ಬೆಂಗಳೂರು: ಇಂದಿನಿಂದ ವಿಧಾನಮಂಡಲ ಜಂಟಿ ಅಧಿವೇಶನ ಆರಂಭವಾಗಿದೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಭಾಷಣ ಮುಗಿಸುತ್ತಿದ್ದಂತೆ ಬಿಜೆಪಿ ಶಾಸಕರು ಜೈ ಶ್ರೀ ರಾಮ್ ಎಂದು, ಕಾಂಗ್ರೆಸ್ ಶಾಸಕರು ಜೈ ಭೀಮ್ ಎಂದು ಘೋಷಣೆ ಕೂಗಿದ ಘಟನೆ ಅಧಿವೇಶನದಲ್ಲಿ ನಡೆದಿದೆ. ಅದಲ್ಲದೆ ಇಂದು ಬಿಜೆಪಿ ಶಾಸಕರು ಕೇಸರಿ ಶಾಲು ಧರಿಸಿ ಕಲಾಪದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಸದನ ಆರಂಭಕ್ಕೂ ಮುನ್ನವೇ ಸದನದ ಒಳಗೆ ಕೇಸರಿ ಶಾಲು ಹಾಕಿಕೊಂಡು ಬಂದ ವಿಧಾನಸಭೆ ಸದಸ್ಯರು ಹಾಗೂ ವಿಧಾನ ಪರಿಷತ್ ಸದಸ್ಯರು ಜೈ ಶ್ರೀ ರಾಮ್ ಘೋಷಣೆ ಕೂಗಿದರು.
ಅಧಿವೇಶನದ ಮೊದಲ ದಿನದವಾದ ಇಂದು ರಾಜ್ಯಪಾಲರು ಸದನವನ್ನು ಉದ್ದೇಶಿಸಿ ಹಿಂದಿಯಲ್ಲಿ ಭಾಷಣ ಮಾಡಿದರು. ಭಾಷಣ ಮುಗಿಸಿ ರಾಜ್ಯಪಾಲರು ಜೈ ಹಿಂದ್, ಜೈ ಕರ್ನಾಟಕ, ಧನ್ಯವಾದ ಎಂದು ಹೇಳುತ್ತಿದ್ದಂತೆ ಬಿಜೆಪಿ ಸದಸ್ಯರು ಜೈ ಶ್ರೀ ರಾಮ್ ಎಂದು ಘೋಷಣೆ ಕೂಗಿದರು. ಅಷ್ಟರಲ್ಲಿ ರಾಷ್ಟ್ರಗೀತೆ ಮೊಳಗಿತು. ರಾಷ್ಟ್ರಗೀತೆ ಮುಗಿಯುತ್ತಿದ್ದಂತೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ವಿಧಾನಸಭೆ ಅಧ್ಯಕ್ಷ ಯು.ಟಿ.ಖಾದರ್, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾನೂನು ಸಚಿವ ಎಚ್. ಕೆ.ಪಾಟೀಲ್ ಅವರು ಸಭೆಯಿಂದ ನಿರ್ಗಮಿಸಿದರು. ರಾಜ್ಯಪಾಲರು ತೆರಳುವವರೆಗೂ ಬಿಜೆಪಿ ಸದಸ್ಯರು ಜೈ ಶ್ರೀರಾಮ್ ಘೋಷಣೆ ಕೂಗುತ್ತಿದ್ದರು. ಇದಕ್ಕೆ ಪ್ರತಿಯಾಗಿ ಸಚಿವರಾದ ಸಂತೋಷ್ ಲಾಡ್, ಬೈರತಿ ಸುರೇಶ್, ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಸೇರಿದಂತೆ ಇತರ ಕಾಂಗ್ರೆಸ್ ಶಾಸಕರು 'ಜೈ ಭೀಮ್, ಜೈ ಸಂವಿಧಾನ' ಎಂದು ಘೋಷಣೆ ಕೂಗಿದರು.
ಮಂಡ್ಯದ ಕೆರಗೋಡಿನಲ್ಲಿ ಹನುಮ ಧ್ವಜ ತೆರವು ವಿಚಾರ ದೊಡ್ಡ ಚರ್ಚೆಗೆ ಗ್ರಾಸವಾಗಿರುವ ಹಿನ್ನೆಲೆಯಲ್ಲಿ ಕೆರಗೋಡಿನಲ್ಲಿ ಹನುಮ ಧ್ವಜವನ್ನು ಮತ್ತೆ ಹಾರಿಸಲು ಬಿಜೆಪಿ ನಾಯಕರು ಪಣತೊಟ್ಟಿದ್ದಾರೆ. ಇದರ ಪ್ರತೀಕವೆಂಬಂತೆ ಬಿಜೆಪಿ ಶಾಸಕರು ಅಧಿವೇಶನಕ್ಕೆ ಕೇಸರಿ ಶಾಲು ಹಾಕಿಕೊಂಡು ಬರುವ ಮೂಲಕ ಸರ್ಕಾರಕ್ಕೆ ಸಾಂಕೇತಿಕವಾಗಿ ಟೀಕಿಸಿದ್ದಾರೆ.