ಬೆಂಗಳೂರು:ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸಲ್ಲಿಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2015ರ ದತ್ತಾಂಶಗಳ ಅಧ್ಯಯನ ವರದಿಯ ಮುಚ್ಚಿದ ಲಕೋಟೆಯನ್ನು ತೆರೆಯುವ ತೀರ್ಮಾನವನ್ನು ಮುಂದೂಡಲಾಗಿದೆ. ರಾಜಕೀಯ ಕಾರಣಕ್ಕೆ ಇದನ್ನು ಮುಂದೂಡುಲಾಗುತ್ತಿಲ್ಲ. ಈ ಸಂಬಂಧ ಯಾವುದೇ ದತ್ತಾಂಶ, ವರದಿಯನ್ನು ಬಿಡುಗಡೆ ಮಾಡಿಲ್ಲ. ಮುಂದಿನ ಸಂಪುಟ ಸಭೆಯಲ್ಲಿ ಇದನ್ನು ತೆಗೆದುಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
'ಬ್ರಾಂಡ್ ಬೆಂಗಳೂರು' ನಡಿ ಆಸ್ಪತ್ರೆ ಮೇಲ್ದರ್ಜೆಗೆ:ಬ್ರಾಂಡ್ ಬೆಂಗಳೂರು' ಯೋಜನೆಯಡಿಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆರೋಗ್ಯ ಇಲಾಖೆಯ ಆಸ್ಪತ್ರೆಗಳನ್ನು ರೂ. 413.71 ಕೋಟಿಗಳ ಅಂದಾಜು ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲು ಅನುಮೋದನೆ ನೀಡಲಾಗಿದೆ. ಬೆಂಗಳೂರು ಮಹಾನಗರ ಪಾಲಿಕೆಯ ಈಗಿರುವ 13 ಹೆರಿಗೆ ಆಸ್ಪತ್ರೆಗಳನ್ನು 30 ಬೆಡ್‌ಗಳ ಮತ್ತು 5 ಆಸ್ಪತ್ರೆಗಳನ್ನು 50 ಬೆಡ್‌ಗಳ ಆಸ್ಪತ್ರೆಗಳನ್ನಾಗಿ ಮೇಲ್ದರ್ಜೆಗೇರಿಸುವುದು. ಹಳೆ ಕಟ್ಟಡಗಳನ್ನು ಕೆಡವಿ 3 ಆಸ್ಪತ್ರೆಗಳಿಗೆ ಹೊಸ ಕಟ್ಟಡ ನಿರ್ಮಾಣ. ಅಸ್ತಿತ್ವದಲ್ಲಿರುವ 852 ಬೆಡ್ ಗಳ ಸಾಮರ್ಥ್ಯವನ್ನು 1122 ಬೆಡ್ ಗಳಿಗೆ ಹೆಚ್ಚಿಸುವುದು. ಹೊಸ 26 ದಂತ ಚಿಕಿತ್ಸಾಲಯಗಳನ್ನು ಸ್ಥಾಪಿಸುವುದು. 7 ಫಿಜಿಯೋಥೆರಪಿ ಸೆಂಟರ್‌ಗಳನ್ನು ಸ್ಥಾಪಿಸುವ ಮೂಲಕ ಸುಸಜ್ಜಿತ ವೈದ್ಯಕೀಯ ಉಪಕರಣಗಳನ್ನೊಳಗೊಂಡು ಉನ್ನತೀಕರಿಸುವುದರಿಂದ ಬ್ರಾಂಡ್ ಬೆಂಗಳೂರು ಯೋಜನೆಯಡಿ ಬೆಂಗಳೂರಿನ ನಾಗರೀಕರಿಗೆ ಹೆಚ್ಚುವರಿ ಉಪಯುಕ್ತ ಆರೋಗ್ಯ ಸೇವೆಗಳನ್ನು ಪರಣಾಮಕಾರಿಯಾಗಿ ಒದಗಿಸಲು ಉದ್ದೇಶಿಸಲಾಗಿದೆ.
