ಶಿವಮೊಗ್ಗ:ರಾಜ್ಯದ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾದ ಅಡಿಕೆಯಲ್ಲಿ ಕ್ಯಾನ್ಸರ್‌ಕಾರಕ ಅಂಶ ಪತ್ತೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಸಹಸಂಸ್ಥೆ 'ಇಂಟರ್ ನ್ಯಾಶನಲ್ ಏಜೆನ್ಸಿ ಫಾರ್ ರಿಸರ್ಚ್ ಆ್ಯಂಡ್ ಕ್ಯಾನ್ಸರ್ ಸಂಸ್ಥೆ' ವರದಿ ನೀಡಿದೆ.
ಅಡಿಕೆ ಬೆಳೆ ಕ್ಷೇತ್ರ:ಶಿವಮೊಗ್ಗ ಜಿಲ್ಲೆಯೊಂದರಲ್ಲಿಯೇ 1.57 ಕೃಷಿ ಭೂಮಿಯಲ್ಲಿ 1.21 ಹೆಕ್ಟೇರ್ ಅಡಿಕೆ ಬೆಳೆಯಲಾಗುತ್ತದೆ. ಇದರೊಂದಿಗೆ ಅಡಿಕೆ ಬೆಳೆಗಾರರು ಸ್ವಾವಲಂಬಿಯಾಗಿ ಉತ್ತಮ ಜೀವನ ನಡೆಸುತ್ತಿದ್ದಾರೆ. ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಮಗಳೂರು, ಹಾಸನ ಸೇರಿದಂತೆ ದಾವಣಗೆರೆ, ತುಮಕೂರು, ಹಾವೇರಿ ಚಿತ್ರದುರ್ಗ ಜಿಲ್ಲೆಯಲ್ಲೂ ಅಡಿಕೆ ಕೃಷಿ ಪ್ರಾರಂಭಿಸಿದ್ದಾರೆ. ಇದರಿಂದ ಅಡಿಕೆ ಬೆಳೆಯುವ ವ್ಯಾಪ್ತಿಯೂ ಹೆಚ್ಚಾಗುತ್ತಿದೆ.
ರಾಜ್ಯ ರೈತ ಸಂಘದ ಅಧ್ಯಕ್ಷ ಹೆಚ್.ಎಸ್.ಬಸವರಾಜಪ್ಪ ಅಭಿಪ್ರಾಯ. (ETV Bharat) ಈ ಸಂದರ್ಭದಲ್ಲಿ ಅಡಿಕೆ ಬೆಳೆಯ ಕುರಿತು ಹೊರಬಂದ ಆಘಾತಕಾರಿ ವರದಿ ಬೆಳೆಗಾರರನ್ನು ಕಂಗಾಲು ಮಾಡಿದೆ. ಹಾಲಿ ಉತ್ತಮ ಗುಣಮಟ್ಟದ ರಾಶಿ ಅಡಿಕೆಗೆ ಮಾರುಕಟ್ಟೆಯಲ್ಲಿ 49.898 ಸಾವಿರ ರೂ ಇದೆ. ಅಡಿಕೆಯಲ್ಲಿ ಹಾನಿಕಾರಕ ಅಂಶವಿದೆ ಎಂಬ ವರದಿ ಹಿನ್ನೆಲೆಯಲ್ಲಿ ಯಾವುದೇ ದರ ಕುಸಿತವಾಗಿಲ್ಲ. ಆದರೆ ಮುಂದೆ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತದೆ.
ಅಡಿಕೆಯಲ್ಲಿ ಕ್ಯಾನ್ಸರ್‌ಕಾರಣ ಅಂಶ ವರದಿ ಕುರಿತು ಪ್ರತಿಕ್ರಿಯಿಸಿರುವ ರಾಜ್ಯ ರೈತ ಸಂಘದ ಅಧ್ಯಕ್ಷ ಹೆಚ್.ಎಸ್.ಬಸವರಾಜಪ್ಪ, "ವಿಶ್ವ ಆರೋಗ್ಯ ಸಂಸ್ಥೆಯ ಸಹಸಂಸ್ಥೆಯಾದ ಇಂಟರ್ ನ್ಯಾಶನಲ್ ಏಜೆನ್ಸಿ ಫಾರ್ ರಿಸರ್ಚ್ ಆ್ಯಂಡ್ ಕ್ಯಾನ್ಸರ್ ಸಂಸ್ಥೆಯು ಅಡಿಕೆ ಬಗ್ಗೆ ಸಂಶೋಧನೆ ಮಾಡಿ, ಅಡಿಕೆ ಕ್ಯಾನ್ಸರ್ ಕಾರಕ. ಇದರಿಂದ ಬಹಳಷ್ಟು ಜನರಿಗೆ ಕ್ಯಾನ್ಸರ್ ಬರುತ್ತದೆ. ಹಾಗಾಗಿ ಬೆಳೆ ನಿಷೇಧಿಸಬೇಕು ಎಂಬ ವರದಿ ನೀಡಿದೆ. ಇದರಿಂದಾಗಿ ರೈತರು ಬಹಳ ಆತಂಕದಲ್ಲಿದ್ದಾರೆ. ಅಡಿಕೆ ಕ್ಯಾನ್ಸರ್‌ಕಾರಕ ಅಲ್ಲ. ಈ ಹಿಂದೆ ಒಂದು ಸಂಸ್ಥೆಯು ಸುಪ್ರಿಂ ಕೋರ್ಟ್ಗೆ ಅಡಿಕೆ ಕ್ಯಾನ್ಸರ್ ಕಾರಕ ಎಂಬ ವರದಿ ನೀಡಿತ್ತು. ಆಗ ಕರ್ನಾಟಕ ಸರ್ಕಾರವು ವಿವಿಧ ಸಂಶೋಧನ ಸಂಸ್ಥೆಯ ಮೂಲಕ ತನಿಖೆ ನಡೆಸಿ, ಅಡಿಕೆ ಕ್ಯಾನ್ಸರ್‌ಕಾರಕ ಅಲ್ಲ ಎಂಬ ವರದಿ ನೀಡಿತ್ತು" ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
"ವೀಳ್ಯದೆಲೆ ಅಡಿಕೆ ಹಾನಿಕಾರಕವಲ್ಲ. ಇದಕ್ಕೆ ನಮ್ಮಲ್ಲಿ ವಿಶೇಷ ಸ್ಥಾನವಿದೆ. ಅಡಿಕೆಯಿಂದ, ಎಲೆಯಿಂದ ಯಾವುದೇ ಖಾಯಿಲೆ ಬರಲ್ಲ. ಇಂತಹ ವರದಿಯನ್ನು ಬಿಡುಗಡೆ ಮಾಡಬಾರದು ಮತ್ತು ಕೇಂದ್ರ ಸರ್ಕಾರ ಅಡಿಕೆ ಬೆಳೆಗಾರರ ಆತಂಕವನ್ನು ದೂರ ಮಾಡಬೇಕು" ಎಂದು ರೈತ ಹಿಟ್ಟೂರು ರಾಜು ಒತ್ತಾಯಿಸಿದರು.
ಅಡಿಕೆಗೆ ಇರುವ ಸವಾಲುಗಳು:ಮಳೆ ರೈತರ ಜೊತೆ ಆಡುವ ಜೂಜಾಟ ಎಂಬಂತೆ ಪ್ರತೀ ವರ್ಷ ಹವಾಮಾನ ಒಂದೇ ರೀತಿ ಇರುವುದಿಲ್ಲ. ವಿಪರೀತ ಮಳೆಯಾದಾಗ ನೆಲದಲ್ಲಿ ಹೆಚ್ಚಿನ ನೀರಿನ ಅಂಶವಿರುವ ಕಾರಣ ಅಡಿಕೆ ಫಸಲು ಕಡಿಮೆಯಾಗುತ್ತದೆ. ಅದೇ ಮಳೆ ಕಡಿಮೆಯಾದಾಗ ಅಡಿಕೆ ಬೆಳೆಯುವ ಮೊದಲೇ ಉದುರಿ ಹೋಗುತ್ತದೆ. ಇದಲ್ಲದೇ ಕೇಂದ್ರ ಸರ್ಕಾರಗಳು ವಿದೇಶಿ ವ್ಯಾಪಾರ ಒಪ್ಪಂದದಂತೆ ಬೇರೆ ರಾಷ್ಟ್ರಗಳಿಂದ ಅಡಿಕೆ ಆಮದು ಮಾಡಿಕೊಂಡಾಗ ದೇಶಿ ದರ ಕಡಿಮೆ ಆಗುತ್ತದೆ. ಕೊಳೆ ರೋಗ ಹಾಗೂ ಎಲೆಚುಕ್ಕಿ ರೋಗ ಅಡಿಕೆ ಇಳುವರಿಯನ್ನು ತಗ್ಗಿಸುತ್ತದೆ.
ಇದನ್ನೂ ಓದಿ:ಭತ್ತದ ಬೆಲೆಯಲ್ಲಿ ಹಾವು ಏಣಿ ಆಟ; ಕಂಗಾಲಾದ ಅನ್ನದಾತ, ಇ-ಟೆಂಡರ್ ಮೂಲಕ ಖರೀದಿಗೆ ಒತ್ತಾಯ