ಕರ್ನಾಟಕ

karnataka

ETV Bharat / state

ಗಣಿಗಾರಿಕೆ ಅಕ್ರಮಗಳ ತನಿಖೆ: SIT ಕಾರ್ಯಾವಧಿ ಒಂದು ವರ್ಷ ವಿಸ್ತರಿಸಲು ಸಂಪುಟ ಅಸ್ತು - CABINET MEETING

ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ಸಚಿವ ಸಂಪುಟ ಸಭೆ ನಡೆಯಿತು. ಗಣಿಗಾರಿಕೆ ಅಕ್ರಮ ಪ್ರಕರಣದಲ್ಲಿ ಎಸ್​ಐಟಿ ಕಾರ್ಯಾವಧಿಯನ್ನು ಒಂದು ವರ್ಷ ವಿಸ್ತರಿಸಲು ಸಂಪುಟ ಅನುಮೋದನೆ ನೀಡಿದೆ.

ಸಚಿವ ಹೆಚ್.ಕೆ.ಪಾಟೀಲ್
ಸಚಿವ ಹೆಚ್.ಕೆ.ಪಾಟೀಲ್ (ETV Bharat)

By ETV Bharat Karnataka Team

Published : Oct 10, 2024, 6:40 PM IST

ಬೆಂಗಳೂರು: ಗಣಿಗಾರಿಕೆಯಲ್ಲಿ ನಡೆದ ಅಕ್ರಮಗಳ ತನಿಖೆಗಾಗಿ ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ ಸೃಜನೆಗೊಂಡ ವಿಶೇಷ ತನಿಖಾ ತಂಡದ (ಎಸ್‌ಐಟಿ) ಕಾರ್ಯಾವಧಿಯನ್ನು ಒಂದು ವರ್ಷದ ಅವಧಿಗೆ ವಿಸ್ತರಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ವಿಧಾನಸೌಧದಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆ ನಂತರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ.ಪಾಟೀಲ್ ಅವರು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ಗಣಿಗಾರಿಕೆಯಲ್ಲಿ ನಡೆದ ಅಕ್ರಮಗಳ ತನಿಖೆಗೆ ವಿಶೇಷ ತನಿಖಾ ತಂಡ ರಚನೆ ಮಾಡಲಾಗಿತ್ತು. ಅದರ ಅವಧಿ ಮುಗಿದ ಹಿನ್ನೆಲೆಯಲ್ಲಿ ಕಾರ್ಯಾವಧಿಯನ್ನು ಇನ್ನು ಒಂದು ವರ್ಷಕ್ಕೆ ವಿಸ್ತರಿಸಲು ಸಂಪುಟ ಒಪ್ಪಿಗೆ ನೀಡಿದೆ. 113 ಗಣಿ ಪ್ರಕರಣಗಳು ಬಾಕಿ ಇವೆ. ಎರಡು ಪ್ರಕರಣಗಳು ಹೈಕೋರ್ಟ್​ನಲ್ಲಿವೆ. ಎಂಟು ಅಪರಾಧ ಪ್ರಕರಣಗಳು ದಾಖಲಾಗಿವೆ ಎಂದು ಹೇಳಿದರು.

ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ 60 ಕ್ರಿಮಿನಲ್ ಮೊಕದ್ದಮೆಗಳ ಪೈಕಿ 43 ಪ್ರಕರಗಳನ್ನು ಅಭಿಯೋಜನೆಯಿಂದ ಹಿಂಪಡೆಯಲು ತೀರ್ಮಾನಿಸಲಾಗಿದೆ. ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯವರು ಪ್ರಸ್ತಾಪಿಸಿದ್ದ ಸೋಮೇಶ್ವರ ಶುಗರ್ಸ್ ಬದಲು ಮೆ. ಮೃಣಾಲ್ ಶುಗರ್ಸ್ ಲಿ. ಹೊಸ ಕಾರ್ಖಾನೆಗೆ ಧಾರವಾಡ ತಾಲೂಕಿನ 19 ಗ್ರಾಮಗಳ ಕಬ್ಬು ಮೀಸಲು ಕ್ಷೇತ್ರವನ್ನಾಗಿ ಹಂಚಿಕೆ ಮಾಡಲು ನಿರ್ಣಯಿಸಲಾಗಿದೆ ಎಂದು ತಿಳಿಸಿದರು.

