ಬೆಂಗಳೂರು: ಜೆ.ಪಿ.ನಗರದ ಮೂರನೇ ಹಂತದಲ್ಲಿ ಒಂದೇ ಕುಟುಂಬದ ಮೂವರ ಶವ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತರನ್ನು ಸುಕನ್ಯಾ (48), ಮಕ್ಕಳಾದ ನಿಖಿತ್ (28) ಹಾಗೂ ನಿಶ್ಚಿತ್ (28) ಎಂದು ಗುರುತಿಸಲಾಗಿದೆ.
ಪ್ರಕರಣದ ವಿವರ: ಆರ್ಥಿಕ ಸಂಕಷ್ಟ ತಾಳಲಾರದೇ ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆಗೆ ಶರಣಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಉಡುಪಿಯ ಅಂಬಲಪಾಡಿ ಮೂಲದ ಈ ಕುಟುಂಬ ಜೆ.ಪಿ.ನಗರದ ಮೂರನೇ ಹಂತದಲ್ಲಿ ವಾಸವಿತ್ತು. ಮನೆಯಲ್ಲಿ ಸುಕನ್ಯಾ, ಪತಿ ಜಯಾನಂದ, ಅವಳಿ ಮಕ್ಕಳಾದ ನಿಶ್ಚಿತ್ ಹಾಗೂ ನಿಕಿತ್ ವಾಸವಿದ್ದರು.
ಸ್ವಂತ ಉದ್ಯಮ ನಡೆಸುತ್ತಿದ್ದ ಜಯಾನಂದ್ ಅವರಿಗೆ ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಿ ನಷ್ಟವಾಗಿತ್ತು ಎನ್ನಲಾಗಿದೆ. ಆ ನಂತರ ಕುಟುಂಬ ನಿರ್ವಹಣೆಗಾಗಿ ಸಾಕಷ್ಟು ಸಾಲ ಮಾಡಿಕೊಂಡಿದ್ದರಿಂದ, ಸುಕನ್ಯಾ ಮಕ್ಕಳಿಗೆ ಟ್ಯೂಷನ್ ಹೇಳಿಕೊಡುತ್ತಿದ್ದರು. ಮಕ್ಕಳ ಪೈಕಿ ಓರ್ವ ಮಗ ಮನೆಯಿಂದಲೇ ಕೆಲಸ ಮಾಡುತ್ತಿದ್ದು, ನಾಲ್ಕೈದು ತಿಂಗಳ ಹಿಂದೆ ಕೆಲಸ ಬಿಟ್ಟಿದ್ದರು. ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದುದರಿಂದ ಜಯಾನಂದ್ ಸಹ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದರು.