ಬೆಂಗಳೂರು:ರಾಜ್ಯದಲ್ಲಿ ಈಗ ಜಾತಿ ಜನಗಣತಿಯ ಸದ್ದು ಜೋರಾಗಿ ಕೇಳಿ ಬರುತ್ತಿದೆ. ಜಾತಿ ಜನಗಣತಿ ವರದಿ ಜಾರಿಗೊಳಿಸುವಂತೆ ಹಿಂದುಳಿದ ಸಮುದಾಯದ ನಾಯಕರು ಒತ್ತಡ ಹೇರುತ್ತಿದ್ದಾರೆ. ಇದರ ಮಧ್ಯೆ ಒಳಮೀಸಲಾತಿ ಜಾರಿಗೊಳಿಸುವ ಕೂಗೂ ಗಟ್ಟಿಯಾಗುತ್ತಿದೆ. ಜಾತಿ ಜನಗಣತಿ ಹಾಗೂ ಒಳಮೀಸಲಾತಿ ಜಾರಿಗೆ ಪರ ವಿರೋಧ ಬಲವಾಗಿರುವ ಮಧ್ಯೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಒತ್ತಡಕ್ಕೆ ಸಿಲುಕಿದೆ.
ಸದ್ಯ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಮುಂದೆ ದೊಡ್ಡ ಸವಾಲು ಎದುರಾಗಿದೆ. ಎರಡೂ ಜಾತಿ ಆಧಾರಿತ ನಿರ್ಧಾರಗಳು ರಾಜಕೀಯವಾಗಿ ವೈರುಧ್ಯಗಳನ್ನು ಹೊಂದಿರುವುದು ಸರ್ಕಾರಕ್ಕೆ ಕಬ್ಬಿಣದ ಕಡಲೆಯಾಗಿ ಪರಿಣಮಿಸಿದೆ. ರಾಜಕೀಯವಾಗಿ ಲಾಭ, ನಷ್ಟದ ಲೆಕ್ಕಾಚಾರ ಹೊಂದಿರುವ ಜಾತಿ ಜನಗಣತಿ ಹಾಗೂ ಒಳಮೀಸಲಾತಿ ಜಾರಿಗೆ ಬಲವಾದ ಪರ - ವಿರೋಧ ಕೂಗುಗಳಿವೆ. ರಾಜಕೀಯವಾಗಿ ಹಿನ್ನಡೆಯಾಗದ ರೀತಿಯಲ್ಲಿ ಎರಡನ್ನೂ ಜಾರಿಗೊಳಿಸುವ ಅನಿವಾರ್ಯತೆ ರಾಜ್ಯ ಸರ್ಕಾರದ ಮೇಲಿದೆ.
ಜಾತಿ ಜನಗಣತಿ ಜಾರಿಗೆ ಒತ್ತಾಯ:ಜಾತಿ ಗಣತಿ ವರದಿ ಜಾರಿ ಸಂಬಂಧ ಮುಂದಿನ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲು ಸರ್ಕಾರ ಮುಂದಾಗಿದೆ. ಸಿಎಂ ಸಿದ್ದರಾಮಯ್ಯ ಜಾತಿ ಗಣತಿ ವರದಿ ಜಾರಿಗೆ ಒಲವು ಹೊಂದಿದ್ದಾರೆ. ಆದರೆ ಪಕ್ಷದಲ್ಲಿನ ಬಲಾಢ್ಯ ಸಮುದಾಯದ ನಾಯಕರು ವರದಿ ಜಾರಿಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಹಾಗೂ ಸರ್ಕಾರದಲ್ಲೇ ವರದಿ ಜಾರಿ ಸಂಬಂಧ ಪರ, ವಿರೋಧ ಕೂಗುಗಳು ಪ್ರಬಲವಾಗಿದೆ. ಇತ್ತ, ರಾಹುಲ್ ಗಾಂಧಿ ದೇಶಾದ್ಯಂತ ಜಾತಿ ಗಣತಿ ಮಾಡುವ ಬಗ್ಗೆ ಪ್ರಣಾಳಿಕೆಯಲ್ಲೇ ಘೋಷಣೆ ಮಾಡಿದ್ದರು. ಪಕ್ಷದ ನಿಲುವು ಹಾಗೂ ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿನ ಪ್ರಬಲ ಸಮುದಾಯವಾದ ಒಕ್ಕಲಿಗ ಹಾಗೂ ಲಿಂಗಾಯತ ನಾಯಕರು ಜಾತಿ ಗಣತಿ ವರದಿ ಜಾರಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ, ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ ವರದಿ ಜಾರಿ ಕಗ್ಗಂಟಾಗಿ ಪರಿಣಮಿಸಿದೆ.