ಸಚಿವ ಸಂಪುಟ ಸಭೆಯ ಇತರ ನಿರ್ಣಯಗಳು:

  • ಐಪಿಎಸ್ ಅಧಿಕಾರಿ ದಿವಂಗತ ಡಾ.ದಿಲೀಪ್ ಆರ್. ಅವರ ಪುತ್ರಿ ಅದಿತಿ ಡಿ. ಅವರಿಗೆ ಕರ್ನಾಟಕ ಸರ್ಕಾರ ಸಚಿವಾಲಯದಲ್ಲಿ ಸಹಾಯಕರ ಹುದ್ದೆಗೆ ಅನುಕಂಪದ ಆಧಾರದ ಮೇಲೆ ನೇಮಕಾತಿ ಮಾಡಲು ಸಂಪುಟ ಒಪ್ಪಿಗೆ.
  • ಬೆಂಗಳೂರಿನ ಓಕಳಿಪುರಂನಲ್ಲಿ ರೇಷ್ಮೆ ಇಲಾಖೆಗೆ ಸೇರಿದ 4.25 ಎಕರೆ ಜಮೀನಿನಲ್ಲಿ ಕರ್ನಾಟಕ ರಾಜ್ಯ ಖನಿಜ ನಿಗಮ ನಿಯಮಿತ (KSMCL)ದಿಂದ ಸಂಪೂರ್ಣ ಬಂಡವಾಳ ಹೂಡಿಕೆಯೊಂದಿಗೆ 527.50 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ "ರೇಷ್ಮೆ ಭವನ" ನಿರ್ಮಾಣ ಮಾಡಲು ಆಡಳಿತಾತ್ಮಕ ಅನುಮೋದನೆ.
  • ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದಲ್ಲಿ ಹೈಟೆಕ್ ರೇಷ್ಮೆಗೂಡಿನ ಮಾರುಕಟ್ಟೆಯನ್ನು 200 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ನಿರ್ಮಾಣ ಮಾಡಲು ಆಡಳಿತಾತ್ಮಕ ಅನುಮೋದನೆ.
  • ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮವನ್ನು ಕಂಪನಿಗಳ ಕಾಯ್ದೆ, 2013 ರನ್ವಯ ರಚಿಸುವ ಅನುಮೋದನೆ.
  • ಪರಿಫೆರಲ್ ರಿಂಗ್ ರಸ್ತೆ (ಬೆಂಗಳೂರು ಬ್ಯುಸಿನೆಸ್ ಕಾರಿಡಾರ್) ಯೋಜನೆಯನ್ನು ಅನುಷ್ಠಾನಗೊಳಿಸುವ ಕುರಿತು ಹೊರಡಿಸಿದ್ದ 2024 ರ ಸೆ.12 ರ ಸರ್ಕಾರಿ ಆದೇಶವನ್ನು ಭಾಗಶಃ ತಿದ್ದುಪಡಿ ಮಾಡಿ ಹೊರಡಿಸಿರುವ 2024, ಸೆ.21 ರ ಆದೇಶಕ್ಕೆ ಘಟನೋತ್ತರ ಅನುಮೋದನೆ.
  • 2024-25ನೇ ಸಾಲಿನಲ್ಲಿ ICDS ಯೋಜನೆಯಡಿ ಅಂಗನವಾಡಿ ಕಾರ್ಯಕರ್ತೆಯರು ಮತು ಸಹಾಯಕಿಯರಿಗೆ 13.75 ಕೋಟಿ ರೂ. ಗಳ ಮೊತ್ತದಲ್ಲಿ ಸಮವಸ್ತ್ರ ವಿತರಿಸಲು ಅನುಮೋದನೆ.

ಇದನ್ನೂ ಓದಿ: ಕೋವಿಡ್ ಹಗರಣ ತನಿಖೆ: ಎಸ್​ಐಟಿ, ಕ್ಯಾಬಿನೆಟ್ ಸಬ್ ಕಮಿಟಿ ರಚನೆಗೆ ಸಂಪುಟ ಅಸ್ತು

ABOUT THE AUTHOR

...view details