ಬೆಂಗಳೂರು : ಚನ್ನಪಟ್ಟಣ ಕ್ಷೇತ್ರದ ಟಿಕೆಟ್ ಸಸ್ಪೆನ್ಸ್ ಮುಂದುವರಿದಿದೆ. ಸಿ.ಪಿ.ಯೋಗೇಶ್ವರ್ ನಡೆ ಅತ್ತ ಜೆಡಿಎಸ್ ನಾಯಕರಿಗೂ ತಲೆನೋವು ತಂದಿರುವುದರ ಜೊತೆಗೆ ಇತ್ತ ಕಾಂಗ್ರೆಸ್ ಲೆಕ್ಕಾಚಾರವನ್ನೂ ಸಂಕೀರ್ಣಗೊಳಿಸಿದೆ. ಕುಮಾರಸ್ವಾಮಿ ನಿರ್ಧಾರ ಕೂಡ ಚನ್ನಪಟ್ಟಣ ಕ್ಷೇತ್ರದ ಕದನ ಕುತೂಹಲವನ್ನು ಇಮ್ಮಡಿಗೊಳಿಸಿದೆ.
ಕ್ಷಣದಿಂದ ಕ್ಷಣಕ್ಕೆ ಅಲ್ಲಿನ ರಾಜಕೀಯ ಬೆಳವಣಿಗೆಗಳು ಬದಲಾಗುತ್ತಿರುವುದರಿಂದ ರಾಜ್ಯದ ಮೂರು ಕ್ಷೇತ್ರಗಳ ಉಪ ಕದನಗಳ ಪೈಕಿ ಚನ್ನಪಟ್ಟಣ ಕ್ಷೇತ್ರ ತುಸು ಕೌತುಕ ಮೂಡಿಸಿದ್ದು ಸುಳ್ಳಲ್ಲ. ಬಿಜೆಪಿ ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸಿಪಿವೈ ಕಾಂಗ್ರೆಸ್ ಕೈಹಿಡಿಯಲಿದ್ದಾರೆಂಬ ಸುದ್ದಿ ದಟ್ಟವಾಗಿ ಹಬ್ಬಿತ್ತು. ಅದಕ್ಕೆ ಪೂರಕವಾಗಿ ಯೋಗೇಶ್ವರ್ ಜೊತೆ ಕೈ ನಾಯಕರು ಮಾತುಕತೆ ನಡೆಸಿದ್ದು, ಅವರನ್ನು ಪಕ್ಷಕ್ಕೆ ಕರೆದು ಟಿಕೆಟ್ ನೀಡುವ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂಬ ವರದಿ ಕೂಡ ಇದೆ. ಯೋಗೇಶ್ವರ್ ಕಾದು ನೋಡುವ ತಂತ್ರ ಕಾಂಗ್ರೆಸ್ ಆಯ್ಕೆಗಳನ್ನು ಮುಕ್ತವಾಗಿ ಇರಿಸಿತ್ತು. ಡಿ.ಕೆ.ಸುರೇಶ್ ಸ್ಪರ್ಧಿಸುವ ಆಯ್ಕೆ ಅಥವಾ ಯೋಗೇಶ್ವರ್ಗೆ ಟಿಕೆಟ್ ನೀಡುವ ಆಯ್ಕೆಯನ್ನು ಮುಕ್ತವಾಗಿ ಇರಿಸಿತ್ತು.
ಪಹ್ಲಾದ್ ಜೋಶಿ ಮಾತುಕತೆ:ಆದರೆ, ಯೋಗೇಶ್ವರ್ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದ ಹಾಗೇ ಜೆಡಿಎಸ್ ಆಯ್ಕೆ ಸೀಮಿತವಾಯಿತು. ಇತ್ತ ಬಿಜೆಪಿ ರಾಷ್ಟ್ರೀಯ ನಾಯಕರು ಕುಮಾರಸ್ವಾಮಿ ಮನವೊಲಿಸುವ ಪ್ರಯತ್ನ ನಡೆಸಿದ್ರು. ಇದರ ಬೆನ್ನಲ್ಲೇ ಚನ್ನಪಟ್ಟಣ ಭಾಗದ ಮುಖಂಡರ ಸಭೆ ನಡೆಸಿದ ಕುಮಾರಸ್ವಾಮಿ ಸ್ವಲ್ಪ ಮೆತ್ತಗಾದಂತೆ ಕಾಣ್ತಿದೆ. ಕೇಂದ್ರ ಬಿಜೆಪಿ ನಾಯಕ ಪ್ರಹ್ಲಾದ್ ಜೋಶಿಯವರು ಮಾತುಕತೆ ನಡೆಸಿದ್ದು, ಎರಡು ದಿನದಲ್ಲಿ ಅಂತಿಮ ನಿರ್ಧಾರ ಪ್ರಕಟಿಸುವ ಮಾತು ಹೇಳಿದ್ದಾರೆ. ಕ್ಷೇತ್ರ ಬಿಜೆಪಿಗೆ ಬಿಟ್ಟು ಕೊಡುವ ಅಥವಾ ಯೋಗೇಶ್ವರ್ಗೆ ಟಿಕೆಟ್ ನೀಡುವ ಬಗ್ಗೆ ಕುಮಾರಸ್ವಾಮಿ ಪರೋಕ್ಷವಾಗಿ ಗೊಂದಲದ ಹೇಳಿಕೆ ನೀಡಿರುವುದು ಮತ್ತೆ ಚನ್ನಪಟ್ಟಣ ಉಪಸಮರ ಲೆಕ್ಕಾಚಾರವನ್ನು ಉಲ್ಟಾ ಮಾಡಿದೆ.
