.

ಕೊಲೆ ಮಾಡಲು ಬಿವಿಬಿ ಕಾಲೇಜಿಗೆ ಹೋದಾಗ ಯಾರೂ ಗುರುತು ಹಿಡಿಯಬಾರದೆಂಬ ಕಾರಣಕ್ಕೆ ಕೆಂಪು ಟೋಪಿ ಹಾಕಿಕೊಂಡು ಹೋಗಿದ್ದಾನೆ. ಮುಖಕ್ಕೆ ಕಪ್ಪು ಮಾಸ್ಕ್ ಕೂಡ ಧರಿಸಿದ್ದ. ಅದನ್ನೂ ಧಾರವಾಡದ ಶ್ರೀ ಹನುಮಾನ್ ಮೆಡಿಕಲ್ ಶಾಪ್‌ನಲ್ಲಿ ಖರೀದಿಸಿದ್ದ. ಈ ಬಗ್ಗೆ ಸಿಸಿಟಿವಿ ದೃಶ್ಯಗಳು ಪೊಲೀಸರಿಗೆ ದೊರೆತಿವೆ.

ಸಿಐಡಿ ಜಪ್ತಿ ಮಾಡಿದ ವಸ್ತುಗಳು: ನೇಹಾಳ ರಕ್ತದ ಮಾದರಿಗಳು, 15 ಸೆಂ.ಮೀ. ಹಿಡಿಕೆಯುಳ್ಳ ಮಧ್ಯಮ ಗಾತ್ರದ ಸೈನ್‌ಲೆಸ್ ಸ್ಟೀಲ್ ಚಾಕು, ವೈಲ್ಡ್‌ ಕ್ರಾಫ್ಟ್ ಕಂಪನಿಯ ನೇಹಾಳ ಏರ್ ಬ್ಯಾಗ್, ಐಡಿ ಕಾರ್ಡ್, ಪೆನ್, ಪೆನ್ಸಿಲ್, ಮತ್ತೊಂದು ಏರ್ ಬ್ಯಾಗ್, ಒನ್ ಪ್ಲಸ್ ಮೊಬೈಲ್ ಫೋನ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಅದೇ ರೀತಿ, ಫಯಾಜ್ ಕೊಲೆ ಮಾಡಲು ಬರುವಾಗ ತಂದಿದ್ದ ಹೊಂಡಾ ಆ್ಯಕ್ಟಿವಾ (ಕೆಎ24 ವೈ 5781), ಕೆಲವು ಪೆನ್‌ಡ್ರೈವ್‌ಗಳು ಮತ್ತಿತರ ವಸ್ತುಗಳನ್ನು ತನಿಖೆಯ ವೇಳೆ ಜಪ್ತಿ ಮಾಡಿದ್ದಾರೆ.

ಇದನ್ನೂ ಓದಿ:ನೇಹಾ ಕೊಲೆ ಪ್ರಕರಣದ ಚಾರ್ಜ್‌ಶೀಟ್ ಸಲ್ಲಿಕೆ: ನಿರಂಜನಯ್ಯ ಹಿರೇಮಠ ಹೇಳಿದ್ದೇನು? - Niranjanayya Hiremath

ABOUT THE AUTHOR

...view details