ಹಾವೇರಿ:ಏಕಾಏಕಿ ಮಳೆಯಿಂದಾಗಿ ಹಳ್ಳದ ಮಧ್ಯೆ ಸಿಲುಕಿದ್ದ 25 ಭಕ್ತರ ರಕ್ಷಣೆಯನ್ನು ಮಾಡಲಾಗಿದೆ. ಸವಣೂರು ತಾಲೂಕಿನ ಬರದೂರು ಗ್ರಾಮದ ಹೊರವಲಯದಲ್ಲಿರೋ ರಾಮಲಿಂಗ ಮಠದಲ್ಲಿ ಭಕ್ತರು ಅಪಾಯಕ್ಕೆ ಸಿಲುಕಿಕೊಂಡಿದ್ದರು.
ಹಾವೇರಿ ತಾಲೂಕಿನ ತೋಟದಯಲ್ಲಾಪುರ ಸೇರಿದಂತೆ ಹಾನಗಲ್ ತಾಲ್ಲೂಕಿನ ಅಲ್ಲಾಪುರ ಗ್ರಾಮದ ನಿವಾಸಿಗಳು ಪಂಡರಾಪುರಕ್ಕೆ ತೆರಳುತ್ತಿದ್ದರು. ಭಾನುವಾರ ರಾತ್ರಿ ಬರದೂರು ಗ್ರಾಮದ ಹೊರವಲಯದಲ್ಲಿರುವ ರಾಮಲಿಂಗ ಮಠದಲ್ಲಿ ವಾಸ್ತವ್ಯ ಹೂಡಿದ್ದರು. ಆದರೆ, ರಾತ್ರಿ ಸುರಿದ ಧಾರಾಕಾರ ಮಳೆಗೆ ಬಾಜಿರಾಯನ ಹಳ್ಳ ತನ್ನ ಮಿತಿಗಿಂತ ಅಧಿಕ ಮಟ್ಟದಲ್ಲಿ ಹರಿಯುತ್ತಿದೆ. ಮಠದ ಸುತ್ತಾ ನೀರು ಹರಿದು, ಮಠದಲ್ಲಿರುವ ಭಕ್ತರು ಹೊರಬರಲಾಗದೇ ಸಿಲುಕಿದ್ದರು.
ಹಾವೇರಿ: ಹಳ್ಳದ ನಡುವೆ ಸಿಲುಕಿದ್ದ 25 ಭಕ್ತರ ರಕ್ಷಣೆ (ETV Bharat) ಗ್ರಾಮಸ್ಥರು ಅಗ್ನಿಶಾಮಕ ದಳ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣವೇ ಕಾರ್ಯಾಚರಣೆಗೆ ಇಳಿದ ರಕ್ಷಣಾ ಸಿಬ್ಬಂದಿ ಬೋಟ್ ಮೂಲಕ ಎಲ್ಲಾ 25 ಭಕ್ತರನ್ನು ಮಠದಿಂದ ರಕ್ಷಿಸಿದ್ದಾರೆ.
ಹಾವೇರಿ: ಹಳ್ಳದ ನಡುವೆ ಸಿಲುಕಿದ್ದ 25 ಭಕ್ತರ ರಕ್ಷಣೆ (ETV Bharat) ಸಿಡಿಲಿಗೆ ಹೋರಿ ಬಲಿ:ಜಿಲ್ಲಾದ್ಯಂತ ಭಾನುವವಾರ ರಾತ್ರಿ ಧಾರಾಕಾರ ಮಳೆಯಾಗಿದ್ದು, ಸಿಡಿಲಿಗೆ ಹೋರಿಯೊಂದು ಸಾವನ್ನಪ್ಪಿದೆ. ಹಿರೇಕೆರೂರು ತಾಲೂಕಿನ ಬಸರಿಹಳ್ಳಿ ಗ್ರಾಮದಲ್ಲಿ ಮನೆಗಳಿಗೆ ನೀರು ನುಗ್ಗಿದೆ. ರಸ್ತೆಗಳು ಕೆರೆಗಳಂತಾಗಿದ್ದು, ಜನರು ಆತಂಕದಲ್ಲಿ ರಾತ್ರಿ ಕಳೆದಿದ್ದಾರೆ.
ಧಾರಾಕಾರ ಮಳೆಗೆ ಮನೆಗೆ ನುಗ್ಗಿದ ಮಳೆ ನೀರು, ಸಿಡಿಲಿಗೆ ಹೋರಿ ಬಲಿ (ETV Bharat) ಮಳೆ ಶುರುವಾದಾಗಿನಿಂದ ಮನೆಯೊಳಗಿನಿಂದ ಮಳೆ ನೀರನ್ನು ಹೊರಗೆ ಹಾಕುವುದೇ ಗ್ರಾಮಸ್ಥರಿಗೆ ಕೆಲಸವಾಗಿದೆ. ರಾಣೆಬೆನ್ನೂರು ತಾಲೂಕಿನ ನೂಕಾಪುರದಲ್ಲಿ ಸಿಡಿಲು ಬಡೆದು ಹೋರಿ ಸಾವನ್ನಪ್ಪಿದೆ. ಸುಮಾರು 70 ಸಾವಿರ ರೂಪಾಯಿಗೆ ಬೆಲೆ ಬಾಳುವ ಈ ಹೋರಿ ಹಾಲೇಶ್ ಕುಂಬಾರಿ ಎಂಬ ರೈತನಿಗೆ ಸೇರಿದ್ದು, ಈ ಸಾವಿನಿಂದ ದೊಡ್ಡ ನಷ್ಟವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಪರಿಹಾರ ನೀಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ಮಳೆಯಿಂದ ಕೆಲವೆಡೆ ಜಮೀನಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಮೆಕ್ಕೆಜೋಳ ಬೆಳೆ ಹಾನಿಯಾಗಿದೆ. ರೈತರು ರಾಶಿ ಮಾಡಿದ್ದ ಕಣಕ್ಕೂ ನುಗ್ಗಿದ ನೀರು ಲಕ್ಷಾಂತರ ರೂ. ಬೆಳೆ ಹಾನಿ ಮಾಡಿದೆ. ತೆಂಗು, ಅಡಕೆ, ಮೆಕ್ಕೆಜೋಳ, ಶೇಂಗಾ, ಹತ್ತಿ, ಸೋಯಾಬಿನ್ ಸೇರಿದಂತೆ ವಿವಿಧ ಬೆಳೆಗಳು ನಾಶವಾಗಿವೆ.
ಇದನ್ನೂ ಓದಿ:ಚಿಕ್ಕಮಗಳೂರಿನ ಮುಳ್ಳಯ್ಯನಗಿರಿಯಲ್ಲಿ ಭಾರಿ ಮಳೆ: ರಸ್ತೆ ಮೇಲೆ ಹರಿದ 2 ಅಡಿಗಳಷ್ಟು ನೀರು