ಕರ್ನಾಟಕ

karnataka

ETV Bharat / state

ಸರ್ಕಾರಿ ನೌಕರರು, IT ಪಾವತಿದಾರರ BPL ಕಾರ್ಡ್ ಮಾತ್ರ ರದ್ದು, ಅರ್ಹರ ಕಾರ್ಡ್​ ರದ್ದಾಗಿದ್ದರೆ ತಕ್ಷಣ ವಾಪಸ್ ನೀಡಿ: ಸಿಎಂ

ಅನರ್ಹರ ಪಡಿತರ ಚೀಟಿ ರದ್ದು ನಿರ್ಧಾರ ವಿವಾದಕ್ಕೆ ಗುರಿಯಾದ ಬೆನ್ನಲ್ಲೇ ಸಿಎಂ ಸಿದ್ದರಾಮಮಯ್ಯ ಮಧ್ಯಪ್ರವೇಶಿಸಿ, ಅರ್ಹ ಬಿಪಿಎಲ್ ಕಾರ್ಡ್ ರದ್ದಾಗಿದ್ದರೆ ತಕ್ಷಣವೇ ವಾಪಸ್ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಸಿಎಂ ಸಿದ್ದರಾಮಯ್ಯ  CM Siddaramaiah BPL Card ಬಿಪಿಎಲ್ ಕಾರ್ಡ್
ಸಿಎಂ ಸಿದ್ದರಾಮಯ್ಯ (ETV Bharat)

By ETV Bharat Karnataka Team

Published : Nov 21, 2024, 8:09 AM IST

ಬೆಂಗಳೂರು:ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿರುವವರ ಪಡಿತರ ಚೀಟಿ (ಬಿಪಿಎಲ್ ಕಾರ್ಡ್)​ ರದ್ದುಗೊಳಿಸುವಿಕೆ ವಿವಾದಕ್ಕೆ ಗುರಿಯಾಗಿದೆ. ಈ ಬೆನ್ನಲ್ಲೇ ಸರ್ಕಾರ ಎಚ್ಚೆತ್ತುಕೊಂಡಿದೆ. ಸರ್ಕಾರಿ ನೌಕರರು ಮತ್ತು ಆದಾಯ ತೆರಿಗೆ(IT) ಪಾವತಿಸುವವರನ್ನು ಹೊರತುಪಡಿಸಿ ಉಳಿದಂತೆ ಯಾರೊಬ್ಬರ ಪಡಿತರ ಚೀಟಿಯನ್ನೂ ರದ್ದು ಮಾಡದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಹಾರ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಸರ್ಕಾರಿ ನೌಕರರು ಮತ್ತು ಆದಾಯ ತೆರಿಗೆ ಪಾವತಿದಾರರನ್ನು ಬಿಟ್ಟು ಉಳಿದ ಯಾವುದೇ ಕುಟುಂಬದವರ ಪಡಿತರ ಚೀಟಿ ರದ್ದಾಗಿದ್ದರೆ ತಕ್ಷಣ ವಾಪಸ್ ನೀಡುವಂತೆ ಮುಖ್ಯಮಂತ್ರಿ ಆದೇಶಿಸಿದ್ದಾರೆ. ಬಡ ಕುಟುಂಗಳವರ ಪಡಿತರ ಚೀಟಿಗಳನ್ನು ವಿನಾಕಾರಣ ರದ್ದು ಮಾಡಿದರೆ ಆಹಾರ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ.

ಅನರ್ಹ ಪಡಿತರ ಕಾರ್ಡ್​ಗಳನ್ನು ಮಾತ್ರ ರದ್ದುಪಡಿಸಲಾಗುತ್ತಿದೆ ಎಂದು ಈ ಮೊದಲು ಸಿಎಂ ಭರವಸೆ ನೀಡಿದ್ದರು. ಆದರೂ ಕೆಲವೆಡೆ ಬಿಪಿಎಲ್ ಕಾರ್ಡ್ ರದ್ದಾಗಿರುವುದು ಮತ್ತು ಎಪಿಎಲ್​ಗೆ ವರ್ಗಾವಣೆ ಆಗಿರುವುದು ತಿಳಿದು ಬಂದಿದ್ದು, ಸರ್ಕಾರವನ್ನು ಮುಜುಗರಕ್ಕೀಡು ಮಾಡಿದೆ.

