ಕಲಬುರಗಿ:ಪೊಲೀಸ್ ಕಾನ್ಸ್ಟೇಬಲ್ವೊಬ್ಬ ಯುವತಿಯನ್ನು ಪ್ರೀತಿಸಿ, ಮದುವೆಯಾಗುವುದಾಗಿ ನಂಬಿಸಿ, ದೈಹಿಕ ಸಂಪರ್ಕ ಬೆಳೆಸಿದ ಬಳಿಕ ವಂಚಿಸಿರುವ ಆರೋಪ ಕೇಳಿಬಂದಿದೆ. ಈ ಸಂಬಂಧ ಯುವತಿಯು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.
ಕಲಬುರಗಿಯ ಕೆಎಸ್ಆರ್ಪಿ ಪೊಲೀಸ್ ಕಾನ್ಸ್ಟೇಬಲ್ ವಿರುದ್ಧ ಯುವತಿ ಗಂಭೀರ ಆರೋಪ ಮಾಡಿದ್ದಾರೆ. ಕಳೆದ ಐದು ತಿಂಗಳ ಹಿಂದೆ ಇನ್ಸ್ಟಾಗ್ರಾಮ್ನಲ್ಲಿ ಯುವತಿ ಹಾಗೂ ಕಾನ್ಸ್ಟೇಬಲ್ ನಡುವೆ ಪರಿಚಯ ಆಗಿತ್ತು. ಬಳಿಕ ಪರಿಚಯ ಪ್ರೀತಿಗೆ ತಿರುಗಿದೆ. ಮೊಬೈಲ್ ನಂಬರ್ ವಿನಿಮಯ ಮಾಡಿಕೊಂಡು, ನಿರಂತರವಾಗಿ ಚಾಟಿಂಗ್, ಕಾಲಿಂಗ್ ಮಾಡಿದ್ದಾರೆ ಎಂದು ಯುವತಿ ಆರೋಪಿಸಿದ್ದಾರೆ.
ಈ ವಿಚಾರ ಯುವತಿ ಮನೆಯಲ್ಲಿ ಗೊತ್ತಾಗಿ ಗಲಾಟೆ ನಡೆದಿದೆ. ಆಗ ಮದುವೆ ಮಾಡಿಕೊಳ್ಳೋಣ ಬಾ ಎಂದು ಆಗಸ್ಟ್ 13ರಂದು ಹೈದರಾಬಾದ್ನಿಂದ ತನ್ನನ್ನು ಕಲಬುರಗಿಗೆ ಕರೆಸಿಕೊಂಡು, ಬಸ್ ನಿಲ್ದಾಣ ಹತ್ತಿರದ ಲಾಡ್ಜ್ನಲ್ಲಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಕಾನ್ಸ್ಟೇಬಲ್ ವಿರುದ್ಧ ಯುವತಿ ಆರೋಪ ಮಾಡಿದ್ದಾರೆ.
ಮರುದಿನ ಮದುವೆಯಾಗೋಣ ಎಂದು ಕೇಳಿದಾಗ, ತನಗೆ ಇವತ್ತು ಹುಮನಾಬಾದ್ನಲ್ಲಿ ಬಂದೋಬಸ್ತ್ ಡ್ಯೂಟಿ ಇದೆ. ಇವತ್ತು ಬೇಡ, ನಾಳೆ ಮದುವೆಯಾಗೋಣ ಎಂದು ಹೇಳಿದ ಕಾನ್ಸ್ಟೇಬಲ್, ತನ್ನನ್ನು ಲಾಡ್ಜ್ನಲ್ಲಿಯೇ ಬಿಟ್ಟು ಹೋಗಿದ್ದಾನೆ ಎಂದು ಯುವತಿ ದೂರಿದ್ದಾರೆ.
ಆ ಬಳಿಕ ಹಲವು ಸಲ ಕರೆ ಮಾಡಿದರೂ ಸ್ವೀಕರಿಸಲಿಲ್ಲ. ಮತ್ತೊಮ್ಮೆ ಸಂಪರ್ಕ ಮಾಡಿದಾಗ, ಮದುವೆ ಆಗಲು ತನ್ನ ಮನೆಯಲ್ಲಿ ಒಪ್ಪುತ್ತಿಲ್ಲ, ವರದಕ್ಷಿಣೆ ಹೆಚ್ಚಿಗೆ ಕೊಟ್ಟರೆ ಮಾತ್ರ ಮದುವೆ ಮಾಡಿಕೊಳ್ಳುತ್ತೇನೆ ಎಂದಿದ್ದಾನೆ. ಆಗ ನಾನು ಮೋಸ ಹೋಗಿರುವುದು ತಿಳಿಯಿತು ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಯುವತಿ ಕಲಬುರಗಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿ ಕಾನ್ಸ್ಟೇಬಲ್ ವಿರುದ್ಧ ಬಿಎನ್ಎಸ್ ಕಾಯ್ದೆ 64, 318 (B), 351, 352 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಸಂತ್ರಸ್ತೆಗೆ ಕೆಲವು ಸಮಾಜ ಸೇವಾ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದು, ಸೂಕ್ತ ಕ್ರಮಕ್ಕೆ ಆಗ್ರಹಿಸಿವೆ.
ಓದಿ:ರಸ್ತೆಯಲ್ಲಿ ಯುವತಿಯೊಂದಿಗೆ ಅಸಭ್ಯ ವರ್ತನೆ: ಹುಬ್ಬಳ್ಳಿಯಲ್ಲಿ ಯುವಕನ ಬಂಧನ - Young Man Arrest