ಬೆಂಗಳೂರು: ನಗರದ ಹೊರವಲಯದ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಫಾರ್ಮ್ ಹೌಸ್ನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ತಡರಾತ್ರಿ ಸಿಸಿಬಿ ಪೊಲೀಸರ ತಂಡ ದಾಳಿ ನಡೆಸಿದೆ. ಭಾನುವಾರ ಸಂಜೆಯಿಂದ ನಡೆಯುತ್ತಿದ್ದ ಪಾರ್ಟಿಯ ಕುರಿತು ಮಾಹಿತಿ ತಿಳಿದ ಸಿಸಿಬಿ ಪೊಲೀಸರು, ನಸುಕಿನಜಾವ 3 ಗಂಟೆ ಸುಮಾರಿಗೆ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಪಾರ್ಟಿಯಲ್ಲಿ ಮಾದಕ ಪದಾರ್ಥ ಪತ್ತೆಯಾಗಿದ್ದು, ತೆಲುಗು ನಟ ನಟಿಯರು ಸಹ ಪಾರ್ಟಿಯಲ್ಲಿ ಭಾಗಿಯಾಗಿದ್ದರು ಎಂದು ತಿಳಿದುಬಂದಿದೆ.
ಉದ್ಯಮಿಯೊಬ್ಬರ ಒಡೆತನದ ಫಾರ್ಮ್ ಹೌಸ್ನಲ್ಲಿ ಹೈದರಾಬಾದ್ ಮೂಲದ ವಾಸು ಎಂಬಾತ ತನ್ನ ಬರ್ತಡೇ ಪಾರ್ಟಿ ಆಯೋಜಿಸಿದ್ದ. ಅವಧಿ ಮುಗಿದ ಬಳಿಕವೂ ಪಾರ್ಟಿ ಮುಂದುವರೆಯುತ್ತಿದ್ದ ಹಿನ್ನೆಲೆಯಲ್ಲಿ ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಸುಮಾರು 17 ಗ್ರಾಂನಷ್ಟು ಎಂಡಿಎಂಎ ಮಾತ್ರೆ, ಕೊಕೇನ್ ಪತ್ತೆಯಾಗಿದೆ. ಪಾರ್ಟಿಯಲ್ಲಿ ಆಂಧ್ರ, ಬೆಂಗಳೂರು ಮೂಲದ 100ಕ್ಕೂ ಹೆಚ್ಚು ಜನ ಭಾಗಿಯಾಗಿದ್ದರು ಎಂಬುದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.