ದೊಡ್ಡಬಳ್ಳಾಪುರ:ತಾಲೂಕಿನ ನಾಗದೇನಹಳ್ಳಿಯಲ್ಲಿರುವ ಗೀತಂ ವಿಶ್ವವಿದ್ಯಾಲಯದ ಆವರಣದಲ್ಲಿ ಬಿ.ಟೆಕ್ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿರುವ ಘಟನೆ ನಡೆದಿದೆ. ಇದು ಆತ್ಮಹತ್ಯೆಯ ಶಂಕೆ ವ್ಯಕ್ತವಾಗಿದೆ. ಆದರೆ, ವಿದ್ಯಾರ್ಥಿ ಸಾವಿನ ಕುರಿತು ಕೆಲ ಅನುಮಾನಗಳು ಸಹ ವ್ಯಕ್ತವಾಗಿದ್ದು, ಈ ಬಗ್ಗೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಮೃತ ವಿದ್ಯಾರ್ಥಿಯನ್ನು ಆಂಧ್ರ ಮೂಲದ ವಿದ್ಯಾರ್ಥಿ ದಾಸರಿ ಬ್ರಹ್ಮಾ ಸಾಯಿರೆಡ್ಡಿ(20) ಎಂದು ಗುರುತಿಸಲಾಗಿದೆ. ಗೀತಂ ಕಾಲೇಜಿನಲ್ಲಿ ಮೊದಲ ವರ್ಷದ ಬಿ.ಟೆಕ್ ಪದವಿ ಓದುತ್ತಿದ್ದ, ಕಳೆದ ರಾತ್ರಿ ಊಟದ ನಂತರ ಹಾಸ್ಟೆಲ್ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ. ಮೃತನ ಸಹೋದರ ನರಸಿಂಹರೆಡ್ಡಿ ಮಾತನಾಡಿ, ದಾಸರಿ ಬ್ರಹ್ಮಾ ಸಾಯಿರೆಡ್ಡಿ ಕಳೆದ ವರ್ಷ ಪ್ರವೇಶ ಪಡೆದಿದ್ದರು. ಕುಟುಂಬ ಮತ್ತು ಓದಿನಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ನಾವು ಕರೆ ಮಾಡಿದಾಗ ಯಾವ ಸಮಸ್ಯೆ ಇಲ್ಲ ಎಂದು ಹೇಳುತ್ತಿಲ್ಲ. ಖಿನ್ನತೆ ಸಮಸ್ಯೆ ಕೂಡ ಇರಲಿಲ್ಲ. ಮೊದಲ ವರ್ಷದ ಎಲ್ಲ ವಿಷಯಗಳಲ್ಲಿ ಪಾಸಾಗಿದ್ದ. ಸಾವಿನ ಬಗ್ಗೆ ಪೊಲೀಸರು ತನಿಖೆ ನಡೆಸಬೇಕು. ವಿವಿಯು ಹೆಚ್ಚಿನ ಭದ್ರತೆ ವ್ಯವಸ್ಥೆ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.