2014ರಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ರಾಜ್ಯಾದ್ಯಂತ ಎಲ್ಲಾ ಜಾತಿ ಜನಾಂಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಮನೆ ಮನೆ ಸಮೀಕ್ಷೆಗೆ ಆದೇಶ ನೀಡಿದ್ದರು. ಆಗ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಹೆಚ್.ಕಾಂತರಾಜ್ ಸಮೀಕ್ಷೆಯ ಉಸ್ತುವಾರಿ ಹೊತ್ತಿದ್ದರು. 2016ಕ್ಕೆ ಸಮೀಕ್ಷೆ ಪೂರ್ಣಗೊಂಡಿದ್ದರೂ, ಸದಸ್ಯ ಕಾರ್ಯದರ್ಶಿ ಸಹಿ ಹಾಕಿಲ್ಲ ಎಂಬ ಕಾರಣಕ್ಕೆ ಸಮೀಕ್ಷೆ ವರದಿ ಬಿಡುಗಡೆಯಾಗಿಲಿಲ್ಲ. ಅಲ್ಲಿಂದೀಚೆಗೆ ಹೆಚ್.ಕಾಂತರಾಜ್ ವರದಿ ಎಂದೇ ಬಿಂಬಿತವಾಗಿರುವ ಸಮೀಕ್ಷಾ ವರದಿ ನನೆಗುದಿಗೆ ಬಿದ್ದಿದೆ. ವರದಿ ಸಿದ್ಧವಾಗಿದ್ದರೂ ಬಿಡುಗಡೆ ಭಾಗ್ಯ ಸಿಕ್ಕಿಲ್ಲ. ಹೆಜ್ಜೇನಿಗೆ ಕೈ ಹಾಕುವುದು ಬೇಡ ಎಂದು ಹಿಂದಿನ ಸರ್ಕಾರಗಳು ವರದಿಯ ತಂಟೆಗೆ ಹೋಗಿರಲಿಲ್ಲ.
ಜಾರಿಗೆ ಸಿಎಂ ಉತ್ಸುಕತೆ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ಜಾತಿಗಳು ಹಾಗೂ ಇತರ ಜಾತಿಗಳನ್ನೊಳಗೊಂಡಂತೆ ರಾಜ್ಯದ ಪ್ರತಿಯೊಂದು ಕುಟುಂಬದ ಸಮಗ್ರ ಸಮೀಕ್ಷೆಯನ್ನು ಕೈಗೊಂಡು ವಿವಿಧ ಜಾತಿಗಳ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ಬಗ್ಗೆ ವಿಶ್ಲೇಷಣೆ ಮಾಡಿ, ಹಿಂದುಳಿದ ವರ್ಗಗಳ ಪಟ್ಟಿಯನ್ನು ಪರಿಷ್ಕರಿಸುವ ಕುರಿತು ಸರ್ಕಾರಕ್ಕೆ ಶಿಫಾರಸು ಮಾಡುವ ಜವಾಬ್ದಾರಿಯನ್ನು ಆಯೋಗಕ್ಕೆ ನೀಡಲಾಗಿತ್ತು. ರಾಜ್ಯದ ಎಲ್ಲ ವರ್ಗಗಳ/ಜಾತಿಗಳ ಸಾಮಾಜಿಕ, ಶೈಕ್ಷಣಿಕ ಮತ್ತು ಔದ್ಯೋಗಿಕ ಸ್ಥಿತಿಗತಿಗಳ ಕುರಿತು ಸಮೀಕ್ಷೆ ಮುಖಾಂತರ ಸಮಗ್ರ ಅಂಕಿ-ಅಂಶಗಳನ್ನು ಸಂಗ್ರಹಣೆಗೆ ಸೂಚಿಸಲಾಗಿತ್ತು. ಶಾಶ್ವತ ಹಿಂದುಳಿದ ಆಯೋಗದ ಅಧ್ಯಕ್ಷರಾಗಿದ್ದ ಕೆ.ಜಯಪ್ರಕಾಶ್ ಹೆಗ್ಡೆ ಅವರು ಕಾಂತರಾಜು ಸಮಿತಿ ದತ್ತಾಂಶ ಪ್ರಕಾರ ಸಿದ್ಧಪಡಿಸಿದ ವರದಿಯನ್ನು ಅಧಿಕೃತವಾಗಿ ಸಿಎಂ ಸಿದ್ದರಾಮಯ್ಯಗೆ ಇದೇ ಫೆಬ್ರವರಿಯಲ್ಲಿ ಹಸ್ತಾಂತರ ಮಾಡಿದ್ದರು. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ವರದಿ ಬಹಿರಂಗ ಹಾಗೂ ಜಾರಿಗೆ ಉತ್ಸುಕತೆ ತೋರಿದ್ದಾರೆ.
