ತುಮಕೂರು:ನಗರದಲ್ಲಿ ಒಂಟಿ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಸರಗಳ್ಳತನ ಮಾಡುತ್ತಿದ್ದ ಇಬ್ಬರು ಅಂತಾರಾಜ್ಯ ಕಳ್ಳರನ್ನು ಹೊಸ ಬಡಾವಣೆ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ತಿರುವಣ್ಣಾಮಲೈ ಮೂಲದ ಭರತ್ (40) ಮತ್ತು ಜಮಾಲುದೀನ್ (38) ಬಂಧಿತ ಆರೋಪಿಗಳು.
ಬಂಧಿತರಿಂದ 6 ಲಕ್ಷ 70 ಸಾವಿರ ರೂಪಾಯಿ ಮೌಲ್ಯದ 113 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದು, ಈ ಮೂಲಕ ಎರಡು ಪ್ರತ್ಯೇಕ ಸರಗಳ್ಳತನ ಪ್ರಕರಣಗಳನ್ನ ಪತ್ತೆ ಹಚ್ಚಲಾಗಿದೆ. ತುಮಕೂರಿನ ಹೊಸ ಬಡಾವಣೆ ಪೊಲೀಸ್ ಠಾಣೆ ಮತ್ತು ಚಿತ್ರದುರ್ಗ ಬಡಾವಣೆ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದ ಸರಗಳ್ಳತನ ಪ್ರಕರಣಗಳಲ್ಲಿ ಈ ಬಂಧಿತರು ಭಾಗಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ವಾಕಿಂಗ್ ಮಾಡುವ ಮಹಿಳೆಯರೇ ಟಾರ್ಗೆಟ್:ಆರೋಪಿಗಳು ಬೈಕ್ನಲ್ಲಿ ಸಂಚರಿಸುತ್ತಾ ವಾಕಿಂಗ್ ಮಾಡುವ ಒಂಟಿ ಮಹಿಳೆಯರನ್ನ ಗುರಿಯಾಗಿಸಿಕೊಂಡು ಹಿಂಬಾಲಿಸುತ್ತಿದ್ದರು. ಸೂಕ್ತ ಅವಕಾಶ ಕಂಡ ಕೂಡಲೇ ಮಹಿಳೆಯರ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗುತ್ತಿದ್ದರು.
ಈ ಖದೀಮರು ತುಮಕೂರಿನ ವಾಲ್ಮೀಕಿ ನಗರದಲ್ಲಿ ವಸಂತಮ್ಮ ಎಂಬ ಮಹಿಳೆಯ ಸುಮಾರು 70 ಗ್ರಾಂ ತೂಕದ ಚಿನ್ನದ ಸರ ಕಿತ್ತು ಪರಾರಿಯಾಗಿದ್ದರು. ಈ ಪ್ರಕರಣ ಸಂಬಂಧ ವಸಂತಮ್ಮ ಹೊಸ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ದೂರಿನ ಅನ್ವಯ ಪೊಲೀಸರು ತನಿಖೆ ಕೈಗೊಂಡು, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ ಕಳ್ಳರಿಂದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.