ಪಾಕ್ ಪರ ಘೋಷಣೆ ಕೂಗಿದ್ದು ಅಕ್ಷಮ್ಯ ಅಪರಾಧ: ಬಿ.ಎಸ್.ಯಡಿಯೂರಪ್ಪ ಶಿವಮೊಗ್ಗ: ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪಕ್ಕೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಇದು ಅಕ್ಷಮ್ಯ ಅಪರಾಧ. ಈಗಾಗಲೇ ವಿಧಾನಸಭೆ ಹಾಗು ಪರಿಷತ್‌ನಲ್ಲಿ ಈ ಬಗ್ಗೆ ಚರ್ಚೆ ನಡೆದಿವೆ. ಆರೋಪಿಗಳ ವಿರುದ್ಧ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದರು.
ನಿನ್ನೆ ರಾಜ್ಯಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ ಅಭ್ಯರ್ಥಿ ನಾಸಿರ್ ಹುಸೇನ್ ಅವರ ವಿಜಯೋತ್ಸವದ ವೇಳೆ ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪ ಕೇಳಿಬಂದಿತ್ತು. ಈ ಬೆಳವಣಿಗೆಯನ್ನು ಖಂಡಿಸಿ ಬಿಜೆಪಿ ನಾಯಕರು ದೂರು ನೀಡಿ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದರು.
'ಲೋಕಸಭೆ ಚುನಾವಣೆಯಲ್ಲಿ 25 ಸ್ಥಾನ ಗೆಲ್ಲುತ್ತೇವೆ': ಬಿಜೆಪಿ-ಜೆಡಿಎಸ್ ಮೈತ್ರಿಯಿಂದಾಗಿ ನಾವು ಮುಂಬರುವ ಲೋಕಸಭೆ ಚುನಾವಣೆಯಲ್ಲಿ 28ರಲ್ಲಿ 25 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಇದೇ ವೇಳೆ ಬಿಎಸ್‌ವೈ ತಿಳಿಸಿದರು. ರಾಜ್ಯದಲ್ಲಿ ಮೈತ್ರಿಯಿಂದಾಗಿ ಹೆಚ್ಚು ಸ್ಥಾನಗಳನ್ನು ಗೆದ್ದು ಮತ್ತೆ ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿ ಮಾಡುತ್ತೇವೆ. ಜೆಡಿಎಸ್ ಜೊತೆಗಿನ ಮೈತ್ರಿಯಿಂದಾಗಿ ನಮಗೆ ದೊಡ್ಡ ಶಕ್ತಿ ಬಂದಿದೆ. ಬರುವ ದಿನಗಳಲ್ಲಿ ಜೆಡಿಎಸ್ ಮತ್ತು ಕುಮಾರಸ್ವಾಮಿ ಅವರೊಂದಿಗೆ ಒಟ್ಟಾಗಿ ಒಂದಾಗಿ ಚುನಾವಣೆ ಎದುರಿಸಲು ಸಿದ್ಧತೆ ನಡೆಸುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ:ಪಾಕ್ ಪರ ಘೋಷಣೆ ಕೂಗಿ ಅವಮಾನಿಸಿದ್ದರೆ ಕಠಿಣ ಕ್ರಮ: ಗೃಹ ಸಚಿವ ಪರಮೇಶ್ವರ್