ಅಂಗ ಕಸಿಗೆ ಹೃದಯ ಮತ್ತು ಶ್ವಾಸಕೋಶ ಮತ್ತು ಮೂಳೆ ಮಜ್ಜಿಯ ಕಸಿ ಸೇರ್ಪಡೆ:ಆದ್ಯತಾ ಮನೆ ಕಾರ್ಡ್ ಹೊಂದಿರುವವರಿಗೆ ಅಸ್ತಿತ್ವದಲ್ಲಿರುವ “ಅಂಗಾಗ ಕಸಿ (ಜೀವಸಾರ್ಥಕಥೆ) ಯೋಜನೆಯಲ್ಲಿ ಹೃದಯ ಮತ್ತು ಶ್ವಾಸಕೋಶ ಮತ್ತು ಮೂಳೆ ಮಜ್ಜಿಯ ಕಸಿ (BMT) ಯನ್ನು ಸೇರಿಸಿ ಅಸ್ತಿತ್ವದಲ್ಲಿರುವ "ಅಂಗಾಗ ಕಸಿ ಯೋಜನೆಯ ವಿಸ್ತರಣೆ ಮಾಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಹೃದಯ ಮತ್ತು ಶ್ವಾಸಕೋಶ ಕಸಿ ವಿಧಾನವನ್ನು ಪ್ರಾಥಮಿಕವಾಗಿ ಕೊನೇ ಹಂತದ ಹೃದಯ ಮತ್ತು ಶ್ವಾಸಕೋಶದ ತೊಂದರೆ ಇರುವ ರೋಗಿಗಳಿಗೆ ಹಾಗೂ ಶ್ವಾಸಕೋಶ ಮತ್ತು ಹೃದಯ ಮತ್ತು ಶ್ವಾಸಕೋಶ ಕಸಿ ರೋಗಿಗಳಿಗೆ ಇಮ್ಯುನೋಸಪ್ರೆಶನ್ ಔಷಧ ಕೊಡಲು ಹಾಗೂ ಆಟೋಲೋಗಸ್ ಮೂಳೆ ಮಜ್ಜೆಯ ಕಸಿ ಕೈಗೊಳ್ಳಲು ಪ್ರಸ್ತಾಪಿಸಲಾಗಿದೆ.
ಇದೇ ವೇಳೆ ಕೇಂದ್ರ ಸರ್ಕಾರದ ಅಧಿನಿಯಮ The Transplantation of Human Organs (Amendment) Act, 2011 (Central Act 16 of 2011) ಕರ್ನಾಟಕ ರಾಜ್ಯದಲ್ಲಿ ಅಳವಡಿಸಿಕೊಳ್ಳುವ "ಅಧಿಕೃತ ನಿರ್ಣಯ" ವನ್ನು ವಿಧಾನಮಂಡಲದಲ್ಲಿ ಮಂಡಿಸಲು ಸಚಿವ ಸಂಪುಟ ನಿರ್ಣಯಿಸಿದೆ.
ಪ್ರಸ್ತಾವಿತ ತಿದ್ದುಪಡಿಯಿಂದ ಅಂಗಾಗ ದಾನದಲ್ಲಿ ನಡೆಯುವ ವಾಣಿಜ್ಯಕರಣವನ್ನು ತಡೆಯಬಹುದಾಗಿದೆ. ವೇದ ಅಂಗಗಳ ಕಸಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ. ಇದರಿಂದ ರಾಜ್ಯದಲ್ಲಿ ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸಬಹುದಾಗಿದೆ.
ಸಂಪುಟ ಸಭೆಯ ಇತರ ತೀರ್ಮಾನಗಳು ಇಂತಿವೆ:
- ಮಂಡ್ಯ ಜಿಲ್ಲೆಯ ವಿಶ್ವೇಶ್ವರಯ್ಯ ಕಾಲುವೆ ಫಾರ್ಮ್‌ನಲ್ಲಿ ನೂತನವಾಗಿ ಕೃಷಿ ಮತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವನ್ನು (Integrated University) ಸ್ಥಾಪಿಸಲು ಸಮ್ಮತಿ
- 5ನೇ ರಾಜ್ಯ ಹಣಕಾಸು ಆಯೋಗದ ಅವಧಿಯನ್ನು 31.08.2025ರವರೆಗೆ ವಿಸ್ತರಿಸಲು ತೀರ್ಮಾನ
- ಅಬಕಾರಿ ಇಲಾಖೆಯ ಅಧಿಕಾರಿ/ನೌಕರರ ವರ್ಗಾವಣೆಯನ್ನು ಕೌನ್ಸೆಲಿಂಗ್ ಮೂಲಕ ಮಾಡಲು ನಿಯಮಗಳನ್ನು ರಚಿಸಲು ಸಮ್ಮತಿ.
-2024-25ನೇ ಸಾಲಿನ ರಾಷ್ಟ್ರೀಯ ಆರೋಗ್ಯ ಅಭಿಯಾನ (NHM) RoPಅಡಿ IEC ಚಟುವಟಿಕೆಯಡಿ ಅನುಮೋದನೆಗೊಂಡಿರುವ ರೂ.46.17 ಕೋಟಿಗಳ ಸಮಗ್ರ ಕ್ರಿಯಾ ಯೋಜನೆಯ ಅನುಷ್ಠಾನಕ್ಕೆ ಆಡಳಿತಾತ್ಮಕ ಅನುಮೋದನೆ
-2024-25ನೇ ಸಾಲಿನಲ್ಲಿ 3ನೇ ಹಂತದಲ್ಲಿ ನಾಗರಿಕರಿಗೆ ಉಚಿತ ಕಣ್ಣಿನ ತಪಾಸಣೆ ಹಾಗೂ ಕನ್ನಡಕ ವಿತರಿಸುವ ಆಶಾಕಿರಣ ಯೋಜನೆಯನ್ನು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ರೂ.13.30 ಕೋಟಿಗಳ ಅಂದಾಜು ವೆಚ್ಚದಲ್ಲಿ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ
-ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ಗೆ ಹೊರಗುತ್ತಿಗೆ ಆಧಾರದ ಮೇಲೆ ಆರೋಗ್ಯ ಮಿತ್ರರು ಮತ್ತು ಸಿಬ್ಬಂದಿಗಳನ್ನು ರೂ. 53.18 ಕೋಟಿಗಳ ಅಂದಾಜು ವೆಚ್ಚದಲ್ಲಿ 2 ವರ್ಷಗಳ ಅವಧಿಗೆ ನೇಮಕ ಮಾಡಿಕೊಳ್ಳಲು ಹೊಸದಾಗಿ ಟೆಂಡರ್ ಪ್ರಕ್ರಿಯೆ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ
-ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ ನಿರ್ಮಾಣವಾಗುತ್ತಿರುವ 450 ಹಾಸಿಗೆ ಸಾಮರ್ಥ್ಯದ ನೂತನ ಆಸ್ಪತ್ರೆ ಕಟ್ಟಡದ ಎರಡನೇ ಹಂತದ ಕಾಮಗಾರಿಯ ರೂ.78.10 ಕೋಟಿಗಳ ಅಂದಾಜು ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ.
