ಶಿವಮೊಗ್ಗ: ಫೆ.1ರಂದು ಕೇಂದ್ರ ಸರ್ಕಾರದ ಬಜೆಟ್ ಮಂಡನೆ ಆಗಲಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡನೆ ಮಾಡಲಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರದ 10ನೇ ಬಜೆಟ್ ಇದಾಗಿದ್ದು, ಈ ಬಾರಿ ಲೋಕಸಭೆ ಚುನಾವಣೆ ಮುನ್ನ ಬಜೆಟ್ ಮಂಡನೆ ಆಗುತ್ತಿರುವುದರಿಂದ ದೇಶದ ಜನರು ಬಹಳ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಅಷ್ಟೇ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಈ ಬಾರಿ ಬಜೆಟ್ದಲ್ಲಿ ತೆರಿಗೆ ವಿನಾಯಿತಿ, ಜಿಎಸ್ಟಿ ಕಡಿಮೆ ಮಾಡುವುದು ಸೇರಿದಂತೆ ಇನ್ನಿತರ ಯೋಜನೆಗಳತ್ತ ಜನರು ಆಶಾಭಾವನೆ ಇಟ್ಟುಕೊಂಡಿದ್ದಾರೆ. ಸಬ್ಸಿಡಿ ನೀಡುವುದು ಸೇರಿದಂತೆ ವಿವಿಧ ಉದ್ಯಮಗಳಿಗೆ ಅನುಕೂಲ ಆಗುವ ವಿಷಯಗಳು ಪ್ರಸ್ತಾಪವಾಗುತ್ತವೆಯೋ, ದೇಶದ ಪ್ರವಾಸೋದ್ಯಮ, ಕೃಷಿ ಇನ್ನಿತರ ವಲಯಕ್ಕೆ ಕೇಂದ್ರ ಬಜೆಟ್ ಅನುಕೂಲಕರ ಆಗಲಿದೆಯೇ ಕಾದು ನೋಡಬೇಕಷ್ಟೇ..
ಶಿವಮೊಗ್ಗ ಜಿಲ್ಲೆಯಲ್ಲಿ ಕೇಂದ್ರ ಸರ್ಕಾರ ರೈಲ್ವೆ ಯೋಜನೆ, ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಇನ್ನಿತರ ಕಾಮಗಾರಿ ನಡೆಯುತ್ತಿವೆ. ಇದರಿಂದ ಈ ಸಲದ ಬಜೆಟ್ ಮೇಲೆ ಜಿಲ್ಲೆಯ ಜನರ ಅಪಾರ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.
ತಾಳಗುಪ್ಪ- ಶಿರಸಿ ರೈಲು ಮಾರ್ಗ ವಿಸ್ತರಣೆ:ಕೇಂದ್ರದ ಬಜೆಟ್ ಮೇಲೆ ಜಿಲ್ಲೆಯ ಜಿಲ್ಲೆಯ ಜನತೆ ನಿರೀಕ್ಷೆ ಇಟ್ಟುಕೊಂಡಿರುವ ಕುರಿತು ಸಂಸದ ಬಿ ವೈ ರಾಘವೇಂದ್ರ ಮಾತನಾಡಿ, ಜನವರಿ 31 ರಿಂದ ಕೇಂದ್ರದ ಜಂಟಿ ಅಧಿವೇಶನ ಪ್ರಾರಂಭವಾಗುತ್ತದೆ. ಫೆಬ್ರವರಿ 1 ದೇಶದ ಬಜೆಟ್ ಅನ್ನು ಆರ್ಥಿಕ ಸಚಿವರು ಬಜೆಟ್ ಮಂಡನೆ ಮಾಡಲಿದ್ದಾರೆ. ದೇಶದ ಮೂಲ ಸೌಕರ್ಯ ಅಭಿವೃದ್ದಿ ಸೇರಿದಂತೆ, ಮುಂದಿನ ಚುನಾವಣೆ ದೃಷ್ಟಿಯಿಂದ ಮೋದಿ ಅವರು ಬಜೆಟ್ ನೀಡಬಹುದು ಎಂಬ ನೀರಿಕ್ಷೆ ಎಲ್ಲರಲ್ಲಿಯೂ ಇರುತ್ತೆ.
