ಬೆಂಗಳೂರು:ಅಲ್ಪಸಂಖ್ಯಾತರು, ಪರಿಶಿಷ್ಟರಿಗೆ ಕೊಂಡುಕೊಳ್ಳುವ ಶಕ್ತಿ ಹೆಚ್ಚಿಸಿ, ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ಕೊಡುವ ಬಜೆಟ್ ಇದಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ಬಜೆಟ್ ಎಲ್ಲರನ್ನೂ ಒಳಗೊಂಡಿರುವ, ಸಾಮಾಜಿಕ ನ್ಯಾಯದ ಆಧಾರದ ಮೇಲೆ ಎಲ್ಲಾ ಜಾತಿ, ಧರ್ಮದವರಿಗೂ ಸೇರುವ ಬಜೆಟ್ ಆಗಿದೆ. ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿದೆ ಎಂದರು.
ಬರಗಾಲ ಇದ್ದರೂ ಅಭಿವೃದ್ಧಿ ಕೆಲಸಗಳಿಗೆ ಹಣ ಕೊಟ್ಟಿದ್ದೇವೆ:ದೇಶದಲ್ಲಿ ಬೆಲೆ ಏರಿಕೆ, ಹಣದುಬ್ಬರ, ನಿರುದ್ಯೋಗ ಸಮಸ್ಯೆಯಿಂದ ಬಡವರು ಜೀವನ ಸಾಗಿಸುವುದು ಕಷ್ಟಕರವಾಗಿದೆ. ಬಡವರ ಕೊಂಡುಕೊಳ್ಳುವ ಶಕ್ತಿ ಹೆಚ್ಚಿಸಲು ಗ್ಯಾರಂಟಿ ಯೋಜನೆಯನ್ನು ಜಾರಿಗೆ ತಂದಿದ್ದೇವೆ. ಜನತೆಗೆ ಕೊಟ್ಟ ಎಲ್ಲಾ ವಾಗ್ದಾನಗಳನ್ನು ಈಡೇರಿಸಿದ್ದೇವೆ. ಕೃಷಿ, ಗ್ರಾಮೀಣಾಭಿವೃದ್ಧಿ, ಬರಗಾಲವನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದು, ಅಭಿವೃದ್ಧಿಗೆ ಹಣ ಒದಗಿಸುವ ಕೆಲಸ ಮಾಡಿದ್ದೇವೆ. 3.71 ಲಕ್ಷ ಕೋಟಿ ರೂ. ಬಜೆಟ್ ಮಂಡಿಸಿದ್ದೇವೆ. ಕಳೆದ ವರ್ಷಕ್ಕೆ ಹೋಲಿಸಿದರೆ 46,636 ಕೋಟಿ ರೂ. ಹೆಚ್ಚಾಗಿದೆ. ಸರ್ಕಾರ ಆರ್ಥಿಕವಾಗಿ ದಿವಾಳಿ ಆಗಿದೆ, ಗ್ಯಾರಂಟಿಗಳನ್ನು ಜಾರಿ ಬಂದ ಮೇಲೆ ದಿವಾಳಿಯಾಗಿದೆ ಅಂತಿದ್ದಾರೆ. ಗ್ಯಾರಂಟಿ ಜೊತೆಗೆ ಅಭಿವೃದ್ಧಿ ಕೆಲಸಗಳಿಗೂ ದುಡ್ಡು ಕೊಟ್ಟಿದ್ದೇವೆ. ಬರಗಾಲ ಇದ್ದರೂ ಅಭಿವೃದ್ಧಿ ಕೆಲಸಗಳಿಗೆ ಹಣ ಕೊಟ್ಟಿದ್ದೇವೆ ಎಂದರು.
