ಬೆಂಗಳೂರು : ಲೀಸ್ ಹೆಸರಿನಲ್ಲಿ ಬಾಡಿಗೆದಾರರಿಗೆ ಹಾಗೂ ಬಾಡಿಗೆ ಹೆಸರಿನಲ್ಲಿ ಮನೆ ಮಾಲೀಕರಿಗೆ ವಂಚಿಸುತ್ತಿದ್ದ ಪ್ರಕರಣದ ಓರ್ವ ಆರೋಪಿಯನ್ನು ಸಿಸಿಬಿಯ ಆರ್ಥಿಕ ಅಪರಾಧ ದಳದ ಪೊಲೀಸರು ಬಂಧಿಸಿದ್ದಾರೆ. ಖಲೀಲ್ ಷರೀಫ್ ಬಂಧಿತ ಆರೋಪಿ. ಟಾಂಜನೈಟ್ ರಿಯಾಲ್ಟಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿ ಹೆಸರಿನಲ್ಲಿ ಹಲವರಿಂದ ಕೋಟ್ಯಂತರ ರೂ. ಹಣ ಪಡೆದು ವಂಚಿಸಿರುವ ಆರೋಪದಡಿ ಖಲೀಲ್ ಷರೀಫ್ ಹಾಗೂ ಸೈಯದ್ ಅಹಮದ್ ಹುಸೇನ್ ವಿರುದ್ಧ ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರದ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು.
ಬಾಡಿಗೆಗೆ ಖಾಲಿಯಿರುವ ಮನೆ, ಫ್ಲ್ಯಾಟ್‌ಗಳ ವಿವರ ಪಡೆಯುತ್ತಿದ್ದ ಆರೋಪಿಗಳು ಸಾಮಾಜಿಕ ಜಾಲತಾಣ ಸೇರಿದಂತೆ ಮತ್ತಿತರ ವೇದಿಕೆಗಳಲ್ಲಿ ಜಾಹೀರಾತು ನೀಡುತ್ತಿದ್ದರು. ಜಾಹೀರಾತು ಗಮನಿಸಿ ಸಂಪರ್ಕಿಸುವವರಿಗೆ ಮೊದಲಿಗೆ ಮನೆ, ಫ್ಲ್ಯಾಟ್‌ಗಳನ್ನ ತೋರಿಸುತ್ತಿದ್ದ ಆರೋಪಿಗಳು, ಅವರು ಒಪ್ಪಿದ ಬಳಿಕ ಒಂದು ಅಥವಾ ಎರಡು ವರ್ಷಗಳಿಗೆ ಲೀಸ್‌ಗೆ ಅಗ್ರಿಮೆಂಟ್ ಮಾಡಿಕೊಂಡು ಹಣ ಪಡೆಯುತ್ತಿದ್ದರು. ಆದರೆ ಮನೆ/ಫ್ಲ್ಯಾಟ್ ಮಾಲೀಕರ ಬಳಿ ಆ ಅವಧಿಯಲ್ಲಿ ತಾವೇ ಬಾಡಿಗೆ ಪಾವತಿಸುವುದಾಗಿ ಅಗ್ರಿಮೆಂಟ್ ಮಾಡಿಕೊಳ್ಳುತ್ತಿದ್ದರು. ಆರಂಭದಲ್ಲಿ ಒಂದು ಅಥವಾ ಎರಡು ತಿಂಗಳು ಸರಿಯಾಗಿ ಬಾಡಿಗೆ ಪಾವತಿಸುತ್ತಿದ್ದ ಆರೋಪಿಗಳು ನಂತರ ಬಾಡಿಗೆ ಪಾವತಿಸುತ್ತಿರಲಿಲ್ಲ. ಕೊನೆಗೆ ಮನೆ/ಫ್ಲ್ಯಾಟ್‌ನ ಮಾಲೀಕರು ಲೀಸ್‌ಗೆ ವಾಸವಿದ್ದವರ ಬಳಿ ಬಾಡಿಗೆ ಕಟ್ಟುವಂತೆ ಕೇಳಲಾರಂಭಿಸುತ್ತಿದ್ದರು.