ಕರ್ನಾಟಕ

karnataka

ETV Bharat / state

ಮೇಕೆದಾಟು ಯೋಜನೆ: ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತನ್ನ ನಿಲುವು ಸ್ಪಷ್ಟಪಡಿಸಲಿ- ಡಿಕೆಶಿ - DCM DK SHIVAKUMAR

ಪರಿಸರದ ಕಾರಣಕ್ಕೆ ನದಿ ಜೋಡಣೆಗೆ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ. ಒಂದು ಮರಕ್ಕೆ ನಾಲ್ಕು ಮರ ನೆಡಲಾಗುವುದು. ರಸ್ತೆ, ನೀರಿನ ಯೋಜನೆಗಳಿಗೆ ಸಂಬಂಧಪಟ್ಟಂತೆ ವಿರೋಧ ವ್ಯಕ್ತಪಡಿಸುವುದು ಅನಗತ್ಯ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

DCM REACT ON MEKEDATU PROJEC
ಡಿಸಿಎಂ ಡಿ ಕೆ ಶಿವಕುಮಾರ್ (ETV Bharat)

By ETV Bharat Karnataka Team

Published : Feb 26, 2025, 8:20 PM IST

ಬೆಂಗಳೂರು: ಮೇಕೆದಾಟು ಯೋಜನೆಯ ವಿಚಾರದಲ್ಲಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತನ್ನ ನಿಲುವನ್ನು ಸ್ಪಷ್ಟವಾಗಿ ತಿಳಿಸಲು ಮನವಿ ಮಾಡಿದ್ದೇವೆ ಎಂದು ಜಲಸಂಪನ್ಮೂಲ ಸಚಿವರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ದೆಹಲಿಯಲ್ಲಿ ನಿನ್ನೆ ಕೇಂದ್ರ ಸಚಿವರನ್ನು ಭೇಟಿ ಮಾಡಿ ಬೆಂಗಳೂರಿಗೆ ವಾಪಸ್ ಆದ ಅವರು, ಇಂದು ಸುದ್ದಿಗೋಷ್ಠಿ ಕರೆದು ಈ ಬಗ್ಗೆ ಮಾಹಿತಿ ಹಂಚಿಕೊಂಡರು.

ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ (ETV Bharat)

ರಾಜಕೀಯ ವಿಚಾರವಾಗಿ ಏನೇ ಇರಲಿ, ಕೇಂದ್ರ ನೀರಾವರಿ ಸಚಿವರು ನ್ಯಾಯದ ಸ್ಥಾನದಲ್ಲಿದ್ದುಕೊಂಡು ನಿರ್ಧಾರ ತಿಳಿಸಬೇಕಿದೆ ಎಂದರು.

ಮಹಾದಾಯಿ, ಗೋದಾವರಿ, ಕೃಷ್ಣ, ಕಾವೇರಿ, ಪೆನ್ನಾರ್ ನದಿಗಳ ಜೋಡಣೆಗೆ ರಾಜಸ್ಥಾನದ ಉದಯಪುರ್‌ನಲ್ಲಿ ನಡೆದ ಜಲಶಕ್ತಿ ಸಚಿವರ ಸಮ್ಮೇಳನದಲ್ಲಿ ಪ್ರಸ್ತಾವನೆ ಮಾಡಲಾಗಿದೆ. ನದಿ ಜೋಡಣೆಯ ವೇಳೆ ಎಲ್ಲರಿಗೂ ಅವರ ಪಾಲಿನ ನೀರಿನ ಹಂಚಿಕೆ ಬಗ್ಗೆ ಚರ್ಚೆ ಮಾಡಬೇಕಿದೆ ಎಂದು ತಿಳಿಸಿದರು.

ಪರಿಸರದ ಕಾರಣಕ್ಕೆ ನದಿ ಜೋಡಣೆಗೆ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ. ಒಂದು ಮರಕ್ಕೆ ನಾಲ್ಕು ಮರ ನೆಡಲಾಗುವುದು. ರಸ್ತೆ, ನೀರಿನ ಯೋಜನೆಗಳಿಗೆ ಸಂಬಂಧಪಟ್ಟಂತೆ ವಿರೋಧ ವ್ಯಕ್ತಪಡಿಸುವುದು ಅನಗತ್ಯ ಎಂದರು.

ಪೆನ್ನಾರ್ ನದಿ ವಿಷಯವಾಗಿ ವಿವಾದವಿದೆ. ಸಂಧಾನದ ಮೂಲಕ ಇತ್ಯರ್ಥಪಡಿಸಲು ಪರಿಶೀಲನೆ ನಡೆಯುತ್ತಿದೆ. ಗೇಟ್ ತೆರೆಯಲು ಮನವಿ ಮಾಡಿದ್ದೇವೆ. ಕಳೆದ ವರ್ಷ 300 ಟಿಎಂಸಿ, ಅದಕ್ಕಿಂತಲೂ ಹಿಂದಿನ ವರ್ಷ 400 ಟಿಎಂಸಿ ನೀರು ಸಮುದ್ರಕ್ಕೆ ಹರಿದು ಹೋಗಿದೆ. ಯಾರು ಬಳಕೆ ಮಾಡಿಕೊಳ್ಳಲಾಗುತ್ತಿಲ್ಲ ಎಂದು ಹೇಳಿದರು.