ಈವರೆಗೆ ಎಷ್ಟು ಕಾರ್ಡ್ ರದ್ದು ಮಾಡಲಾಗಿದೆ?:ಆಹಾರ ಇಲಾಖೆಯ ಅಂಕಿಅಂಶದಂತೆ, ರಾಜ್ಯದಲ್ಲಿ ಅಂತ್ಯೋದಯ, ಆದ್ಯತಾ ಬಿಪಿಎಲ್ ಸೇರಿ ಒಟ್ಟು 1,25,74,521 ಕಾರ್ಡುಗಳಿವೆ. ಸುಮಾರು 25,47,946 ಎಪಿಎಲ್ ಕಾರ್ಡ್​ಗಳಿವೆ. ಈ ಪೈಕಿ ಅಕ್ಟೋಬರ್​​ವರೆಗೆ ಸುಮಾರು 3,63,664 ಬಿಪಿಎಲ್ ಕಾರ್ಡುಗಳನ್ನು ರದ್ದುಪಡಿಸಲಾಗಿದೆ. ಇನ್ನೂ ಸುಮಾರು 3.97 ಲಕ್ಷ ಅನರ್ಹ ಬಿಪಿಎಲ್ ಕಾರ್ಡ್ ರದ್ದು ಮಾಡುವ ಪ್ರಕ್ರಿಯೆ ಚಾಲನೆಯಲ್ಲಿದೆ.‌

ಆದಾಯ ತೆರಿಗೆ ಪಾವತಿ ಮಾಡುವವರ ಸುಮಾರು 50,462 ಪಡಿತರ ಚೀಟಿ, ಸರ್ಕಾರಿ ನೌಕರರ ಸುಮಾರು 2,964 ಬಿಪಿಎಲ್ ಕಾರ್ಡ್ ಮತ್ತು ಆದಾಯ ಮಿತಿ ಅಧಿಕ ಇರುವವರ 34,591 ಬಿಪಿಎಲ್ ಕಾರ್ಡುಗಳನ್ನು ರದ್ದುಪಡಿಸಲಾಗಿದೆ ಎಂದು ಆಹಾರ ಇಲಾಖೆ ಮಾಹಿತಿ ನೀಡಿದೆ. ಹಾಗೆಯೇ ಕೆವೈಸಿ ಮಾಡದೇ ಇರುವ ಹಿನ್ನೆಲೆಯಲ್ಲಿ 13,44,072 ಅನರ್ಹ ಬಿಪಿಎಲ್ ಕುಟುಂಬ ಸದಸ್ಯರನ್ನು ಪತ್ತೆ ಮಾಡಲಾಗಿದ್ದು, ಈ ಪೈಕಿ 2,06,202 ಸದಸ್ಯರ ಹೆಸರನ್ನು ಕಾರ್ಡ್​ನಿಂದ ರದ್ದುಪಡಿಸಲಾಗಿದೆ.

ಅರ್ಹರ ಬಿಪಿಎಲ್ ಕಾರ್ಡ್ ಯಾವುದೇ ಕಾರಣಕ್ಕೂ ರದ್ದು ಮಾಡಲ್ಲ. ತೆರಿಗೆ ಪಾವತಿದಾರರು, ಸರ್ಕಾರಿ ನೌಕರರ ಬಿಪಿಎಲ್ ಕಾರ್ಡ್​ಗಳನ್ನು ಎಪಿಎಲ್​​ಗೆ ಬದಲಾವಣೆ ಮಾಡಲಾಗಿದೆ. ಎಪಿಎಲ್, ಬಿಪಿಎಲ್ ಕಾರ್ಡ್ ರದ್ದು ಮಾಡುವುದಿಲ್ಲ. ಬಿಪಿಎಲ್ ಕಾರ್ಡ್ ಸಮಗ್ರವಾಗಿ ಪರಿಷ್ಕರಣೆ ಮಾಡುವಂತೆ ಮತ್ತು ಅರ್ಹರಲ್ಲದವರನ್ನು ಎಪಿಎಲ್​​ಗೆ ಸೇರಿಸಲು ಸಿಎಂ ಸೂಚಿಸಿದ್ದಾರೆ. ಪರಿಷ್ಕರಣೆ ವೇಳೆ ಕೈತಪ್ಪಿ ಹೋದ್ರೆ ಬಿಪಿಎಲ್ ಕಾರ್ಡ್ ಪಡೆಯಲು ಮತ್ತೊಮ್ಮೆ ಅವಕಾಶ ನೀಡಲಾಗುತ್ತದೆ ಎಂದು ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ತಿಳಿಸಿದ್ದರು.

ಇದನ್ನೂ ಓದಿ:ರಾಜ್ಯದಲ್ಲಿ ಪಡಿತರ ಚೀಟಿ ಗದ್ದಲ: ಬಿಪಿಎಲ್​ ಕಾರ್ಡ್​ಗೆ ಯಾರು ಅನರ್ಹರು, ಈವರೆಗೆ ರದ್ದಾಗಿದ್ದೆಷ್ಟು? ಸಮಗ್ರ ವರದಿ

ABOUT THE AUTHOR

...view details