ಬೆಂಗಳೂರು:ಪ್ರಕರಣದ ವಿಚಾರಣೆಯ ವೇಳೆ ಹೈಕೋರ್ಟ್ ಪೀಠದ ಮುಂದೆಯೇ ಹರಿತವಾದ ವಸ್ತುವಿನಿಂದ ಕುತ್ತಿಗೆಗೆ ಗಾಯ ಮಾಡಿಕೊಂಡ ವ್ಯಕ್ತಿಯ ವಿರುದ್ಧ ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮೈಸೂರಿನ ಶ್ರೀನಿವಾಸ್ ಚಿನ್ನಂ ಎಂಬುವರು ನಿನ್ನೆ (ಬುಧವಾರ) ಹೈಕೋರ್ಟ್ನಲ್ಲಿ ವಿಚಾರಣೆಯ ವೇಳೆ ಕತ್ತಿಗೆ ಗಾಯ ಮಾಡಿಕೊಂಡಿದ್ದರು.
ಹೈಕೋರ್ಟ್ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸ್ ಸಿಬ್ಬಂದಿ ನೀಡಿದ ದೂರಿನ ಮೇರೆಗೆ ಶ್ರೀನಿವಾಸ್ ವಿರುದ್ಧ ಭದ್ರತಾ ಲೋಪದ ಆರೋಪದ ಮೇಲೆ ಐಪಿಸಿ ಸೆಕ್ಷನ್ 309 ಅಡಿ ಎಫ್ಐಆರ್ ದಾಖಲಾಗಿದೆ. ಸದ್ಯ ಗಾಯಾಳು ಶ್ರೀನಿವಾಸ್ ಅವರು ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದ ಬಳಿಕ ಹೇಳಿಕೆ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಹಿನ್ನೆಲೆ:ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಮತ್ತು ನ್ಯಾ.ಎಚ್.ಬಿ. ಪ್ರಭಾಕರ್ ಶಾಸ್ತ್ರಿ ಅವರ ನೇತೃತ್ವದ ವಿಭಾಗೀಯ ಪೀಠದ ಮುಂದೆ ಶ್ರೀನಿವಾಸ್ ಅವರ ವ್ಯಾಜ್ಯದ ಕುರಿತು ವಿಚಾರಣೆ ನಡೆಯುತ್ತಿದ್ದಾಗ, ಏಕಾಏಕಿ ಅವರು 'ನನಗೆ ನ್ಯಾಯ ಕೊಡಿಸಿ' ಎಂದು ಹೇಳುತ್ತ ಕುತ್ತಿಗೆಗೆ ಗಾಯ ಮಾಡಿಕೊಂಡಿದ್ದರು.