ಮೈಸೂರು: ಹಿರಿಯ ಬಿಜೆಪಿ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಆಪ್ತ ಖಾಸಗಿ ಸಹಾಯಕರಾಗಿದ್ದ ಕಾ.ಪು. ಸಿದ್ದಲಿಂಗ ಸ್ವಾಮಿ ಅನಾರೋಗ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ರಾತ್ರಿ ನಿಧನರಾದರು.
56 ವರ್ಷದ ಕಾ.ಪು.ಸಿದ್ದಲಿಂಗಸ್ವಾಮಿ ಅನಾರೋಗ್ಯದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಕಳೆದ ಕೆಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ರಾತ್ರಿ ನಿಧನರಾಗಿದ್ದಾರೆ. ಕೆಲವು ದಿನಗಳ ಹಿಂದೆ ಬಿ.ಎಸ್.ಯಡಿಯೂರಪ್ಪ, ಹಾಗೂ ಮಗ ಬಿ.ವೈ.ವಿಜಯೇಂದ್ರ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು. ನಿನ್ನೆ ನೂತನ ಸಂಸದ ವಿ.ಸೋಮಣ್ಣ ಸಹ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದ್ದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಪ್ತರಾಗಿದ್ದ ಕಾ.ಪು. ಸಿದ್ದಲಿಂಗಸ್ವಾಮಿ 2013ರಲ್ಲಿ ವರುಣಾ ಕ್ಷೇತ್ರದಿಂದ ಕೆಜೆಪಿ ಅಭ್ಯರ್ಥಿಯಾಗಿ ಸಿದ್ದರಾಮಯ್ಯ ವಿರುದ್ಧ ಸ್ಪರ್ಧೆ ಮಾಡಿ ಸೋಲು ಅನುಭವಿಸಿದ್ದರು. ಹಾಗೂ ಕಳೆದ ಬಾರಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ರಾಜ್ಯ ಬಿಜೆಪಿ ರೈತ ಮೊರ್ಚಾದ ಪಕ್ಷ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು.
ಮೃತ ಕಾ.ಪು. ಸಿದ್ದಲಿಂಗಸ್ವಾಮಿ ಅವಿವಾಹಿತರಾಗಿದ್ದು ಇವರ ನಿಧನಕ್ಕೆ ತಂದೆ, ಸೋದರ, ಸೋದರಿಯರು, ಕಂಬನಿ ಮಿಡಿದ್ದಿದ್ದಾರೆ. ಮೃತ ಕಾ.ಪು. ಸಿದ್ದಲಿಂಗಸ್ವಾಮಿ ಅವರ ಅಂತಿಮ ದರ್ಶನಕ್ಕೆ ಇಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆವರಗೆ ಮೈಸೂರಿನ ಅವರ ನಿವಾಸದಲ್ಲಿ ಇಡಲಾಗಿದೆ. ಸಂಜೆ 4 ಗಂಟೆಗೆ ಸ್ವಗ್ರಾಮ ನಂಜನಗೂಡು ತಾಲೂಕಿನ ಗ್ರಾಮಕ್ಕೆ ಮೃತ ದೇಹವನ್ನು ತೆಗೆದುಕೊಂಡು ಹೋಗಿ ಅಂತಿಮ ವಿಧಿ-ವಿಧಾನಗಳನ್ನು ನೇರವೇರಿಸಲಾಗುತ್ತದೆ ಎಂದು ಕುಟುಂಬದ ಮೂಲಗಳು ಖಚಿತಪಡಿಸಿವೆ.
ಇದನ್ನೂ ಓದಿ:ಬಿಜೆಪಿಯಿಂದ ರಾಜಭವನ ಚಲೋ: ಸಚಿವ ನಾಗೇಂದ್ರ ವಜಾಗೊಳಿಸುವಂತೆ ರಾಜ್ಯಪಾಲರಿಗೆ ದೂರು - BJP Urges Minister Nagendra Resignation