ಕರ್ನಾಟಕ

karnataka

ETV Bharat / state

ಘಾಟಿ ದೇವಾಲಯದಲ್ಲಿ ವಿಜೃಂಭಣೆಯಿಂದ ನಡೆದ ಬ್ರಹ್ಮರಥೋತ್ಸವ - BRAHMA RATHOTSAVA

ದೊಡ್ಡಬಳ್ಳಾಪುರದ ಪ್ರಸಿದ್ಧ ಘಾಟಿ ಸುಬ್ರಹ್ಮಣ್ಯ ದೇವಾಲಯದಲ್ಲಿ ಬ್ರಹ್ಮರಥೋತ್ಸವವು ವಿಜೃಂಭಣೆಯಿಂದ ನಡೆದಿದೆ.

brahma-rathotsava-celebrated-in-ghati-temple-at-doddaballapura
ದೊಡ್ಡಬಳ್ಳಾಪುರದ ಪ್ರಸಿದ್ಧ ಘಾಟಿ ದೇವಾಲಯದಲ್ಲಿ ವಿಜೃಂಭಣೆಯಿಂದ ನಡೆದ ಬ್ರಹ್ಮರಥೋತ್ಸವ (ETV Bharat)

By ETV Bharat Karnataka Team

Published : Jan 5, 2025, 8:10 PM IST

ದೊಡ್ಡಬಳ್ಳಾಪುರ :ಇಂದು ನಾಡಿನೆಲ್ಲೆಡೆ ಚಂಪಾ ಷಷ್ಠಿ ಹಿನ್ನೆಲೆ ಪ್ರಸಿದ್ಧ ಘಾಟಿ ದೇವಾಲಯದಲ್ಲಿ ವಿಜೃಂಭಣೆಯಿಂದ ಬ್ರಹ್ಮ ರಥೋತ್ಸವ ಜರುಗಿತು. ರಥವನ್ನು ಎಳೆಯುವಾಗ ಗರುಡ ರಥದ ಸುತ್ತಲೂ ಮೂರು ಸುತ್ತು ಸುತ್ತಿದ್ದು, ಎಲ್ಲರ ಗಮನ ಸೆಳೆಯಿತು.

ಇಂದು ನಾಡಿನೆಲ್ಲೆಡೆ ಚಂಪಾ ಷಷ್ಠಿ ಹಿನ್ನೆಲೆ ದೊಡ್ಡಬಳ್ಳಾಪುರದ ಪ್ರಸಿದ್ಧ ಘಾಟಿ ಸುಬ್ರಹ್ಮಣ್ಯ ದೇವಾಲಯದ ಬಳಿ ಬೆಳಗ್ಗೆಯಿಂದಲೂ ಸಾಗರೋಪಾದಿಯಲ್ಲಿ ಭಕ್ತಾದಿಗಳು ಆಗಮಿಸಿದ್ದರು. ಜೊತೆಗೆ ದೇವಾಲಯದ ಆಡಳಿತ ಮಂಡಳಿ ಕೂಡ ದೇವಸ್ಥಾನಕ್ಕೆ ವಿಶೇಷ ಅಲಂಕಾರ ಮಾಡಿತ್ತು. ಹಾಗಾಗಿ ಮುಂಜಾನೆ 4 ಗಂಟೆಯ ವೇಳೆಗೆ ದೇವರಿಗೆ ವಿಶೇಷ ಅಭಿಷೇಕ ನೆರವೇರಿಸಲಾಯಿತು.

