ಹುಬ್ಬಳ್ಳಿ: "ನಾನುಶಿಗ್ಗಾಂವಿ, ಚನ್ನಪಟ್ಟಣ ಪ್ರವಾಸ ಮಾಡಿದ್ದೇನೆ. ಅಲ್ಲೆಲ್ಲಾ ಬಿಜೆಪಿ ಅಲೆಯಿದೆ. ಸಿಎಂಗೆ ಸೋಲಿನ ಭಯವುಂಟಾಗಿ ನಾಲ್ಕೈದು ದಿನ ಸಂಡೂರಿನಲ್ಲೇ ಬೀಡುಬಿಟ್ಟಿದ್ದರು. ಎಷ್ಟೇ ಪ್ರಯತ್ನ ಮಾಡಿದರೂ ಈ ಬಾರಿ ಕಾಂಗ್ರೆಸ್‌ಗೆ ಸೋಲು ಖಚಿತ" ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಹೇಳಿದರು.
ನಗರದ ವಿಮಾನ ನಿಲ್ದಾಣದಲ್ಲಿಂದು ಮಾತನಾಡಿದ ಅವರು, "ಭ್ರಷ್ಟ ಸರ್ಕಾರದ ವಿರುದ್ಧ ಜನರು ಆಕ್ರೋಶಗೊಂಡಿದ್ದಾರೆ. ನಿಶ್ಚಿತವಾಗಿ ಮೂರು ಕ್ಷೇತ್ರಗಳಲ್ಲಿ ನಾವು ದೊಡ್ಡ ಅಂತರದಿಂದ ಗೆಲ್ಲುತ್ತೇವೆ. ಭ್ರಷ್ಟಾಚಾರದಲ್ಲಿ ಸಿಲುಕಿದ ಕಾರಣಕ್ಕೆ ಜನ ಹೇಗೆ ತಿರುಗಿ ಬಿದ್ದಿದ್ದಾರೆ ಎನ್ನುವುದು ಫಲಿತಾಂಶ ಬಂದ ನಂತರ ಸಿಎಂಗೆ ಅರ್ಥವಾಗಲಿದೆ" ಎಂದರು.
ಬಿ.ಎಸ್.ಯಡಿಯೂರಪ್ಪ ಪ್ರತಿಕ್ರಿಯೆ (ETV Bharat) "ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಮೂರು ಕ್ಷೇತ್ರಗಳಲ್ಲಿ ಸೋಲುವುದು ಖಚಿತವಾಗಿದ್ದರಿಂದ, ಕೋವಿಡ್ ಸಂದರ್ಭದಲ್ಲಿ ಬಿಜೆಪಿ ಹಗರಣ ನಡೆಸಿದೆ ಎಂದು ಆರೋಪ ಮಾಡುತ್ತಿದ್ದಾರೆ. ಫಲಿತಾಂಶದ ನಂತರ ಈ ಎಲ್ಲ ಆರೋಪಗಳಿಗೆ ಉತ್ತರ ಸಿಗಲಿದೆ. ಆಗ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವ ಹೇಳಿಕೆ ನೀಡುತ್ತಾರೆ ಎಂದು ನೋಡೋಣ" ಎಂದು ಟಾಂಗ್ ನೀಡಿದರು.
"ಶಿಗ್ಗಾಂವಿಯಲ್ಲಿ ಸಿಎಂ ಮೂರು, ನಾಲ್ಕು ದಿನ ಇದ್ದು ಪ್ರಚಾರ ನಡೆಸಿದರೂ ನಿರೀಕ್ಷಿತ ಜನ ಬೆಂಬಲ ಸಿಕ್ಕಿಲ್ಲ. ಹಣ ಕೊಟ್ಟು ಬನ್ನಿ ಎಂದರೂ ಜನ ಬರಲಿಲ್ಲ. ಇದರಿಂದ ಹತಾಶರಾಗಿ ಏನೇನೋ ಹೇಳಿಕೆ ನೀಡುತ್ತಿದ್ದಾರೆ. ಅಬಕಾರಿ ಇಲಾಖೆಯೊಂದರಲ್ಲಿಯೇ ಎಷ್ಟು ಲೂಟಿ ಆಗಿದೆ ಎಂದು ಗುತ್ತಿಗೆದಾರರೇ ಹೇಳುತ್ತಿದ್ದಾರೆ" ಎಂದು ಟೀಕಿಸಿದರು.
ಇದನ್ನೂ ಓದಿ:ಸಿಎಂ ಸಿದ್ದರಾಮಯ್ಯನವರ ದ್ವೇಷ ರಾಜಕಾರಣಕ್ಕೆ ನಾವು ಬಗ್ಗಲ್ಲ: ಸಚಿವ ಪ್ರಹ್ಲಾದ್ ಜೋಶಿ