ಬೆಂಗಳೂರು:ಪ್ರಸಿದ್ಧ ಶ್ರೀ ಚಾಮುಂಡೇಶ್ವರಿ ದೇವಾಲಯದ ನಿರ್ವಹಣೆಗಾಗಿ ರೂಪಿಸಲಾಗಿರುವ ಶ್ರೀಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾಯಿದೆ ಸೆಕ್ಷನ್ 16 ಅಥವಾ 17ರ ಅಡಿ ಯಾವುದೇ ತೀರ್ಮಾನ ಕೈಗೊಳ್ಳುವ ಮುನ್ನ ನ್ಯಾಯಾಲಯದ ಅನುಮತಿ ಪಡೆಯಬೇಕಾಗುತ್ತದೆ ಎಂದು ಹೈಕೋರ್ಟ್ ಇಂದು ಮಧ್ಯಂತರ ಆದೇಶ ನೀಡಿತು.
ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕಾಯಿದೆ 2024 ಅನ್ನು ಅಸಾಂವಿಧಾನಿಕ ಎಂದು ಘೋಷಿಸಬೇಕೆಂದು ಕೋರಿ ದಿವಂಗತ ಶ್ರೀಕಂಠ ದತ್ತ ಒಡೆಯರ್ ಅವರ ಪತ್ನಿ ಪ್ರಮೋದಾ ದೇವಿ ಒಡೆಯರ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಹೇಮಂತ್ ಚಂದನ್‌ಗೌಡರ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ಹೊರಡಿಸಿತು.
ವಿಧಾನಸಭೆ ನಿಯಮಗಳಿಗೆ ವಿರುದ್ಧವಾಗಿ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕಾಯಿದೆ ಜಾರಿಗೊಳಿಸಲಾಗಿದೆಯೇ ಎಂಬುದನ್ನು ಪರಿಗಣಿಸಬೇಕು. ಅರ್ಜಿ ಇತ್ಯರ್ಥವಾಗುವವರೆಗೆ ದೇವಾಲಯದ ಚರ ಮತ್ತು ಸ್ಥಿರ ಆಸ್ತಿಗಳನ್ನು ಪ್ರಾಧಿಕಾರ ವಿಲೇವಾರಿ ಮಾಡುವಂತಿಲ್ಲ. ಹಾಲಿ ದೇವಾಲಯದಲ್ಲಿ ಜಾರಿಯಲ್ಲಿರುವ ಸಂಪ್ರದಾಯದಲ್ಲಿ ಬದಲಾವಣೆ ಅಥವಾ ಹಸ್ತಕ್ಷೇಪ ಮಾಡಬಾರದು ಎಂದು ತಿಳಿಸಿದೆ.
ಅಲ್ಲದೆ, ಪ್ರಾಧಿಕಾರ ಕಾಯಿದೆ ಸೆಕ್ಷನ್ 16 ಅಥವಾ 17ರ ಅಡಿ ಯಾವುದೇ ತೀರ್ಮಾನ ಕೈಗೊಳ್ಳುವ ಮುನ್ನ ನ್ಯಾಯಾಲಯದ ಅನುಮತಿ ಪಡೆಯಬೇಕು. ಅರ್ಜಿ ವಿಲೇವಾರಿ ಬಾಕಿ ಇರುವಾಗ ರಾಜ್ಯ ಸರ್ಕಾರ ನಿಯಮ ರೂಪಿಸುವುದಕ್ಕೆ ಯಾವುದೇ ಅಡ್ಡಿ ಇಲ್ಲ. ಸಭೆಯಲ್ಲಿ ಭಾಗವಹಿಸುವಂತೆ ಪ್ರಮೋದಾ ದೇವಿ ಅವರಿಗೆ ಪ್ರಾಧಿಕಾರ ನೋಟಿಸ್ ನೀಡಬೇಕು. ಅವರು ಸಭೆಯಲ್ಲಿ ಭಾಗವಹಿಸದಿದ್ದರೆ ಪ್ರಾಧಿಕಾರ ಸೂಕ್ತ ನಿರ್ಧಾರ ಕೈಗೊಳ್ಳಲು ಸ್ವತಂತ್ರವಾಗಿರುತ್ತದೆ ಎಂದು ಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ.
ವಿಚಾರಣೆ ವೇಳೆ ಹೆಚ್ಚುವರಿ ಅಡ್ವೊಕೇಟ್ ಜನರಲ್ ದೇವದಾಸ್, ಪ್ರಾಧಿಕಾರದ ಸೆಕ್ಷನ್ 17ರ ಅನ್ವಯ ಯಾವುದೇ ರೀತಿಯಲ್ಲೂ ಅರ್ಜಿದಾರರ ಹಕ್ಕುಗಳಿಗೆ ಅಡ್ಡಿ ಮಾಡುವುದಿಲ್ಲ. ಸೆಕ್ಷನ್ 16ರ ಅನ್ವಯ ಎಲ್ಲರಿಗೂ ಸಭೆಯಲ್ಲಿ ಪಾಲ್ಗೊಳ್ಳಲು ನೋಟಿಸ್ ನೀಡಲಾಗುತ್ತದೆ. ಇಲ್ಲಿ ಪ್ರಾಧಿಕಾರದ ಅಧ್ಯಕ್ಷರು (ಮುಖ್ಯಮಂತ್ರಿ) ನಿರ್ಣಯ ಕೈಗೊಂಡರೂ ಅದು ಸಚಿವ ಸಂಪುಟದ ತೀರ್ಮಾನಕ್ಕೆ ಒಳಪಡುತ್ತದೆ. ಪ್ರಾಧಿಕಾರ ಅಥವಾ ಸಿಎಂ ಸೆಕ್ಷನ್ 17ರ ಅನ್ವಯ ಯಾವುದೇ ಅಧಿಕಾರ ಚಲಾಯಿಸಿಲ್ಲ. ಹೀಗಿರುವಾಗ ಅರ್ಜಿದಾರರಿಗೆ ಸಮಸ್ಯೆಯಾದರೆ ಅವರು ಅರ್ಜಿ ಸಲ್ಲಿಸಬಹುದು ಎಂದು ಪೀಠಕ್ಕೆ ವಿವರಿಸಿದರು.