ದೊಡ್ಡಬಳ್ಳಾಪುರದ ಪ್ರಸಿದ್ಧ ಘಾಟಿ ದೇವಾಲಯದಲ್ಲಿ ವಿಜೃಂಭಣೆಯಿಂದ ನಡೆದ ಬ್ರಹ್ಮರಥೋತ್ಸವ (ETV Bharat)

ಜೊತೆಗೆ ಪೂಜಾ ಕೈಂಕರ್ಯಗಳು ಸಹ ನೆರವೇರಿದವು. 12 ಗಂಟೆಯ ನಂತರ ರಥಬೀದಿಯಲ್ಲಿ ರಥವನ್ನ ಎಳೆಯಲಾಯಿತು. ಭಕ್ತಾದಿಗಳು ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ರಥಕ್ಕೆ ಬಾಳೆಹಣ್ಣನ್ನು ಎಸೆದು ಹರಕೆ ಕಟ್ಟಿಕೊಂಡರು. ದೇವಾಲಯದ ಸುತ್ತಮುತ್ತಲಿನ ನಾಗರ ಕಲ್ಲುಗಳಿಗೆ ಪೂಜೆ, ಅಭಿಷೇಕ ಮಾಡುವ ಮೂಲಕ ಭಕ್ತಾದಿಗಳು ನಾಗದೋಷ ಪರಿಹಾರಕ್ಕೆ‌ ಮುಂದಾದರು.

ಮಧ್ಯಾಹ್ನ 12-10 ರಿಂದ 12-20ಕ್ಕೆ ಶುಭ (ಮೀನ) ಲಗ್ನ ಅಭಿಜಿನ್ ಮುಹೂರ್ತದಲ್ಲಿ ಸುಬ್ರಹ್ಮಣ್ಯಸ್ವಾಮಿಯ ಬ್ರಹ್ಮರಥೋತ್ಸವಕ್ಕೆ ಉಸ್ತುವಾರಿ ಸಚಿವರು ಚಾಲನೆ ನೀಡಿದರು. ಇದೇ ಸಮಯಕ್ಕೆ ಗರುಡ ಪಕ್ಷಿ ದೇವಸ್ಥಾನ ಮತ್ತು ರಥವನ್ನ ಪ್ರದಕ್ಷಿಣೆ ಹಾಕಿ ಅಲ್ಲಿಂದ ತೆರಳಿತು. ಅನಂತರ ಭಕ್ತರು ಬಾಳೆಹಣ್ಣು, ದವನ ರಥಕ್ಕೆ ಎಸೆಯುವ ಮೂಲಕ ದೇವರ ಕೃಪೆಗೆ ಪಾತ್ರರಾದರು.

ಈ ಕುರಿತು ಅರ್ಚಕ ಸುಬ್ರಹ್ಮಣ್ಯ ಮಾತನಾಡಿ, ''ಈ ದಿನ ನಸುಕಿನ ಜಾವ 1:30ಕ್ಕೆ ದೇವಾಲಯ ತೆರೆದಿದ್ದೇವೆ. ಸ್ವಾಮಿಗೆ ಫಲಪಂಚಾಮೃತಭಿಷೇಕ, ರುದ್ರಾಭಿಷೇಕ, ಮಹಾನೈವೇದ್ಯ ಹಾಗೂ ಮಹಾಮಂಗಳಾರತಿ ಇತ್ಯಾದಿಗಳೆಲ್ಲ 2:30 ರಿಂದ 4:30ರ ವರೆಗೆ ಆಯಿತು. ನಂತರ ನಿರಂತರವಾಗಿ ದೇವರ ದರ್ಶನಕ್ಕೆ ಜನರನ್ನ ಬಿಡಲಾಯಿತು. ಜಿಲ್ಲಾಡಳಿತದಿಂದ ಎಲ್ಲಾ ರೀತಿ ವ್ಯವಸ್ಥೆ ಮಾಡಿದ್ದಾರೆ'' ಎಂದರು.

