ಕರ್ನಾಟಕ

karnataka

ETV Bharat / state

ಜೆಡಿಎಸ್​​ನಿಂದ ಉಚ್ಚಾಟನೆ ಪ್ರಶ್ನಿಸಿ ಹೈಕೋರ್ಟ್​​​ಗೆ ಸಿ.ಎಂ. ಇಬ್ರಾಹಿಂ ಅರ್ಜಿ - C M Ibrahim

ಜೆಡಿಎಸ್ ಪಕ್ಷದ ಅಧ್ಯಕ್ಷ ಸ್ಥಾನದಿಂದ ಉಚ್ಚಾಟನೆ ಪ್ರಶ್ನಿಸಿ ಸಿ.ಎಂ.ಇಬ್ರಾಹಿಂ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

high court
ಹೈಕೋರ್ಟ್​, ಸಿ.ಎಂ.ಇಬ್ರಾಹಿಂ (ETV Bharat)

By ETV Bharat Karnataka Team

Published : May 8, 2024, 10:54 PM IST

ಬೆಂಗಳೂರು:ಜೆಡಿಎಸ್ ಪಕ್ಷದ ಅಧ್ಯಕ್ಷ ಸ್ಥಾನದಿಂದ ತಮ್ಮನ್ನು ಉಚ್ಚಾಟನೆ ಮತ್ತು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ನೇಮಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ್ದ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯದ ಆದೇಶ ಪ್ರಶ್ನಿಸಿ ಜೆಡಿಎಸ್ ಉಚ್ಚಾಟಿತ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ವಿಚಾರಣಾ ನ್ಯಾಯಾಲಯದ ಆದೇಶ ರದ್ದುಪಡಿಸುವಂತೆ ಕೋರಿ ಸಿ.ಎಂ. ಇಬ್ರಾಹಿಂ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೇ, ಜೆಡಿಎಸ್‌ ರಾಜ್ಯ ಕಾರ್ಯಕಾರಿ ಸಮಿತಿ ಮತ್ತು ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸುವುದಕ್ಕೆ ಮಧ್ಯಂತರ ತಡೆ ನೀಡಬೇಕು ಎಂದು ಕೋರಿದ್ದಾರೆ. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರ ರಜಾಕಾಲೀನ ಏಕಸದಸ್ಯ ಪೀಠ, ವಿಚಾರಣೆಯನ್ನು ಮೇ 9ಕ್ಕೆ ಮುಂದೂಡಿದೆ.

ಅರ್ಜಿ ವಿಚಾರಣೆಗೆ ಬಂದಾಗ ಇಬ್ರಾಹಿಂ ಪರ ವಕೀಲರು, ''ಜೆಡಿಎಸ್‌ ರಾಜ್ಯ ಕಾರ್ಯಕಾರಿ ಸಮಿತಿ ಮತ್ತು ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸುವುದಕ್ಕೆ ತಡೆ ನೀಡಿ ಮಧ್ಯಂತರ ಆದೇಶ ಮಾಡಬೇಕು'' ಎಂದು ಕೋರಿದರು. ವಿಚಾರಣೆಗೆ ಹಾಜರಿದ್ದ ಜೆಡಿಎಸ್‌ ಪಕ್ಷದ ಪರ ವಕೀಲರು, ''ಪಕ್ಷದಿಂದ ಅಗತ್ಯ ಸಲಹೆ/ಸೂಚನೆಗಳನ್ನು ಪಡೆದು ನ್ಯಾಯಾಲಯಕ್ಕೆ ತಿಳಿಸಲು ಸ್ವಲ್ಪ ಕಾಲಾವಕಾಶ ನೀಡಬೇಕು'' ಎಂದು ಕೋರಿದರು.

ಪ್ರಕರಣ ಹಿನ್ನೆಲೆ:ವಿಧಾನಸಭೆ ಚುನಾವಣೆಗೂ ಮುನ್ನ ಸಿ.ಎಂ. ಇಬ್ರಾಹಿಂ ಅವರನ್ನು 2022 ರ ಆಗಸ್ಟ್​​ 3 ರಂದು ಜೆಡಿಎಸ್ ಅಧ್ಯಕ್ಷರಾಗಿ ರಾಜ್ಯ ಕಾರ್ಯಕಾರಿಣಿಯಲ್ಲಿ ಘೋಷಿಸಲಾಗಿತ್ತು. ಹೆಚ್.ಡಿ. ದೇವೇಗೌಡ ಮತ್ತು ಹೆಚ್.ಡಿ. ಕುಮಾರಸ್ವಾಮಿ ಅವರು 2024 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದರು. ನಂತರ ಸಕಾರಣವಿಲ್ಲದೇ ತಮ್ಮನ್ನು 2023 ರ ನವೆಂಬರ್​​ 16 ರಂದು ಪಕ್ಷ ಹಾಗೂ ಅಧ್ಯಕ್ಷ ಹುದ್ದೆಯಿಂದ ಉಚ್ಚಾಟನೆ ಮಾಡಲಾಗಿದೆ. ಇದು ಜೆಡಿಎಸ್ ಸಂವಿಧಾನಕ್ಕೆ ವಿರುದ್ಧವಾಗಿದೆ. ಉಚ್ಚಾಟನೆಗೂ ಮುನ್ನ ತಮ್ಮ ಅಹವಾಲು ಆಲಿಸಿಲ್ಲ. ಆದ್ದರಿಂದ ಉಚ್ಚಾಟನೆ ಆದೇಶ ರದ್ದುಪಡಿಸಬೇಕು. ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸದಂತೆ ನಿರ್ಬಂಧಿಸಬೇಕು ಎಂದು ಕೋರಿ ಸಿಟಿ ಸಿವಿಲ್‌ ಕೋರ್ಟ್​ಗೆ ಇಬ್ರಾಹಿಂ ಅರ್ಜಿ ಸಲ್ಲಿಸಿದ್ದರು.

ನಗರದ 26 ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯವು 2024 ರ ಮಾರ್ಚ್​ 23 ರಂದು ಈ ಅರ್ಜಿ ವಜಾಗೊಳಿಸಿ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಸಿ.ಎಂ. ಇಬ್ರಾಹಿಂ ಹೈಕೋರ್ಟ್‌ ಮೊರೆ ಹೋಗಿದ್ದಾರೆ.

ಇದನ್ನೂ ಓದಿ:ಬಿಜೆಪಿ ಪರ ಪ್ರಚಾರ ಆರೋಪ: ಹುದ್ದೆಯಿಂದ ಅಮಾನತು ಮಾಡಿದ್ದ ಆದೇಶಕ್ಕೆ ಹೈಕೋರ್ಟ್ ತಡೆ - allegation of Campaign for BJP

ABOUT THE AUTHOR

...view details