ಕಲಬುರಗಿ:ಕಲ್ಯಾಣ ಕರ್ನಾಟಕ ಭಾಗವಾದ ಕಲಬುರಗಿಯಲ್ಲಿ ಇಂದು ಸಚಿವ ಸಂಪುಟ ಸಭೆ ನಡೆಸಲಾಗುತ್ತಿದ್ದು, ಈ ಭಾಗದ ಅಭಿವೃದ್ಧಿಗಾಗಿ ಪೂರಕ ಚರ್ಚೆ ಹಾಗೂ ತೀರ್ಮಾನಗಳನ್ನು ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗಾಗಿ ಆಯವ್ಯಯದಲ್ಲಿ ರೂಪಿಸಲಾಗಿರುವ ಯೋಜನೆಗಳು ಹಾಗೂ ಇನ್ನಿತರ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲಾಗುವುದು. ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿನ ಜನರಿಗೆ ಉದ್ಯೋಗಾವಕಾಶಗಳ ಬಗ್ಗೆ ಹಾಗೂ ಪ್ರತ್ಯೇಕ ಸಚಿವಾಲಯ ರಚನೆ ಬಗ್ಗೆಯೂ ಚರ್ಚಿಸಲಾಗುವುದು. ಕಾಂಗ್ರೆಸ್ ಸರ್ಕಾರ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಯ ಪರವಾಗಿದೆ ಎಂದರು.
371ಜೆ ಜಾರಿಗೆ ತಂದಿದ್ದು ಕಾಂಗ್ರೆಸ್ ಸರ್ಕಾರ:ಮನಮೋಹನ್ ಸಿಂಗ್ ನೇತೃತ್ವದ ಕೇಂದ್ರ ಸರ್ಕಾರದ ಅವಧಿಯಲ್ಲಿ 371 ಜೆ ಕಾನೂನು ತರಲಾಗಿದ್ದು, ಇದಕ್ಕಾಗಿ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಮಾಜಿ ಮುಖ್ಯಮಂತ್ರಿ ಧರಂಸಿಂಗ್ ಅವರು ಶ್ರಮವಹಿಸಿದ್ದರು. 2013ರಲ್ಲಿ ಈ ಕಾನೂನನ್ನು ಕರ್ನಾಟಕದಲ್ಲಿ ಜಾರಿಗೆ ತರಲು ಕಾಂಗ್ರೆಸ್ ಸರ್ಕಾರ ಪ್ರಯತ್ನಿಸಿತೇ ಹೊರತು ಬಿಜೆಪಿಯವರಲ್ಲ. ವಾಜಪೇಯಿ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಈ ಕಾನೂನನ್ನು ಜಾರಿಗೆ ತರಲು ತಿರಸ್ಕರಿಸಿದ್ದರು ಎಂದು ಹೇಳಿದರು.