ಬೆಂಗಳೂರು:ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೋವಿಡ್ ವೇಳೆ ಉಪಕರಣ ಖರೀದಿ ಅಕ್ರಮ ಕುರಿತಂತೆ ನ್ಯಾ.ಮೈಕೆಲ್ ಡಿ.ಕುನ್ಹಾ ವಿಚಾರಣಾ ಆಯೋಗದ ಮಧ್ಯಂತರ ವರದಿ ಆಧರಿಸಿ ಕ್ರಮ ಜರುಗಿಸುವ ಕುರಿತು ರಾಜ್ಯ ಸಚಿವ ಸಂಪುಟ ಸಭೆ ಇಂದು ಮಹತ್ವದ ತೀರ್ಮಾನ ಕೈಗೊಂಡಿದೆ.
ಕೋವಿಡ್ ಹಗರಣ ಸಂಬಂಧ ತನಿಖೆಗಾಗಿ ಕ್ಯಾಬಿನೆಟ್ ಸಬ್ ಕಮಿಟಿ ಜೊತೆಗೆ ವಿಶೇಷ ತನಿಖಾ ದಳ (ಎಸ್ಐಟಿ) ರಚನೆಗೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ ಎಂದು ಸಂಪುಟ ಸಭೆ ನಂತರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ.ಪಾಟೀಲ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಸುಮಾರು 16 ವಿಷಯಗಳ ಕುರಿತು ಚರ್ಚೆಯಾಗಿದ್ದು, ಕೋವಿಡ್-19 ವೈದ್ಯಕೀಯ ಉಪಕರಣಗಳ ಖರೀದಿಗೆ ಸಂಬಂಧಿಸಿದಂತೆ ನೇಮಿಸಲಾದ ನ್ಯಾ.ಮೈಕಲ್ ಡಿ ಕುನ್ಹಾ ಅವರ ವಿಚಾರಣಾ ಆಯೋಗವು 2024, ಆಗಸ್ಟ್ 31 ರಂದು ಸಲ್ಲಿಸಿರುವ ಭಾಗಶ: ವರದಿಯ ಮೇಲೆ ಕೈಗೊಳ್ಳಬೇಕಾಗುವ ಕ್ರಮಗಳ ಕುರಿತು ಚರ್ಚೆ ನಡೆದಿದೆ. ಅದರ ಮೇಲೆ ಕೆಲವು ನಿರ್ಣಯ ಕೈಗೊಂಡಿದ್ದೇವೆ. ಆಯೋಗ 11 ಸಂಪುಟಗಳಲ್ಲಿ ವರದಿ ನೀಡಿದೆ. 7,223.64 ಕೋಟಿ ರೂ. ಮೊತ್ತದ ಅವ್ಯವಹಾರದ ತನಿಖೆ ನಡೆದಿದೆ. 500 ಕೋಟಿ ರೂ. ವಸೂಲಾತಿಗೆ ಆಯೋಗ ಶಿಫಾರಸು ಮಾಡಿದೆ. ಬಿಬಿಎಂಪಿ ನಾಲ್ಕು ವಲಯಗಳ ಹಾಗೂ 31 ಜಿಲ್ಲೆಗಳ ವರದಿ ಸಂಗ್ರಹ ಬಾಕಿ ಇದೆ. 55 ಸಾವಿರ ಕಡತಗಳನ್ನು ಸಂಬಂಧಪಟ್ಟ ಇಲಾಖೆಯಿಂದ ಪಡೆದು ಪರಿಶೀಲಿಸಿ ವರದಿ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಇದರಲ್ಲಿ ಕ್ರಿಮಿನಲ್ ಕಂಟೆಂಟ್ ಇರುವುದರಿಂದ ಎಸ್ಐಟಿ ರಚನೆಗೆ ತೀರ್ಮಾನ ಮಾಡಲಾಗಿದೆ. ಇದರ ಜೊತೆಗೆ ಕ್ಯಾಬಿನೆಟ್ ಸಬ್ ಕಮಿಟಿ ಸಹ ರಚನೆ ಮಾಡಲು ನಿರ್ಧರಿಸಿದ್ದೇವೆ. 500 ಕೋಟಿ ರೂ. ವಸೂಲಾತಿಗೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಹೇಳಿದರು.