ತುಮಕೂರು:ದನಗಳನ್ನು ಖರೀದಿಸುವ ವೇಳೆ ಅದರ ಕಳ್ಳನನ್ನೇ ಮಾಲೀಕನೆಂದು ಭಾವಿಸಿ ಖರೀದಿದಾರ ತೆಗೆದುಕೊಂಡಿದ್ದ ಫೋಟೋ ಮೂಲಕವೇ ಆರೋಪಿ ಪತ್ತೆಯಾದ ಘಟನೆ ಜಿಲ್ಲೆಯ ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ಬಳಿಯ ಕಂಪ್ಲಾಪುರದಲ್ಲಿ ನಡೆದಿದೆ.
ದನಗಳ್ಳತನದ ಆರೋಪಿ ಎಂದು ತಿಳಿಯದೆ ಮಾಲೀಕನೆಂದೇ ಭಾವಿಸಿ ಬಾಷಾ ಎಂಬವರು ಕೆ.ಜಿ ಟೆಂಪಲ್ನಲ್ಲಿ ದನಗಳನ್ನು ಖರೀದಿಸಿದ್ದರು. ಈ ವೇಳೆ, ದನಗಳನ್ನು ಮಾರಾಟ ಮಾಡಿದ್ದ ಪುಟ್ಟರಾಜು ಎಂಬಾತನೊಂದಿಗೆ ಫೋಟೋ ತೆಗೆದುಕೊಂಡಿದ್ದರು. ನಂತರ ಕಳ್ಳತನದ ವಿಚಾರ ಬೆಳಕಿಗೆ ಬಂದಿದ್ದು, ದನ ಮಾರಾಟ ಮಾಡಲು ಬಂದಿದ್ದ ವ್ಯಕ್ತಿಯೇ ಆರೋಪಿ ಎಂದು ಗೊತ್ತಾಗಿದೆ.
ದನಕಳುವಿನ ಬಗ್ಗೆ ಸ್ಥಳೀಯರು ಮಾತನಾಡಿದರು (ETV Bharat) ಸ್ಥಳೀಯರೊಬ್ಬರು ಮಾತನಾಡಿ,"ಕುಣಿಗಲ್ ತಾಲೂಕಿನ ಕಂಪ್ಲಾಪುರ ಗ್ರಾಮದ ಚನ್ನೇಗೌಡ ಎಂಬವರಿಗೆ ಸೇರಿದ ಸುಮಾರು 70 ಸಾವಿರ ರೂ ಬೆಲೆಬಾಳುವ ದನಗಳನ್ನು ರಾತ್ರಿ ವೇಳೆ ಕಳ್ಳತನ ಮಾಡಿ ಗುಬ್ಬಿ ತಾಲೂಕಿನ ಕೆ.ಜಿ ಟೆಂಪಲ್ಗೆ ಮಾರಾಟ ಮಾಡಲು ಟೆಂಪೋದಲ್ಲಿ ಕೊಂಡೊಯ್ದಿದ್ದಾರೆ. ಅಲ್ಲಿ ಬಾಷಾ ಎಂಬವರಿಗೆ 43 ಸಾವಿರ ರೂ.ಗೆ ಮಾರಾಟ ಮಾಡಿದ್ದಾರೆ. ಚನ್ನೇಗೌಡರು ರಾತ್ರಿ ಎಚ್ಚರಗೊಂಡು ನೋಡಿದಾಗ ದನ ಕಳವಾಗಿರುವುದು ಗೊತ್ತಾಗಿದೆ. ದನಗಳನ್ನು ಕದ್ದು ಅರ್ಧ ಕಿಲೋ ಮೀಟರ್ವರೆಗೆ ತೆಗೆದುಕೊಂಡು ಹೋಗಿ ಬೈಪಾಸ್ ಬಳಿ ಟೆಂಫೋಗೆ ಹಾಕಿದ್ದಾರೆ. ಅಲ್ಲಿಂದ ಕೆ.ಜಿ ಟೆಂಪಲ್ಗೆ ಹೋಗಿದ್ದಾರೆ. ಇಲ್ಲಿ ದನ ಕಳುವಾಗಿದ್ದ ವಿಷಯ ತಿಳಿದು ಒಂದಷ್ಟು ಹುಡುಗರು ಬೈಕ್ನಲ್ಲಿ ಅಲ್ಲಿಗೆ ಹೋಗಿದ್ದಾರೆ. ಅಲ್ಲಿ ಕಳವಾಗಿದ್ದ ದನಗಳು ಸಿಕ್ಕಿವೆ. ಅವುಗಳನ್ನು ಖರೀದಿಸಿದ ಬಾಷಾ ಬಳಿ ತೆರಳಿ ವಿಚಾರಿಸಿದಾಗ, ಅವರು, ನಾನು ಹುಲಿಯೂರು ದುರ್ಗಾದವನಿಂದ ತೆಗೆದುಕೊಂಡಿದ್ದೇನೆ ಎಂದು ಹೇಳಿ, ಫೋಟೋ ಹಾಗೂ ಮೊಬೈಲ್ ನಂಬರ್ ಕೊಟ್ಟಿದ್ದಾರೆ. ಆಗ ದನ ಕದ್ದಿರುವುದು ನಮ್ಮ ಊರಿನ ವ್ಯಕ್ತಿಯೇ ಎಂಬುದು ಗೊತ್ತಾಗಿದೆ. ಇದಾದ ನಂತರ ಟೆಂಪೋದಲ್ಲಿ ಬಾಷಾ ಹಾಗೂ ದನ ಕದ್ದವನನ್ನು ಕಂಪ್ಲಾಪುರ ಗ್ರಾಮಕ್ಕೆ ಊರಿನವರು ಕರೆತಂದಿದ್ದಾರೆ. ಪೊಲೀಸರು ಪುಟ್ಟರಾಜು ಎಂಬ ಆರೋಪಿಯನ್ನು ಬಂಧಿಸಿದರು" ಎಂದು ತಿಳಿಸಿದರು.
ಕೃತ್ಯಕ್ಕೆ ಬಳಸಿದ್ದ ಗೂಡ್ಸ್ ವಾಹನವನ್ನು ವಶಕ್ಕೆ ಪಡೆದಿರುವ ಪೊಲೀಸರು, ಕಳುವಾಗಿದ್ದ ದನಗಳನ್ನು ಮಾಲೀಕನಿಗೆ ಹಿಂತಿರುಗಿಸಿದ್ದಾರೆ.
ಇದನ್ನೂ ಓದಿ:ಶಿವಮೊಗ್ಗ: ಕಾರಿನಲ್ಲಿ ದನ ಕಳ್ಳತನ ಮಾಡುತ್ತಿದ್ದ ಇಬ್ಬರ ಬಂಧನ - CATTLE THEFT