ತುಂಗ-ಭದ್ರಾ ನದಿಯ ಹೂಳು ತುಂಬಿ 30 ಟಿಎಂಸಿ ನಷ್ಟವಾಗುತ್ತಿದೆ. ಸುಮಾರು 24 ಟಿಎಂಸಿ ಹೂಳನ್ನು ತೆಗೆಯಲು ಯೋಜನಾ ವೆಚ್ಚ, ತೆಗೆದ ಹೂಳನ್ನು ಎಲ್ಲಿ ಹಾಕುವುದು ಎಂಬೆಲ್ಲಾ ಚರ್ಚೆಗಳಿವೆ. ಸದ್ಯಕ್ಕೆ ಹೂಳು ತೆಗೆಯುವ ವಿಚಾರಕ್ಕೆ ಹೋಗುತ್ತಿಲ್ಲ. ಪರ್ಯಾಯವಾಗಿ ನವಿಲೇ ಬಳಿ ಅಣೆಕಟ್ಟು ನಿರ್ಮಾಣ ಮಾಡುವ ಪ್ರಸ್ತಾವನೆ ಇದೆ. ನಮ್ಮ ಅಧಿಕಾರಿಗಳು ಪರ್ಯಾಯವಾಗಿ ಮತ್ತೊಂದು ಯೋಜನೆ ಪ್ರಸ್ತಾವನೆ ಮಾಡಿದ್ದರು. ಆ ಬಗ್ಗೆ ಆಂಧ್ರ ಪ್ರದೇಶ, ತೆಲಂಗಾಣ ಹಾಗೂ ನಾವು ಪ್ರತ್ಯೇಕ ಸಭೆ ನಡೆಸಿದ್ದೇವೆ. ಅಲ್ಲಿಂದಲೇ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರ ಬಾಬು ನಾಯ್ಡು ಅವರಿಗೆ ಕರೆ ಮಾಡಿ ಮಾತನಾಡಿ, ಮಾರ್ಚ್ ಮೊದಲ ವಾರ ನಮ್ಮ ತಂಡ ಆಂಧ್ರಕ್ಕೆ ಭೇಟಿ ನೀಡಲಿದೆ. ಸಮಯ ನೀಡಿ ಎಂದು ಕೇಳಿದ್ದೇನೆ. ಅವರು ಒಪ್ಪಿದ್ದಾರೆ. ಪರ್ಯಾಯ ಯೋಜನೆ ಏನು ಎಂದು ಸದ್ಯಕ್ಕೆ ಬಹಿರಂಗಪಡಿಸಲು ಸಾಧ್ಯವಿಲ್ಲ. ಚಂದ್ರಬಾಬು ನಾಯ್ಡು ದೇಶದ ಹಿರಿಯ ನಾಯಕರು. ಅವರನ್ನು ನಾನೇ ಭೇಟಿ ಮಾಡುತ್ತೇನೆ ಎಂದರು.

ಜಲಸಂಪನ್ಮೂಲ ಇಲಾಖೆಯಿಂದ 11,122 ಕೋಟಿ ರೂ., ಸಣ್ಣ ನೀರಾವರಿ ಇಲಾಖೆಯಿಂದ 3 ಸಾವಿರ ಕೋಟಿ ರೂ.ಗಳ ಯೋಜನೆಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದ ಅವರು, ನಾಲೆಗಳ ಆಧುನಿಕರಣವಾಗಬೇಕು. ಅಚ್ಚುಕಟ್ಟು ಪ್ರದೇಶದ ಕೊನೆಯ ಭಾಗಕ್ಕೂ ನೀರು ಹರಿಯಬೇಕಿದೆ. ಈ ವಿಚಾರವಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಕೃಷ್ಣ ನದಿಯ ವಿವಾದವಾಗಿ ನ್ಯಾಯಾಧೀಕರಣದ ತೀರ್ಪನ್ನು ಗೆಜೆಟ್ ನೋಟಿಫಿಕೇಷನ್ ಮಾಡಿ, ಆಲಮಟ್ಟಿ ಎತ್ತರವನ್ನು 524 ಮೀಟರ್‌ಗೆ ಎತ್ತರಿಸಲು ಅನುಮತಿ ನೀಡಬೇಕು ಎಂದು ಮನವಿ ಮಾಡಿದ್ದೇವೆ. ಈಗಾಗಲೇ ಕೆಲಸ ಪ್ರಾರಂಭಿಸಲಾಗಿದೆ. ಭೂಸ್ವಾಧೀನಕ್ಕೆ ಕೆಲ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ ಎಂದು ವಿವರಿಸಿದರು.

