ಚಂದ್ರಶೇಖರ್ ಸ್ವಾಮೀಜಿ ಹೇಳಿಕೆ (ETV Bharat) ಬೆಂಗಳೂರು: ಕೆಂಪೇಗೌಡ ಜಯಂತಿ ಆಚರಣೆಯ ವೇದಿಕೆಯಲ್ಲಿ ಚಂದ್ರಶೇಖರ್ ಸ್ವಾಮೀಜಿ ಮಾತನಾಡುತ್ತಾ, ಡಿ.ಕೆ.ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ಬಿಟ್ಟುಕೊಡುವಂತೆ ಸಿದ್ದರಾಮಯ್ಯನವರಲ್ಲಿ ಬೇಡಿಕೆ ಇಟ್ಟಿರುವುದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಇಂದು ನಡೆದ ನಾಡಪ್ರಭು ಕೆಂಪೇಗೌಡರ 515ನೇ ಜಯಂತಿ ಕಾರ್ಯಕ್ರಮದಲ್ಲಿ ಮೈಸೂರು ರಸ್ತೆಯ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಚಂದ್ರಶೇಖರ ಸ್ವಾಮೀಜಿ ಇಂಥದ್ದೊಂದು ಬೇಡಿಕೆ ಇಟ್ಟರು.
"ಸಿದ್ದರಾಮಯ್ಯನವರು ಈಗಾಗಲೇ ಮುಖ್ಯಮಂತ್ರಿ ಸ್ಥಾನ ಅನುಭವಿಸಿದ್ದೀರಿ. ಇನ್ನುಳಿದ ಅವಧಿಯನ್ನು ಡಿ.ಕೆ.ಶಿವಕುಮಾರ್‌ಗೆ ಬಿಟ್ಟುಕೊಡಬೇಕು" ಎಂದು ಮನವಿ ಮಾಡಿದರು.
ಇದನ್ನೂ ಓದಿ:ಹೆಚ್ಚುವರಿ ಡಿಸಿಎಂ ಹುದ್ದೆ ಬೇಕು ಅನ್ನೋರು ಹೈಕಮಾಂಡ್ ಬಳಿ ಮಾತನಾಡಲಿ: ಡಿಸಿಎಂ ಡಿ.ಕೆ. ಶಿವಕುಮಾರ್ - ADDITIONAL DCM ISSUE
"ಸಿದ್ದರಾಮಯ್ಯನವರು ಮನಸ್ಸು ಮಾಡಿದರೆ ಮಾತ್ರ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಲು ಸಾಧ್ಯ. ಈಗಾಗಲೇ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿ ಅನುಭವ ಹೊಂದಿದ್ದಾರೆ. ನಮ್ಮ ಸಮುದಾಯದ ಡಿ.ಕೆ.ಶಿವಕುಮಾರ್ ಅವರಿಗೆ ಮುಂದೆ ಅವಕಾಶ ಮಾಡಿಕೊಡಲಿ" ಎಂದು ಸ್ವಾಮೀಜಿ ಮನವಿ ಮಾಡಿದ್ದಾರೆ.
ಸ್ವಾಮೀಜಿ ಇಂಥದ್ದೊಂದು ಹೇಳಿಕೆ ನೀಡುತ್ತಿದ್ದಂತೆ, ಅಕ್ಕಪಕ್ಕದಲ್ಲೇ ಇದ್ದ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಮೌನವಾಗಿದ್ದರು.
ರಾಜ್ಯದಲ್ಲಿ ಅಧಿಕಾರ ಹಸ್ತಾಂತರದ ಮಾತುಗಳು ಆಗಾಗ್ಗೆ ಕೇಳಿ ಬರುತ್ತಿವೆ. ಈ ಮಧ್ಯೆ ಇದೀಗ ಸ್ವಾಮೀಜಿ ಬಹಿರಂಗ ವೇದಿಕೆಯಲ್ಲಿ ಸಿಎಂ ಸ್ಥಾನದ ಬಗ್ಗೆ ಮಾತನಾಡಿ ಅಚ್ಚರಿ ಮೂಡಿಸಿದ್ದಾರೆ. ಹೆಚ್ಚುವರಿಯಾಗಿ ಮೂರು ಡಿಸಿಎಂ ಹುದ್ದೆ ಸೃಷ್ಟಿಗೆ ಕೆಲವು ಸಚಿವರು ಒತ್ತಡ ಹೇರುತ್ತಿರುವ ಮಧ್ಯೆ, ಚಂದ್ರಶೇಖರ್ ಸ್ವಾಮೀಜಿ ಸಿಎಂ ಸ್ಥಾನವನ್ನು ಡಿ.ಕೆ.ಶಿಗೆ ಬಿಟ್ಟು ಕೊಡುವಂತೆ ಸಿದ್ದರಾಮಯ್ಯರ ಸಮ್ಮುಖದಲ್ಲೇ ಹೇಳಿರುವುದು ವೇದಿಕೆ ಮೇಲಿದ್ದ ಸಚಿವರನ್ನೂ ಅಚ್ಚರಿಪಡಿಸಿತು.
ಇದನ್ನೂ ಓದಿ:'ಅಕ್ರಮ ಚಟುವಟಿಕೆಗಳ ದಂಡಕ್ಕೆ ಬಿಜೆಪಿ ಕಾರ್ಯಕರ್ತರೇ ಟಾರ್ಗೆಟ್': ಶಾಸಕ ದಿನಕರ ಶೆಟ್ಟಿ ಆರೋಪ - Allegations as BJP workers Targeted
"ಬೆಂಗಳೂರು ವಿಭಜನೆ ಮಾಡಬೇಕೆಂಬ ಹೋರಾಟ ನಡೆಯುತ್ತಿದೆ. ದಯವಿಟ್ಟು ಯಾವುದೇ ಕಾರಣಕ್ಕೂ ವಿಭಜನೆ ಮಾಡಬೇಡಿ. ವಿಭಜನೆ ಮಾಡಿದರೆ ಬೆಂಗಳೂರು ಅಭಿವೃದ್ಧಿ ಆಗಲ್ಲ" ಎಂದು ಇದೇ ವೇಳೆ ಸ್ವಾಮೀಜಿ ಮನವಿ ಮಾಡಿದ್ದಾರೆ.
ಹೈಕಮಾಂಡ್ ತೀರ್ಮಾನ ಮಾಡುತ್ತೆ- ಸಿಎಂ:ಇನ್ನು, ಸ್ವಾಮೀಜಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, "ಕಾಂಗ್ರೆಸ್ ಪಕ್ಷ ಹೈಕಮಾಂಡ್ ಪಕ್ಷ, ಗೊತ್ತಾಯಿತಾ?. ಎಲ್ಲಾ ವಿಚಾರಗಳನ್ನೂ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಆ ರೀತಿಯೇ ನಡೆದುಕೊಳ್ಳಲಾಗುತ್ತದೆ" ಎಂದು ಹೇಳಿದರು.