ಆದರೆ, ಮೋದಿಯವರ ಆಡಳಿತದಲ್ಲಿ 9 ವರ್ಷಗಳಲ್ಲಿ ನೀಡಿದ ಬಜೆಟ್ಗಳನ್ನು ನೋಡಿದಾಗ ಯಾವುದೇ ಬಜೆಟ್ ಅವರು ಚುನಾವಣೆ ದೃಷ್ಟಿಯಿಂದ ನೀಡಿಲ್ಲ. ಅವರು ದೇಶದ ಸರ್ವಾಂಗೀಣ ಅಭಿವೃದ್ಧಿ ಮುಂದಿಟ್ಟುಕೊಂಡು ಬಜೆಟ್ ಮಂಡನೆ ಮಾಡುತ್ತಿದ್ದಾರೆ. ಈ ಬಜೆಟ್ನಲ್ಲಿ ಕರ್ನಾಟಕದ ಹಾಗೂ ಶಿವಮೊಗ್ಗ ಜಿಲ್ಲೆಯ ಅಭಿವೃದ್ದಿಗೆ ಪೂರಕ ಬಜೆಟ್ ನೀಡಬಹುದೇ ಎಂದು ನೋಡಬೇಕಿದೆ.
ಈಗ ಶಿವಮೊಗ್ಗ ಜಿಲ್ಲೆಯಲ್ಲಿ ಅನೇಕ ಅಭಿವೃದ್ದಿ ಕಾಮಗಾರಿಗಳು ನಡೆಯುತ್ತಿವೆ. ರಿಂಗ್ ರೋಡ್, ರೈಲ್ವೆ ಕಾಮಗಾರಿ, ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಿಸಿದಂತೆ ಕಾಮಗಾರಿಗಳು ನಡೆಯುತ್ತಿವೆ. ರಾಷ್ಟ್ರೀಯ ಹೆದ್ದಾರಿ ಸಂಬಂಧ 2-3 ಸಾವಿರ ಕೋಟಿ ರೂ ಕಾಮಗಾರಿ ನಡೆಯುತ್ತಿದೆ. ಮುಂದುವರಿದ ಕಾಮಗಾರಿಗಳಿಗೆ ಅನುದಾನ ಬೇಕಾಗಿದೆ. ನಮ್ಮ ಪ್ರಯತ್ನದಿಂದ ಈ ಬಾರಿ ತಾಳಗುಪ್ಪದಿಂದ ಶಿರಸಿ ರೈಲ್ವೆ ಕಾಮಗಾರಿಗೆ ಸರ್ವೇ ಆಗಿ, ವರದಿ ಬಂದಿದೆ. ತಾಳಗುಪ್ಪದಿಂದ ಶಿರಸಿ ರೈಲು ಸಂಪರ್ಕ ವಿಸ್ತರಣೆ ಆಗಬಹುದು ಎಂಬ ನಿರೀಕ್ಷೆಯೂ ಇದೆ.
ರೈಲ್ವೆ ಹಾಗೂ ಹೈವೇ ಕಾಮಗಾರಿಗೆ ಆದ್ಯತೆ ನೀಡಬೇಕು ಎಂಬ ಮನವಿ ಮಾಡಲಾಗಿದೆ. ಶಿವಮೊಗ್ಗ- ರಾಣೆಬೆನ್ನೂರು ರೈಲ್ವೆ ಕಾಮಗಾರಿಗೆ ಕೇಂದ್ರ ಅನುಮೋದನೆ ನೀಡಿತು. ಇದರ ಮುಂದುವರಿದ ಕಾಮಗಾರಿಗೆ ಹಣ ಬೇಕಾಗಿದೆ. ಇದಕ್ಕೆ ರೈಲ್ವೆ ಬಜೆಟ್ ನಲ್ಲಿ ಅನುದಾನ ಸಿಗುವ ನಿರೀಕ್ಷೆ ಇದೆ. ತಾಳಗುಪ್ಪ- ಶಿರಸಿ ರೈಲು ಮಾರ್ಗ ವಿಸ್ತರಣೆಗೆ ಅನುಮೋದನೆ ಸಿಗುವ ನಿರೀಕ್ಷೆಯಲ್ಲಿದ್ದೇವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಉಸ್ತುವಾರಿ ಸಚಿವರು ಹೇಳಿದ್ದಿಷ್ಟು:ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮಾತನಾಡಿ, ಕೇಂದ್ರ ಸರ್ಕಾರ ಕಳೆದ 10 ವರ್ಷಗಳಿಂದ ಮಾಡದ ಕೆಲಸವನ್ನು ಈಗಲಾದರೂ ಮಾಡಬಹುದು ನೋಡೋಣ, ಮಲೆನಾಡು ಶರಾವತಿ ಕಣಿವೆ ಪ್ರದೇಶದ ಭೂ ಹಕ್ಕು, ಕಸ್ತೂರಿ ರಂಗನ್ ವರದಿ ಸೇರಿದಂತೆ ಅನೇಕ ಸಮಸ್ಯೆ ಕುರಿತು ಕ್ರಮ ತೆಗದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಆದಾಯ ತೆರಿಗೆ ಮಿತಿ ಹೆಚ್ಚಿಸಬೇಕು - ಹೋಬಳಿದಾರ್: ಕೇಂದ್ರ ಬಜೆಟ್ ನಿರೀಕ್ಷೆ ಕುರಿತು ಶಿವಮೊಗ್ಗ ಚೇಂಬರ್ ಆಫ್ ಕಾಮರ್ಸ್ ಕಾರ್ಯದರ್ಶಿ ವಸಂತ ಹೋಬಳಿದಾರ್ ಮಾತನಾಡಿ, ಆದಾಯ ತೆರಿಗೆ ಮಿತಿ ಹೆಚ್ಚಿಸಬೇಕು. ತೆರಿಗೆಯನ್ನು ಕಡಿಮೆ ಮಾಡಬೇಕು. ಹೆಚ್ಚಿನ ಜನರನ್ನು ತೆರಿಗೆ ಪಾವತಿ ವ್ಯಾಪ್ತಿಗೆ ತರಬೇಕು. ಸಂಬಳದಾರರ ಮನೆ ಮೇಲೆ ನೀಡುವ ಸಾಲದ ಬಡ್ಡಿದರವನ್ನು ಕಡಿಮೆ ಮಾಡಬೇಕು. ಮನೆ ಸಾಲವನ್ನು 18 ಸಿ ನಲ್ಲಿ ಕ್ಲೈಮ್ ಮಾಡುವುದಕ್ಕೆ ಅವಕಾಶ ಮಾಡಿಕೊಡಬೇಕಿದೆ.
ಜಿಎಸ್ ಟಿ ಪಾವತಿದಾರರಿಗೆ ಪಾವತಿಸುವ ಅವಧಿಯನ್ನು ವಿಸ್ತರಿಸಬೇಕಿದೆ. ಇಂದಿನ ದಿನಗಳಲ್ಲಿ ವ್ಯಾಪಾರ ಮಾಡುವುದೇ ದುಸ್ತರ ಎಂಬಂತೆ ಕಾನೂನು ಮಾಡಲಾಗಿದೆ. ಇನ್ಮುಂದೆ ವ್ಯಾಪಾರಿ ಸ್ನೇಹಿ ಕಾನೂನು ತರಬೇಕು. ಎಂಎಸ್ಎಂಇನಲ್ಲಿ ಸೆಕ್ಸನ್ 45ನಲ್ಲಿ ತೆರಿಗೆ ಪಾವತಿ ಮಾಡುವ 45 ದಿನದ ಅವಧಿ ನಿಗದಿ ಮಾಡಿರುವುದು ಸರಿಯಲ್ಲ. ಇಲ್ಲಿನ ವ್ಯಾಪಾರವು ಸಾಲದ ಮೇಲೆ ನಡೆಯುತ್ತಿದೆ. ಇದರಿಂದ ಪಾವತಿ ಮಾಡುವ ಅವಧಿಯನ್ನು ವಿಸ್ತರಿಸಬೇಕಿದೆ ಎಂದರು. ಶಿವಮೊಗ್ಗ ಜಿಲ್ಲಾ ಕೇಂದ್ರದಿಂದ ಬೆಂಗಳೂರಿಗೆ ತಲುಪುವ ಅವಧಿಯನ್ನು ಕಡಿಮೆ ಮಾಡಬೇಕಿದೆ. ಅಲ್ಲದೆ ಜಿಲ್ಲೆಯಲ್ಲಿ ಇರುವ ಪ್ರವಾಸಿ ತಾಣಗಳನ್ನು ಅಭಿವೃದ್ದಿ ಮಾಡಬೇಕಿದೆ ಎಂದು ಒತ್ತಾಯಿಸಿದ್ದಾರೆ.
ಇದನ್ನೂಓದಿ:ಸಂಸದ ಪ್ರತಾಪ್ ಸಿಂಹ ವಿರುದ್ಧ ಪತ್ರಿಕಾಗೋಷ್ಠಿ ನಡೆಸದಂತೆ ಕೋರ್ಟ್ ತಡೆಯಾಜ್ಞೆ