ರಾಮನಗರ:ನನ್ನ ಮೇಲೆ ಚನ್ನಪಟ್ಟಣ ಜನ ನಂಬಿಕೆ ಇಡಿ. ಚನ್ನಪಟ್ಟಣಕ್ಕೆ ಹೊಸ ಚೈತನ್ಯ ತರುವ ಪ್ರಯತ್ನ ಮಾಡುತ್ತಿದ್ದೇನೆ. ಮುಂದಿನ ದಿನಗಳಲ್ಲಿ ನನ್ನ ನಾಯಕತ್ವದಲ್ಲಿ ಚನ್ನಪಟ್ಟಣ ತಾಲ್ಲೂಕು ಬೆಂಗಳೂರಿಗೆ ಸೇರಲಿದೆ ಎಂದು ಮತ್ತೊಮ್ಮೆ ರಾಮನಗರ ಜಿಲ್ಲೆಯವರು ಬೆಂಗಳೂರಿಗೆ ಸೇರಲಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಬೊಂಬೆನಗರಿ ಚನ್ನಪಟ್ಟಣ ತಾಲೂಕಿನಲ್ಲಿ ಇಂದು 9 ಜನಸ್ಪಂದನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, "ಬೇರೆ ಯಾರೂ ಕೂಡ ನಿಮ್ಮ ಮನೆ ಬಾಗಿಲಿಗೆ ಬಂದಿರಲಿಲ್ಲ. ಇಲ್ಲಿವರೆಗೂ ಇಲ್ಲಿ ಇದ್ದವರು ಯಾರೂ ಬಂದಿಲ್ಲ. ಕನಕಪುರದಲ್ಲಿ ಇದೇ ರೀತಿ ಮಾಡಿ ಮಾದರಿಯಾಗಿದ್ದೇವೆ. ನಿಮ್ಮ ಸೇವಕನಾಗಿ ನಾನು ಕೆಲಸ ಮಾಡುತ್ತೇನೆ. ಚನ್ನಪಟ್ಟಣ ಬೆಂಗಳೂರಿಗೆ ಸೇರಿದಲ್ಲಿ ಭೂಮಿಯ ಬೆಲೆಯೂ ಹೆಚ್ಚಾಗಲಿದೆ. ನಾವೆಲ್ಲರೂ ಬೆಂಗಳೂರಿನ ಸಮೀಪವಿದ್ದೇವೆ" ಎಂದರು.
"ಇಂದು ತಾಲೂಕಿನಲ್ಲಿ 9 ಜನಸ್ಪಂದನಾ ಕಾರ್ಯಕ್ರಮಗಳನ್ನು ಮಾಡಲಾಗಿದ್ದು, ಜಿಲ್ಲಾ ಹಾಗೂ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಇಲ್ಲಿಗೆ ಬಂದಿದ್ದಾರೆ. ಈಗಾಗಲೇ 10 ಸಾವಿರ ಅರ್ಜಿಗಳು ಬಂದಿವೆ. ನಿಮ್ಮ ಮನೆ ಬಾಗಿಲಿಗೆ ಬಂದು ಸಮಸ್ಯೆಗೆ ಪರಿಹಾರ ನೀಡಲಾಗುತ್ತಿದೆ. ಎಲ್ಲಿ ಅನ್ಯಾಯ ಆಗಿದೆಯೋ ಅವುಗಳನ್ನು ಸರಿಪಡಿಸುವ ಕೆಲಸ ಮುಂದಿನ ದಿನಗಳಲ್ಲಿ ಆಗಲಿದೆ. ಸೈಟ್, ಮನೆ, ಖಾತೆ, ರಸ್ತೆ, ಚರಂಡಿ ಸೇರಿ ಸಾಕಷ್ಟು ಸಮಸ್ಯೆಗಳು ಗಮನಕ್ಕೆ ಬಂದಿವೆ. ಚನ್ನಪಟ್ಟಣ ಕತ್ತಲೆಯಲ್ಲಿದೆ, ಇದಕ್ಕೆ ಬೆಳಕು ಬೇಕು. ಈ ಕ್ಷೇತ್ರವನ್ನು ಅಭಿವೃದ್ಧಿ ಮಾಡಲು ನಾವಿಲ್ಲಿ ಬಂದಿರೋದು" ಎಂದು ಡಿಕೆಶಿ ಹೇಳಿದರು.