ಬೆಳಗ್ಗೆ 6 ಗಂಟೆಗೆ ಸರದಿ ಸಾಲಿನಲ್ಲಿ ನಿಂತ ಭಕ್ತರಿಗೆ ದೇವರ ದರ್ಶನ ಆಗುವಾಗ 1 ಗಂಟೆಯಾಗಿತ್ತು. ವಿಶೇಷ ದರ್ಶನ ಎಂದು ಹೇಳಿ ಓರ್ವರಿಂದ 500 ರೂ ಹಣ ಪಡೆದು ಗಂಟೆಗಟ್ಟಲೆ ಕಾಯಿಸಿ, ಸರಿಯಾಗಿ ದರ್ಶನ ಮಾಡಲೂ ಬಿಟ್ಟಿಲ್ಲ ಎಂದು ಕೆಲವರು ಆಕ್ರೋಶ ಹೊರಹಾಕಿದರು.

ದೇವಸ್ಥಾನ ಮತ್ತು ರಥವನ್ನ ಪ್ರದಕ್ಷಿಣೆ ಹಾಕಿದ ಗರುಡ ಪಕ್ಷಿ (ETV Bharat)

ಸರಿಯಾದ ಶೌಚಾಲಯ ವ್ಯವಸ್ಥೆ, ಪ್ರಸಾದದ ವ್ಯವಸ್ಥೆ ಕೂಡ ಮಾಡಿಲ್ಲ. ಕಾಟಾಚಾರಕ್ಕೆ ಸಿಬ್ಬಂದಿಯನ್ನ ನಿಯೋಜನೆ ಮಾಡಿದ್ದರು. ಆದರೆ ಅವರು ಬರುವ ವಿಐಪಿಗಳ ದರ್ಶನ ಮಾಡಿಸಲು ಸೀಮಿತರಾದರು. ಸೀನಿಯರ್ ಸಿಟಿಜನ್ ಕೂಡ ಗಂಟೆಗಟ್ಟಲೆ ಸರದಿ ಸಾಲಿನಲ್ಲಿ ನಿಂತು ದರ್ಶನ ಮಾಡಬೇಕಾಯಿತು. ಅವರಿಗೆ ಬೇರೆ ಮಾರ್ಗ ಮಾಡದೆ ದೇವಾಲಯ ಆಡಳಿತ ಮಂಡಳಿ ದಿವ್ಯ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದರು.

ರಥೋತ್ಸವಕ್ಕೆ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಸೇರಿದಂತೆ ರಾಜ್ಯದ ಮೂಲೆ ಮೂಲೆಗಳಿಂದ ಜನರು ಆಗಮಿಸಿದ್ದರು. ರಥೋತ್ಸವದಲ್ಲಿ ಭಾಗಿಯಾಗಿ ದೇವರ ಕೃಪೆಗೆ ಪಾತ್ರರಾದರು.

ಕಾರ್ಯಕ್ರಮದಲ್ಲಿ ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಶಾಂತಕುಮಾರ್, ಜಿಲ್ಲಾಧಿಕಾರಿ ಡಾ. ಶಿವಶಂಕರ್ ಎನ್, ಜಿ. ಪಂ ಸಿಇಒ ಡಾ. ಕೆ. ಎನ್ ಅನುರಾಧ, ಎಸ್​ಪಿ ಸಿ ಕೆ ಬಾಬಾ, ದೊಡ್ಡಬಳ್ಳಾಪುರ ತಹಶೀಲ್ದಾರ್ ವಿದ್ಯಾ ವಿಭಾ ರಾಥೋಡ್, ಇಒ ಮುನಿರಾಜು, ಮುಜರಾಯಿ ಇಲಾಖೆ ತಹಶೀಲ್ದಾರ್, ಜಿಲ್ಲಾ‌ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರು ಭಾಗವಹಿಸಿದ್ದರು.

ಇದನ್ನೂ ಓದಿ :ಬೆಂಗಳೂರು: ಇಸ್ಕಾನ್‌ನಿಂದ ಭವ್ಯ ಬ್ರಹ್ಮ ರಥೋತ್ಸವ - ISCON Brahma Rathotsava - ISCON BRAHMA RATHOTSAVA

ABOUT THE AUTHOR

...view details