ರಾಮನಗರ:ಚನ್ನಪಟ್ಟಣ ಉಪ ಚುನಾವಣೆ ಇದೀಗ ರಾಜ್ಯ ರಾಜಕೀಯ ವಲಯದಲ್ಲಿ ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಜೆಡಿಎಸ್ ಪಕ್ಷದ ಚಿಹ್ನೆಯಿಂದ ಸ್ಪರ್ಧಿಸಲು ನಿರಾಕರಿಸಿರುವ ಸಿ. ಪಿ. ಯೋಗೇಶ್ವರ್ ತಮ್ಮ ಬಿಜೆಪಿ ವಿಧಾನ ಪರಿಷತ್ ಸ್ಥಾನಕ್ಕೂ ರಾಜೀನಾಮೆ ನೀಡಿದ್ದು, ಅವರ ಮುಂದಿನ ನಡೆ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಸಿಎಂ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷದ ಸಿದ್ಧಾಂತ ಒಪ್ಪಿ ಯಾರೇ ಬಂದರೂ ಸ್ವಾಗತ ಎಂದು ಪರೋಕ್ಷವಾಗಿ ಸಿ.ಪಿ. ಯೋಗೇಶ್ವರ್ ಅವರಿಗೆ ಪಕ್ಷಕ್ಕೆ ಆಹ್ವಾನ ನೀಡಿದ್ದಾರೆ. ಈ ಬಗ್ಗೆ ಸಿಪಿವೈ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ನಾಳೆಯೇ ಕಾಂಗ್ರೆಸ್ ಅಭ್ಯರ್ಥಿಗಳ ಟಿಕೆಟ್ ಘೋಷಣೆಯಾಗಲಿದ್ದು, ಚನ್ನಪಟ್ಟಣ ಅಭ್ಯರ್ಥಿ ವಿಚಾರದಲ್ಲಿ ಕೈ ಪಾಳೆಯ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದೆ.
ಸಿ.ಪಿ.ಯೋಗೇಶ್ವರ್ (ETV Bharat) ಚನ್ನಪಟ್ಟಣದಲ್ಲಿ ಬೆಂಬಲಿಗರ ಸಭೆ ನಡೆಸಿದ ಸಿಪಿವೈ:ಇಂದು ಚನ್ನಪಟ್ಟಣ ನಗರದಲ್ಲಿ ಸಿ. ಪಿ. ಯೋಗೇಶ್ವರ್ ಮುಂದೇನು ಮಾಡಬೇಕೆಂದು ತಮ್ಮ ಬೆಂಬಲಿಗರ ಜೊತೆ ಸುದೀರ್ಘವಾಗಿ ಚರ್ಚಿಸಿದ್ದಾರೆ.
ಕಾಂಗ್ರೆಸ್ ಸೇರ್ಪಡೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಸಿಪಿವೈ, "ನಾನು ಕಾಂಗ್ರೆಸ್ ಪಕ್ಷದ ಯಾವ ನಾಯಕರನ್ನೂ ಭೇಟಿಯಾಗಿಲ್ಲ. ನನ್ನನ್ನೂ ಯಾರೂ ಸಂಪರ್ಕ ಮಾಡಿಲ್ಲ" ಎಂದರು. ಅಲ್ಲದೆ ಪಕ್ಷಕ್ಕೆ ಯಾರೇ ಬಂದರೂ ಸ್ವಾಗತ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೂ ಇದೇ ಸಂದರ್ಭದಲ್ಲಿ ಪ್ರತಿಕ್ರಿಯಿಸಿ, "ಅದು ಸಿದ್ದರಾಮಯ್ಯ ಅವರ ದೊಡ್ಡಗುಣ. ಮುಖ್ಯಮಂತ್ರಿಗಳು ಹಾಗೆ ಮಾತಾಡಿದ್ದಾರೆ ಅಂದ್ರೆ ಸಂತೋಷವಾಗುತ್ತಿದೆ. ನಾನು ಹಿಂದೆ ಕಾಂಗ್ರೆಸ್ನಲ್ಲೇ ಇದ್ದವನು" ಎಂದು ಹೇಳಿದ್ದಾರೆ.
ಇದನ್ನೂ ಓದಿ:ಸಿ.ಪಿ ಯೋಗೇಶ್ವರ್ ಕಾಂಗ್ರೆಸ್ ಸೇರುವ ಕುರಿತು ಯಾವುದೇ ವಿಚಾರ ಗೊತ್ತಿಲ್ಲ: ಡಿ ಕೆ ಸುರೇಶ್