ಬಿಜೆಪಿಯವರು ಬಾಯಿಗೆ ಬಂದ ಹಾಗೆ ಮಾತನಾಡುತ್ತಾರೆ. ಬಜೆಟ್ ಮಂಡಿಸುವಾಗ ವಾಕೌಟ್ ಮಾಡಿದ ನಿದರ್ಶನ ಇಲ್ಲ. ಸುನಿಲ್ ಕುಮಾರ್ ಏನಿಲ್ಲ ಏನಿಲ್ಲ ಅಂದರು. ಅವರ ತಲೆಯಲ್ಲಿ ಏನಿಲ್ಲ. ಅವರ ತಲೆ ತುಂಬಾ ರಾಜಕೀಯ ಮಂಜಾಗಿದೆ. ಕಾಮಾಲೆ ರೋಗದವರಿಗೆ ಕಾಣೋದೆಲ್ಲವೂ ಹಳದಿ. ರಾಜಕೀಯ ಮಾಡಲಿ, ಆದರೆ ಟೀಕೆಗಳು ಆರೋಗ್ಯಕರವಾಗಿರಬೇಕು. ಇವರು ಟೀಕೆ ಮಾಡಲು ಟೀಕೆ ಮಾಡುತ್ತಾರೆ. ಏನಿಲ್ಲಾ ಏನಿಲ್ಲಾ ಅಂತ ಶುರು ಮಾಡಿದರು. ಬಳಿಕ ಪ್ಲಕಾರ್ಡ್ ಹಿಡಿದು ಬಂದಿದ್ದಾರೆ. ನಾನು ವಸ್ತುಸ್ಥಿತಿಯನ್ನು ಹೇಳುತ್ತಿರುವುದು ಅವರಿಗೆ ನುಂಗಲಾರದ ತುತ್ತಾಗಿದೆ. ಸತ್ಯ ಹೇಳಿದರೆ ಅವರಿಗೆ ತಡೆದುಕೊಳ್ಳುವುದಕ್ಕೆ ಆಗಲ್ಲ. ಕರ್ನಾಟಕಕ್ಕೆ ಆಗುವ ಅನ್ಯಾಯವನ್ನು ಹೇಳುವುದು ನನ್ನ ಕರ್ತವ್ಯ ಎಂದು ಹೇಳಿದರು.
ಅವರೂ ಕೂಡ ಕೋಲೆ ಬಸವನ ಥರ ತಲೆ ಅಲ್ಲಾಡಿಸದೇ ಕೇಳಬೇಕಾಗಿತ್ತು. ಕೋಲಾರದ ಬಿಜೆಪಿ ಎಂಪಿ ಮುನಿಸ್ವಾಮಿ ಯಾವತ್ತಾದರೂ ಬಾಯಿ ಬಿಟ್ಟಿದ್ದಾರಾ?. ಒಂದು ದಿನವಾದರೂ ಮಾತನಾಡಿದ್ದಾರಾ?. ಅವರು ಎಂಪಿ ಆಗಲು ಲಾಯಕ್ಕಾ, ನಾಲಾಯಕ್ಕಾ ಎಂದು ಪ್ರಶ್ನಿಸಿದರು. 2,90,531 ಕೋಟಿ ರೂ. ರಾಜಸ್ವ ವೆಚ್ಚ ಮತ್ತು 55,877 ಕೋಟಿ ರೂ. ಬಂಡವಾಳ ವೆಚ್ಚ ಅಂದಾಜು ಮಾಡಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ರಾಜಸ್ವ ವೆಚ್ಚದಲ್ಲಿ 16%ರಷ್ಟು ಮತ್ತು ಬಂಡವಾಳ ವೆಚ್ಚದಲ್ಲಿ 3% ಹೆಚ್ಚಳವಾಗಿದೆ. ನಾನು ಗ್ಯಾರಂಟಿಗೆ 36,000 ಕೋಟಿ ರೂ. ಅನುದಾನ ಕೊಟ್ಟಿಲ್ಲ ಅಂತ ಪ್ರೂವ್ ಮಾಡಲಿ. ಅಭಿವೃದ್ಧಿ ಕೆಲಸಗಳಿಗೆ ದುಡ್ಡು ಕೊಟ್ಟಿಲ್ಲ ಅಂದರೆ ಪ್ರೂವ್ ಮಾಡಲಿ. ಬಿಜೆಪಿಯವರು ಕನ್ನಡಿಗರಿಗೆ ದ್ರೋಹ ಮಾಡಿದ್ದಾರೆ ಎಂದು ಕಿಡಿಕಾರಿದರು.