-ಬೆಂಗಳೂರಿನ ಆನಂದರಾವ್ ವೃತ್ತದ ಎನ್.ಹೆಚ್. ಕಾಂಪೌಂಡ್ ಆವರಣದಲ್ಲಿ ಅವಳಿಗೋಪುರ ಕಟ್ಟಡ ನಿರ್ಮಾಣವನ್ನು ಕೈಗೊಳ್ಳುವ ಆರ್ಥಿಕ ಹೂಡಿಕೆಯ ಮಾದರಿಗೆ ಅನುಮೋದನೆ. ಈ ಸಂಬಂಧ 8.78 ಎಕರೆ ವಿಸ್ತೀರ್ಣದ ನಿವೇಶನವನ್ನು ಲೋಕೋಪಯೋಗಿ ಇಲಾಖೆ ಸ್ವಾಧೀನಕ್ಕೆ ತೆಗೆದುಕೊಳ್ಳಲು ತೀರ್ಮಾನಿಸಲಾಗಿದೆ. ಆರ್ಥಿಕ ಹೂಡಿಕೆಯ ಸ್ಯರೂಪದ ಸಂಬಂಧ ವ್ಯವಹಾರ ಸಲಹೆಗಾರ ನೇಮಕ ಮಾಡಿ ವಿವರ ಸಿದ್ದಪಡಿಸಿದ ಮೇಲೆ ಸಂಪುಟ ಸಭೆಗೆ ತರಲು ಸೂಚನೆ
-ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ರಾಜ್ಯ/ ಜಿಲ್ಲೆ/ ತಾಲ್ಲೂಕು/ ಗ್ರಾಮ ಪಂಚಾಯತಿ/ ಅನುಷ್ಠಾನ ಇಲಾಖೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತಿರುವ ಸಿಬ್ಬಂದಿಗಳಿಗೆ ಸಾಮೂಹಿಕ ವೈದ್ಯಕೀಯ ವಿಮಾ ಸೌಲಭ್ಯವನ್ನು ವಾರ್ಷಿಕ ರೂ. 8.38 ಕೋಟಿಗಳ ಅಂದಾಜು ವೆಚ್ಚದಲ್ಲಿ ಒದಗಿಸಲು ಒಪ್ಪಿಗೆ.
-ರಾಜ್ಯದ 10 ಮಹಾನಗರಪಾಲಿಕೆಗಳಲ್ಲಿ ಹಾಗೂ ಆಯ್ದ 24 ನಗರಸಭೆಗಳಲ್ಲಿ ಒಟ್ಟು 34 ಆಧುನಿಕ ವಿದ್ಯುತ್/ ಅನಿಲ ಚಿತಾಗಾರಗಳನ್ನು ನ್ಯಾಷನಲ್ ಹೌಸಿಂಗ್ ಬ್ಯಾಂಕಿನ ನಗರ ಮೂಲಸೌಕರ್ಯ ಅಭಿವೃದ್ಧಿ ನಿಧಿ (UIDF) ಯೋಜನೆಯಡಿಯಲ್ಲಿ ಒಟ್ಟು ರೂ. 136 ಕೋಟಿಗಳ ಅಂದಾಜು ವೆಚ್ಚದಲ್ಲಿ (ಒಂದು ಚಿತಾಗಾರಕ್ಕೆ ರೂ. 4 ಕೋಟಿಗಳು, ಓ&ಎಂ ವೆಚ್ಚ ಹೊರತುಪಡಿಸಿ) ಅನುಷ್ಠಾನಗೊಳಿಸಲು ಒಪ್ಪಿಗೆ.
-ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ 10 ವಸತಿ ಶಾಲೆಗಳಿಗೆ ಸ್ವಂತ ಕಟ್ಟಡ ನಿರ್ಮಾಣ ಕಾಮಗಾರಿಗಳ ಒಟ್ಟು ರೂ. 211 ಕೋಟಿಗಳ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ.
-ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ರಾಜ್ಯ/ ಜಿಲ್ಲೆ/ ತಾಲ್ಲೂಕು/ ಗ್ರಾಮ ಪಂಚಾಯತಿ/ ಅನುಷ್ಠಾನ ಇಲಾಖೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತಿರುವ ಸಿಬ್ಬಂದಿಗಳಿಗೆ ಸಾಮೂಹಿಕ ವೈದ್ಯಕೀಯ ವಿಮಾ ಸೌಲಭ್ಯವನ್ನು ವಾರ್ಷಿಕ ರೂ. 8.38 ಕೋಟಿಗಳ ಅಂದಾಜು ವೆಚ್ಚದಲ್ಲಿ ಒದಗಿಸಲು ಒಪ್ಪಿಗೆ
- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಪಿಪಿಪಿ ಮಾದರಿಯಲ್ಲಿ ಒದಗಿಸಲಾಗುತ್ತಿರುವ CT Scan ಮತ್ತು MRI Scan ಪಿಹೆಚ್ ಹೆಚ್ ಕಾರ್ಡ್ ಹೊಂದಿರುವವರಿಗೆ ಉಚಿತವಾಗಿ ಒದಗಿಸಲು ಹಾಗೂ ಶೇ.75 ವೆಚ್ಚ ಭರಿಸಿ ನೀಡಲು ಅಸ್ತು
- ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ, ನವನಗರ, ಹುಬ್ಬಳ್ಳಿ ಹಾಗೂ ಕಾನೂನು ಇಲಾಖೆಯ ವ್ಯಾಪ್ತಿಯಲ್ಲಿ ಬರುವ 19 ಖಾಸಗಿ ಅನುದಾನಿತ ಕಾನೂನು ಕಾಲೇಜುಗಳ ಬೋಧಕ ಸಿಬ್ಬಂದಿಗಳಿಗೆ ಯುಜಿಸಿಯ 6ನೇ ವೇತನ ಹಾಗೂ ಪರಿಷ್ಕೃತ 7ನೇ ವೇತನ ಶ್ರೇಣಿಗಳ ಮೂಲ ವೇತನದ ವ್ಯತ್ಯಾಸದ ಹಿಂಬಾಕಿ ಮೊತ್ತವನ್ನು ಪಾವತಿಸಲು ಒಪ್ಪಿಗೆ. ತುಟ್ಟಿ ಭತ್ಯೆ ಹಾಗೂ ಮನೆ ಬಾಡಿಗೆ ಭತ್ಯೆ ಹೊರತು ಪಡಿಸಿ ಉಳಿದ ಹಿಂಬಾಕಿಯನ್ನು ಪಾವತಿಸಲು ತೀರ್ಮಾನ. ಇದಕ್ಕಾಗಿ 2.61 ಕೋಟಿ ವೆಚ್ಚ ತಗುಲಲಿದೆ.
- ಡಿಜಿ-ಕಂದಾಯ ಯೋಜನೆಯಡಿಯಲ್ಲಿ ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿಗಳು / ಕಂದಾಯ ನಿರೀಕ್ಷಕರು / ಕಂದಾಯ ಅಧಿಕಾರಿಗಳಿಗೆ 4000 ಕ್ರೋಮ್ ಬುಕ್ ಅಥವಾ ಲ್ಯಾಪ್ ಟಾಪ್ ಗಳನ್ನು ರೂ. 20 ಕೋಟಿಗಳ ಅಂದಾಜು ವೆಚ್ಚದಲ್ಲಿ ಖರೀದಿಸಲು ಸಮ್ಮತಿ. ಅವರಲ್ಲಿರುವ ಇತರ ಅನುದಾನಬಳಸಿ 6000 ವಿಎಗಳಿಗೆ ಈ ಸೌಲಭ್ಯ ಒದಗಿಸಲು ತೀರ್ಮಾನ.
-ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯ ಆಸ್ಪತ್ರೆಯಲ್ಲಿ 100 ಹಾಸಿಗೆ ಸಾಮರ್ಥ್ಯದ ನ್ಯೂರಾಲಜಿ ಮತ್ತು ನ್ಯೂರೋಸರ್ಜರಿ ವಿಭಾಗದ ಕಟ್ಟಡ ನಿರ್ಮಾಣ ಕಾಮಗಾರಿಗಳ ಒಟ್ಟು ರೂ.33.77 ಕೋಟಿಗಳ ಅಂದಾಜು ಮೊತ್ತಕ್ಕೆ ಸಚಿವ ಸಂಪುಟವು ಆಡಳಿತಾತ್ಮಕ ಅನುಮೋದನೆ ನೀಡಲು ನಿರ್ಧರಿಸಿದೆ.