ವರದಿ ಜಾರಿ ಸಂಬಂಧ ಉಪಸಮಿತಿ:ಕಾಂಗ್ರೆಸ್ ಅಹಿಂದ ನಾಯಕರು ಜಾತಿ ಗಣತಿ ಜಾರಿಗೆ ಪಟ್ಟು ಹಿಡಿದರೆ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಜಾತಿ ಗಣತಿ ವರದಿ ಜಾರಿಯಿಂದ ಪ್ರಬಲ ಸಮುದಾಯದ ಜನರು ಕಾಂಗ್ರೆಸ್ ವಿರುದ್ಧ ನಿಲ್ಲುವ ಆತಂಕ ಹಲವರಲ್ಲಿದೆ. ಹೀಗಾಗಿ, ರಾಜ್ಯ ಸರ್ಕಾರ ಜಾತಿ ಗಣತಿ ವರದಿ ಜಾರಿ ಸಂಬಂಧ ಉಪಸಮಿತಿ ರಚಿಸಿ, ಎಚ್ಚರಿಕೆ ಹೆಜ್ಜೆ ಇಡಲು ಮುಂದಾಗಿದೆ. ಜಾತಿವಾರು ಸಮೀಕ್ಷೆ ಜಾರಿಗೊಳಿಸಿದರೆ ಪ್ರಬಲ ಸಮುದಾಯದ ಮತಬ್ಯಾಂಕ್ ಕಳೆದುಕೊಳ್ಳುವ ಭೀತಿ ಕಾಂಗ್ರೆಸ್ ಸರ್ಕಾರದ್ದಾಗಿದೆ.
ಈ ಬಗ್ಗೆ ಕಾಂಗ್ರೆಸ್ ಹಿರಿಯ ಮುಖಂಡ ಬಿ.ಕೆ.ಹರಿಪ್ರಸಾದ್ ಮಾತನಾಡಿ, "170 ಕೋಟಿ ರೂಪಾಯಿ ಖರ್ಚು ಮಾಡಿ ಈ ಸಮೀಕ್ಷೆ ಮಾಡಲಾಗಿದೆ. ಇದು ಸಮಗ್ರ ಕರ್ನಾಟಕ ಜನತೆಯನ್ನು ಒಳಗೊಂಡಿದೆ. ಎಲ್ಲರ ಸ್ಥಿತಿಗತಿಗಳನ್ನು ಶೈಕ್ಷಣಿಕವಾಗಿ ಆರ್ಥಿಕವಾಗಿ ಅಳತೆ ಮಾಡಲಾಗಿದೆ. ಈ ಸಮೀಕ್ಷೆಯಲ್ಲಿ ಎಲ್ಲರ ವಿಚಾರಗಳಿವೆ. ಇದಕ್ಕೆ ಲಿಂಗಾಯತ ದಲಿತರು, ಹೊರತಾಗಿಲ್ಲ. ದುರ್ಬಲ ವರ್ಗದವರಿಗೆ ಮೀಸಲಾತಿ ಕೊಡಲು ಇದರಿಂದ ಸಾಧ್ಯ. ವರದಿ ಜಾರಿ ಆದ ಮೇಲೆ, ಚರ್ಚೆ ಸಮಯದಲ್ಲಿ ಅದು ವೈಜ್ಞಾನಿಕವೋ, ಇಲ್ಲವೋ ಗೊತ್ತಾಗತ್ತೆ. ಮುಂದಿನ ಸಂಪುಟ ಸಭೆಯಲ್ಲಿ ತೆಗೆದುಕೊಳ್ಳುವ ತೀರ್ಮಾನ ಅನುಕೂಲಕರವಾಗಿರುತ್ತೆ ಅಂತ ಭಾವಿಸುತ್ತೇವೆ" ಎಂದಿದ್ದಾರೆ.