ಕಳಸಾ-ಬಂಡೂರಿ ಯೋಜನೆಗೂ ಅರಣ್ಯ ಇಲಾಖೆ ಅನುಮತಿ ಬೇಕಿದೆ. ಕೇಂದ್ರ ಸಚಿವರು ಸಭೆ ನಡೆಸಿದ್ದರು. ಈ ಮೊದಲು ಪ್ರಧಾನಿ ಭೇಟಿ ಮಾಡಿದಾಗ ಜಲಶಕ್ತಿ ಸಚಿವರಿಗೆ ಅಧಿಕಾರ ನೀಡಿರುವುದಾಗಿ ತಿಳಿಸಿದ್ದರು. ಅದರಂತೆ ಆಣೆಕಟ್ಟೆ ನಿರ್ಮಾಣಕ್ಕೆ ಅನುಮತಿ ನೀಡುವಂತೆ ಮನವಿ ಮಾಡುವುದಾಗಿ ಹೇಳಿದ್ದರು. ರಾಜ್ಯದ ಎಲ್ಲಾ ಸಂಸದರಿಗೆ ಕ್ಷೇತ್ರಗಳಿಗೆ ಸೇರಿದ ಹಾಗೂ ರಾಜ್ಯದ ಹಿತಾಸಕ್ತಿಗೆ ಸೇರಿದ ಯೋಜನೆಗಳ ಬಗ್ಗೆ ವೈಯಕ್ತಿಕವಾಗಿ ಮಾಹಿತಿ ನೀಡಲು ಪತ್ರ ಬರೆಯಲಾಗುವುದು. ಎತ್ತಿನಹೊಳೆ ವಿಚಾರವಾಗಿಯೂ ಪ್ರಸ್ತಾವನೆ ಮಾಡಲಾಗಿದೆ ಎಂದು ಹೇಳಿದರು.

5,400 ಕೋಟಿ ರೂ. ವಿಚಾರದಲ್ಲೂ ತಾಂತ್ರಿಕ ಅಂಶ ಹೇಳುತ್ತಿದ್ದರೂ, ನಾವು ಎಲ್ಲಾ ಅಗತ್ಯ ದಾಖಲೆಗಳನ್ನು ಸಲ್ಲಿಸಿದ್ದೇವೆ. ಆರು ಜಿಲ್ಲೆಗಳ ವ್ಯಾಪ್ತಿಗೆ ಒಳಪಡುವ ಸಂಸದರು ಬಿಜೆಪಿಯವರೇ ಇದ್ದಾರೆ. ಅವರು ಈ ವಿಚಾರವಾಗಿ ಗಮನ ಹರಿಸಬೇಕಿದೆ. ಬೇಸಿಗೆ ಆರಂಭವಾಗಿರುವುದರಿಂದ ಕುಡಿಯುವ ನೀರಿಗೆ ಸಮಸ್ಯೆ ಇಲ್ಲ. ವ್ಯವಸಾಯಕ್ಕೆ ನಿಯಂತ್ರಣ ಮಾಡಲಾಗಿದೆ. ನೆರೆಹೊರೆ ರಾಜ್ಯಗಳ ನಡುವೆ ನೀರು ಕೊಡುವ ತೆಗೆದುಕೊಳ್ಳುವ ಸಂಬಂಧ ಇದೆ. ಅದರಂತೆ ನಾರಾಯಣಪುರ ಜಲಾಶಯದಿಂದ ತೆಲಂಗಾಣಕ್ಕೆ ಒಂದು ಟಿಎಂಸಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದ್ದೇನೆ. ನಾನೇ ಸಹಿ ಮಾಡಿದ್ದೇನೆ. ಕುಡಿಯುವ ನೀರು ಹಾಗೂ ಕೃಷಿಗಾಗಿ ಬಿಡುಗಡೆ ಮಾಡಲಾಗಿದೆ. ನೀರು ಬಿಟ್ಟಿರುವ ವಿಚಾರದಲ್ಲಿ ಯಾವುದೇ ಕಣ್ಣಾಮುಚ್ಚಾಲೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಡಿಕೆಶಿ ಮೇಕೆದಾಟುಗೆ ಮೊದಲು ತಮಿಳುನಾಡು ಸರ್ಕಾರದ ಒಪ್ಪಿಗೆ ಪಡೆಯಲಿ: ಹೆಚ್​. ಡಿ. ಕುಮಾರಸ್ವಾಮಿ - UNION MINISTER H D KUMARASWAMY

ABOUT THE AUTHOR

...view details