-ಸಂಜಯಗಾಂಧಿ ಟ್ರಾಮ ಮತ್ತು ಅಸ್ಥಿ ಚಿಕಿತ್ಸಾ ಸಂಸ್ಥೆಯ ಆವರಣದಲ್ಲಿನ ಕ್ರೀಡಾ ಮತ್ತು ರೋಬೋಟಿಕ್ ಶಸ್ತ್ರ ಚಿಕಿತ್ಸಾ ವಿಭಾಗದ ನೂತನ ಕಟ್ಟಡಕ್ಕೆ ಅವಶ್ಯವಿರುವ ವೈದ್ಯಕೀಯ ಉಪಕರಣಗಳು, ಪೀಠೋಪಕರಣಗಳು, ಇತ್ಯಾದಿಗಳನ್ನು ರೂ.14 ಕೋಟಿಗಳ ಅಂದಾಜು ಮೊತ್ತದಲ್ಲಿ ಖರೀದಿಸಲು ಸಚಿವ ಸಂಪುಟ ಅನುಮೋದನೆ
-ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ನೆಫೋ-ಯುರಾಲಜಿ ಸಂಸ್ಥೆಯ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಅನೆಕ್ಸ್ ಕಟ್ಟಡಕ್ಕೆ ಅವಶ್ಯವಿರುವ ವೈದ್ಯಕೀಯ ಉಪಕರಣಗಳು ಮತ್ತು ಪೀಠೋಪಕರಣಗಳನ್ನು ಒಟ್ಟು ರೂ.21.86 ಕೋಟಿಗಳ ಅಂದಾಜು ಮೊತ್ತದಲ್ಲಿ ಖರೀದಿಸಲು ಸಚಿವ ಸಂಪುಟವು ಆಡಳಿತಾತ್ಮಕ ಅನುಮೋದನೆ
-15ನೇ ಹಣಕಾಸು ಆಯೋಗದ ಶಿಫಾರಸಿನಂತೆ ರಾಷ್ಟ್ರೀಯ ಆಪತ್ತು ಉಪಶಮನ ನಿಧಿಯಡಿ 238 ಕೋಟಿ ವೆಚ್ಚದಲ್ಲಿ ಬೆಂಗಳೂರು ನಗರ ನೆರೆ ಅಪಾಯ ನಿರ್ವಹಣೆ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಖರ್ಚು ಮಾಡಲು ತೀರ್ಮಾನ
-ಪಿಎಂ ಆವಾಜ್ ಯೋಜನೆಯಡಿ ಕರ್ನಾಟಕ ಕೊಳೆಗೇರಿ ಮಂಡಳಿ ವತಿಯಿಂದ ನಿರ್ಮಿಸುತ್ತಿದ್ದ 1,08,250 ಮನೆಗಳ ಪೈಕಿ ಆರಂಭಿಸಿದ್ದ 61,894 ಮನೆ ಕಾಮಗಾರಿ ಸ್ಥಗಿತಗೊಳಿಸಲಾಗಿತ್ತು. ಸ್ಥಗಿತಗೊಂಡ ಮನೆಗಳನ್ನು ಪುನಃ ಆರಂಭಿಸಲು 2,643 ಕೋಟಿ ರೂ.ವನ್ನು ಭರಿಸಲು ಸಚಿವ ಸಂಪುಟ ಸಭೆ ತೀರ್ಮಾನ
ಇದನ್ನು ಓದಿ:ಕೆಪಿಸಿಸಿ ಹುದ್ದೆ ಅಂಗಡಿಯಲ್ಲೂ ಸಿಗಲ್ಲ, ಮಾಧ್ಯಮಗಳ ಮುಂದೆ ಮಾತನಾಡಿದರೂ ಸಿಗಲ್ಲ: ಡಿಸಿಎಂ