ಕಾದು ನೋಡುವ ತಂತ್ರ ಅನುಸರಿಸುತ್ತಿರುವ ಯೋಗೇಶ್ವರ್:ಯೋಗೇಶ್ವರ್ ಕಾದು ನೋಡುವ ತಂತ್ರ ಅನುಸರಿಸುತ್ತಿರುವ ಕಾರಣ ಕಾಂಗ್ರೆಸ್ ನಾಯಕರಿಗೂ ಆಯ್ಕೆಗಳು ಸಮೀತವಾದಂತೆ ಕಂಡು ಬರುತ್ತಿದೆ. ಯೋಗೇಶ್ವರ್ ದ್ವಂದ್ವ ನಿಲುವಿನಿಂದಾಗಿ ಕಾಂಗ್ರೆಸ್ ನಾಯಕರೂ ಗೊಂದಲಕ್ಕೆ ಬಿದ್ದಿದ್ದು, ಲೆಕ್ಕಾಚಾರ ಬದಲಾದಂತೆ ಕಂಡು ಬರುತ್ತಿದೆ. ಒಂದು ವೇಳೆ ಯೋಗೇಶ್ವರ್ ಜೆಡಿಎಸ್ ಅಥವಾ ಬಿಜೆಪಿ ಟಿಕೆಟ್ನಿಂದ ಸ್ಪರ್ಧಿಸಿದರೆ ಡಿ.ಕೆ.ಸುರೇಶ್ ಸ್ಪರ್ಧಿಸುವುದು ಅನುಮಾನ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಯೋಗೇಶ್ವರ್ ಎನ್ಡಿಎ ಅಭ್ಯರ್ಥಿಯಾಗಿ ನಿಂತರೆ ಕ್ಷೇತ್ರದ ಲೆಕ್ಕಾಚಾರ ಬದಲಾಗಲಿದ್ದು, ಕಠಿಣ ಸ್ಪರ್ಧೆ ಏರ್ಪಡಲಿದೆ. ಅಂಥ ಸನ್ನಿವೇಶದಲ್ಲಿ ಡಿ.ಕೆ.ಸುರೇಶ್ ಚನ್ನಪಟ್ಟಣದಿಂದ ಸ್ಪರ್ಧಿಸುವುದು ಅನುಮಾನ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಯೋಗೇಶ್ವರ್ ಪಕ್ಷೇತರರಾಗಿ ಸ್ಪರ್ಧಿಸಲು ನಿರ್ಧರಿಸಿದರೆ ಡಿ.ಕೆ.ಸುರೇಶ್ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ.
ಕಾಂಗ್ರೆಸ್ ಲೆಕ್ಕಾಚಾರ ಏನು?:ಯೋಗೇಶ್ವರ್ ಮೈತ್ರಿ ಅಭ್ಯರ್ಥಿಯಾದರೆ ಗೆಲ್ಲುವ ಲೆಕ್ಕಾಚಾರ ಕಠಿಣವಾಗಲಿದೆ ಎಂಬುದು ಕಾಂಗ್ರೆಸ್ ಆತಂಕ. ಹೀಗಾಗಿ ಡಿ.ಕೆ.ಸುರೇಶ್ ಬದಲು ರಘುನಂದನ್ ರಾಮಣ್ಣಗೆ ಟಿಕೆಟ್ ನೀಡುವ ಸಾಧ್ಯತೆನೇ ಹೆಚ್ಚು ಎಂದು ಕಾಂಗ್ರೆಸ್ ನಾಯಕರೊಬ್ಬರು ತಿಳಿಸಿದ್ದಾರೆ. ಯೋಗೇಶ್ವರ್ ನಡೆ ಹಾಗೂ ಕುಮಾರಸ್ವಾಮಿಯವರ ನಿರ್ಧಾರದ ಮೇಲೆ ಕಾಂಗ್ರೆಸ್ ತನ್ನ ಮುಂದಿನ ಹೆಜ್ಜೆ ಇಡಲಿದೆ. ಸದ್ಯಕ್ಕಂತೂ ಯೋಗೇಶ್ವರ್ ನಡೆ ಕುತೂಹಲ ಮೂಡಿಸಿದೆ. ಕಾಂಗ್ರೆಸ್ಗೆ ಬರುತ್ತಾರೋ ಇಲ್ಲಾ ಬಿಜೆಪಿಯಲ್ಲೇ ಮುಂದುವರಿಯುತ್ತಾರೋ ಅಥವಾ ಮೈತ್ರಿ ಅಭ್ಯರ್ಥಿಯಾಗಲಿದ್ದಾರೆಯೋ ಎಂಬ ಗೊಂದಲ ನಿರ್ಮಾಣವಾಗಿದ್ದು, ಅದಕ್ಕೆ ಇಂದು ಅಥವಾ ನಾಳೆ ತೆರೆ ಬೀಳುವ ಸಾದ್ಯತೆ ಇದೆ. ಒಂದು ವೇಳೆ ಯೋಗೇಶ್ವರ್ ಜೆಡಿಎಸ್ ಚಿಹ್ನೆಯಿಂದ ಅಥವಾ ಬಿಜೆಪಿಯಿಂದ ಕಣಕ್ಕಿಳಿಯೋ ನಿರ್ಧಾರಕ್ಕೆ ಬಂದ್ರೆ ಕಾಂಗ್ರೆಸ್ ಬೇರೆಯವರನ್ನ ಕಣಕ್ಕಿಳಿಸಲಿದ್ದಾರೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ.
ಇದನ್ನೂ ಓದಿ: ಸಿಪಿವೈ ಕಾಂಗ್ರೆಸ್ ಸೇರ್ಪಡೆಗೆ ಸಿಎಂ ಪರೋಕ್ಷ ಆಹ್ವಾನ: ಯೋಗೇಶ್ವರ್ ರಿಯಾಕ್ಷನ್ ಏನು?